ಹಾಸನ : ಬೇಸಿಗೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಕುಡಿಯುವ ನೀರಿಗೆ ತೊಂದರೆಯಾಗದAತೆ ಹಾಗೂ ಮಕ್ಕಳಿಗೆ ಪರೀಕ್ಷೆ ನಡೆಯುತ್ತಿರುವುದರಿಂದ ವಿದ್ಯುತ್ ಸರಬರಾಜಿನಲ್ಲಿ ಅಡಚಣೆಯಾಗದಂತೆ ಎಚ್ಚರವಹಿಸಿ ವಿದ್ಯುತ್ ಕಡಿತಗೊಳಿಸದಂತೆ ನಿಗಾವಹಿಸಲು ಅಧಿಕಾರಿಗಳಿಗೆ ಸಹಕಾರ ಸಚಿವರು ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿಂದು 3ನೇ ತ್ರೈಮಾಸಿಕ ಕೆ.ಡಿ.ಪಿ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು ಜಾನುವಾರುಗಳಿಗೆ ಬೇಸಿಗೆಯಲ್ಲಿ ಬರುವ ಖಾಯಿಲೆಗಳ ಬಗ್ಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದರ ಜೊತೆಗೆ ಔಷಧಿಗಳ ಕೊರತೆಯಾಗದಂತೆ ದಾಸ್ತಾನು ಇರುವಂತೆ ನೋಡಿಕೊಳ್ಳಲು ಪಶುಪಾಲನಾ ಇಲಾಖೆಯ ಉಪ ನಿರ್ದೇಶಕರಿಗೆ ಸೂಚಿಸಿದರಲ್ಲದೆ, ರೈತರಿಂದ ಯಾವುದೇ ದೂರುಗಳು ಬರದಂತೆ ನೋಡಿಕೊಳ್ಳಿ ಎಂದು ನಿರ್ದೇಶಿಸಿದರು.
ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡುವ ನಿಟ್ಟಿನಲ್ಲಿ ಮೂಲಭೂತ ಸೌಕರ್ಯಗಳಾದ ಕಟ್ಟಡ, ಶೌಚಾಲಯ ಹಾಗೂ ಕುಡಿಯುವ ನೀರಿಗೆ ಹೆಚ್ಚಿನ ಗಮನ ಹರಿಸುವಂತೆ ನಿರ್ದೇಶನ ನೀಡಿದರಲ್ಲದೆ, ಕಟ್ಟಡಗಳ ದುರಸ್ತಿಗೆ ಕ್ರಮ ವಹಿಸುವಂತೆ, ದುರಸ್ತಿ ಮಾಡಿದರು ಪ್ರಯೋಜನಕ್ಕೆ ಬರುವುದಿಲ್ಲ ಎಂದೆನಿಸಿದರೆ ಅವುಗಳನ್ನು ಡೆಮಾಲಿಶ್ ಮಾಡಿ ಹೊಸ ಕಟ್ಟಡ ನಿರ್ಮಾಣಕ್ಕೆ ಅವಕಾಶವಿದೆ.
ಮಕ್ಕಳಿಗೆ ಎಸ್.ಎಸ್.ಎಲ್.ಸಿ ಹಾಗೂ ದ್ವಿತೀಯ ಪಿ.ಯು.ಸಿ ಮಕ್ಕಳ ಬಗ್ಗೆ ನಿಗಾ ವಹಿಸುವುದರ ಜೊತೆಗೆ 8 ಮತ್ತು 9 ನೇ ತರಗತಿ ಹಂತದಿಂದಲೆ ಗಮನಹರಿಸಿ ಮಕ್ಕಳು ಶಾಲೆಗೆ ಗೈರುಹಾಜರಾಗದಂತೆ ನಿಗಾವಹಿಸಬೇಕು ಶಿಕ್ಷಕರು ಮಕ್ಕಳ ಬಗ್ಗೆ ನಿರಂತರವಾಗಿ ಗಮನಹರಿಸಿ ಯಾವ ವಿಷಯದಲ್ಲಿ ಹಿಂದೆ ಇದ್ದಾರೆ ಆ ಕುರಿತು ವಿಶೇಷ ತರಗತಿಗಳನ್ನು ನಡೆಸಿ ಪ್ರಾಥಮಿಕ ಹಂತದಲ್ಲಿಯೇ ವಿದ್ಯಾಭ್ಯಾಸಕ್ಕೆ ಭದ್ರ ಬುನಾದಿ ಹಾಕಿದರೆ ಮಕ್ಕಳು ಮುಂದೆ ಉತ್ತಮ ವಿದ್ಯಾಭ್ಯಾಸ ಮುಂದುವರೆಸುತ್ತಾರೆ ಈ ನಿಟ್ಟಿನಲ್ಲಿ ವಿದ್ಯಾಭ್ಯಾಸಕ್ಕೆ ಒತ್ತು ನೀಡಬೇಕು ಶಾಲಾ ವಾತಾವರಣವನ್ನು ಕಲಿಕೆಗೆ ಪೂರಕವಾಗಿಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಹಣ ಸಂಪಾದನೆಗಾಗಿ ಶಾಲೆ ನಡೆಸುತ್ತಿರುವುದು ಕಂಡು ಬರುತ್ತಿದೆ. ಅನುದಾನಿತ ಶಾಲೆಗಳಲ್ಲಿ ಬೋಗಸ್ ಹಾಜರಾತಿ ನಡೆಯುತ್ತಿದೆ ಎಂದು ದೂರು ಬಂದಲ್ಲಿ ಪರಿಶೀಲಿಸಿ ಸರ್ಕಾರದ ಹಣ ದುರುಪಯೋಗವಾಗಿರುವುದು ಕಂಡು ಬಂದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಈ ವೇಳೆ ಸಂಸದ ಶ್ರೇಯಸ್ ಪಟೇಲ್, ಶಾಸಕರಾದ ಸ್ವರೂಪ್ ಪ್ರಕಾಶ್, ಜಿಲ್ಲಾಧಿಕಾರಿ ಸತ್ಯಭಾಮ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪೂರ್ಣಿಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತ ಉಪಸ್ಥಿತರಿದ್ದರು.
ಕೆ.ಡಿ.ಪಿ. ನಾಮ ನಿರ್ದೇಶಿತ ಸದಸ್ಯರುಗಳಾದ ಎಂ.ಎ.ಗೋಪಾಲಸ್ವಾಮಿ, ಸುಲೋಚನಾ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.