ಅರೇಹಳ್ಳಿ: ಅರೇಹಳ್ಳಿ ತಂಡದಲ್ಲಿ 23 ಸ್ವಯಂ ಸೇವಕರಿದ್ದು ಪ್ರತಿ ತಿಂಗಳಿನಲ್ಲಿ ಸಮಾಜಮುಖಿ ಕಾರ್ಯಗಳನ್ನು ನಿರ್ವಹಿಸಿಕೊಂಡು ಬರಲಾಗುತ್ತಿದೆ ಎಂದು ಧರ್ಮಸ್ಥಳ ಸ್ವಸಹಾಯ ಸಂಘದ ಅರೇಹಳ್ಳಿ ಘಟಕದ ಮೇಲ್ವಿಚಾರಕಿ ಲೀಲಾವತಿ ಹೇಳಿದರು.
ಬೇಲೂರು ತಾಲೂಕು ಅರೇಹಳ್ಳಿ ಗ್ರಾಪಂ ವ್ಯಾಪ್ತಿಯ ಲಿಂಗಾಪುರ ವಾರ್ಡ್ ನಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ಧರ್ಮಸ್ಥಳ ಸ್ವಸಹಾಯ ಸಂಘದ ನಂದಗೋಡನಹಳ್ಳಿಯ ಶೌರ್ಯ ವಿಪತ್ತು ನಿರ್ವಹಣಾ ಘಟಕದ ವತಿಯಿಂದ ಏರ್ಪಡಿಸಲಾಗಿದ್ದ ಸ್ವಚ್ಛತಾ ಕಾರ್ಯವನ್ನು ಉದ್ದೇಶಿಸಿ ಮಾತನಾಡಿದ ಅವರು, ಶೌರ್ಯ ತಂಡದ ನೆರವಿನಿಂದ ನಂದಗೋಡನಹಳ್ಳಿ ಸರಕಾರಿ ಶಾಲೆಗೆ ಬಣ್ಣ ಹಚ್ಚಿರುವುದು, ಧ್ವಜ ಸ್ತಂಭದ ನಿರ್ಮಾಣ ಹಾಗೂ ಶಾಲೆಗೆ ಬೇಕಾದ ಪರಿಕರಗಳನ್ನು ಒದಗಿಸಲಾಗಿದೆ. ನೈಸರ್ಗಿಕ ವಿಪತ್ತು ಸಂದರ್ಭಗಳಲ್ಲಿ ಜೀವನ ನಡೆಸುವುದು ಕಷ್ಟ.
ಈ ನಿಟ್ಟಿನಲ್ಲಿ ಡಾ.ವೀರೇಂದ್ರ ಹೆಗ್ಗಡೆ ಶೌರ್ಯ ಘಟಕವನ್ನು ರಚಿಸುವುದರ ಮೂಲಕ ಸದಸ್ಯರಿಗೆ ವರ್ಷಕ್ಕೊಮ್ಮೆ ತರಬೇತಿ ನೀಡಿ ತಿಂಗಳಿಗೊಮ್ಮೆಯಾದರೂ ಸ್ವಯಂ ಸೇವಕರು ಕೆಲಸವನ್ನು ನಿರ್ವಹಿಸಿಕೊಂಡು ಬರುತ್ತಿದ್ದಾರೆ. ಅಂತೆಯೆ ರುದ್ರ ಭೂಮಿಯ ಸುತ್ತ ಹೂಗಿಡಗಳನ್ನು ನೆಟ್ಟು ಸ್ವಚ್ಛತೆಯಿಂದಿಟ್ಟುಕೊಳ್ಳಲು ಸಾರ್ವಜನಿಕರು, ಗ್ರಾಮಾಡಳಿತ ಮಂಡಳಿ ಸದಸ್ಯರು ಸೂಕ್ತವಾದ ನೆರವನ್ನು ನೀಡಬೇಕು ಎಂದರು.

ಈ ವೇಳೆ ಶೌರ್ಯ ತಂಡದ ನಾಯಕ ಉಪೇಂದ್ರ, ಒಕ್ಕೂಟದ ಅಧ್ಯಕ್ಷ ಶಶಿ ಕುಮಾರ್, ಉಪಾಧ್ಯಕ್ಷ ಗಂಗಣ್ಣ, ಪೊಲೀಸ್ ಉಪನಿರೀಕ್ಷಕಿ ಶೋಭಾ ಭರಮಣ್ಣನವರ, ಸೇವಾ ಪ್ರತಿನಿಧಿ ಉಷಾ, ಗ್ರಾಪಂ ಉಪಾಧ್ಯಕ್ಷ ವಿಘ್ನೇಶ್, ಸದಸ್ಯೆ ಶಶಿ ಕುಮಾರಿ, ಸತೀಶ್ ಶೆಟ್ಟಿ, ಕೇಶವ, ಪ್ರಭಾಕರ್, ಶಂಕರ್, ಕೇಬಲ್ ಜನಾರ್ಧನ್ ಸೇರಿದಂತೆ ವಿನಾಯಕ ಬಳಗದ ಇನ್ನಿತರ ಸದಸ್ಯರು ಭಾಗವಹಿಸಿದ್ದರು.