ಕೊಟ್ಟಿಗೆಹಾರ : ಕಂದಾಯ ಇಲಾಖೆ ನಿರ್ಲಕ್ಷ್ಯದಿಂದ ಮೂರು ವರ್ಷಗಳಿಂದ 25 ಮನೆಗಳಿಗೆ ಹಕ್ಕುಪತ್ರ ನೀಡದೆ ವಿಳಂಬ ಮಾಡುತ್ತಿರುವುದಕ್ಕೆ ವಿರೋಧಿಸಿ ಮೂಡಿಗೆರೆ ತಾಲೂಕಿನ ನಿಡುವಾಳೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ನವೀನ್ ಪೂರ್ಣ ಪ್ರತಿಭಟನೆ ನಡೆಸಿದ್ದಾರೆ.
ಹಕ್ಕುಪತ್ರ ನೀಡಲು ನಿರ್ಲಕ್ಷ್ಯ ತೋರುತ್ತಿರುವ ಸರ್ಕಾರದ ವಿರುದ್ಧ ಅರೆಬೆತ್ತಲೆ ಪಾದಯಾತ್ರೆ ನಡೆಸಿದ ನವೀನ್, 25 ಮನೆಗಳ ಮಣ್ಣನ್ನು ಪುಟ್ಟಿಯಲ್ಲಿ ತುಂಬಿಕೊಂಡು ತಲೆಯ ಮೇಲೆ ಹೊತ್ತುಕೊಂಡು, ನಿಡುವಾಳೆಯಿಂದ ಮೂಡಿಗೆರೆ ತಹಶೀಲ್ದಾರ್ ಕಚೇರಿವರೆಗೆ ಪಾದಯಾತ್ರೆ ನಡೆಸಿದ್ದಾರೆ.
ಹಕ್ಕುಪತ್ರಕ್ಕಾಗಿ ಏಕಾಂಗಿಯಾಗಿ ಹೋರಾಟ
ನಿದಾನವಾಗಿ ನಡೆಯುತ್ತಿರುವ ಭೂಮಿಯ ಹಕ್ಕುಪತ್ರ ವಿತರಣಾ ಪ್ರಕ್ರಿಯೆಗಾಗಿ ಸ್ಥಳೀಯ ಗ್ರಾಮಸ್ಥರು ಹಲವು ಬಾರಿ ಮನವಿ ಸಲ್ಲಿಸಿದ್ದರೂ, ಕಂದಾಯ ಇಲಾಖೆ ಸ್ಪಂದಿಸಿಲ್ಲ. 50ಕ್ಕೂ ಹೆಚ್ಚು ಮನೆಗಳಿಗೆ ಹಕ್ಕುಪತ್ರ ನೀಡಬೇಕಾಗಿದ್ದರೂ, ಕೇವಲ 25 ಮನೆಗಳಿಗೆ ಮಾತ್ರ ಮಂಜೂರು ಮಾಡಲಾಗಿದೆ. ಉಳಿದ ಮನೆಗಳಿಗೆ ಯಾಕೆ ಹಕ್ಕುಪತ್ರ ನೀಡಿಲ್ಲ? ಎಂಬ ಪ್ರಶ್ನೆ ಉದ್ಭವಿಸಿದೆ.
“ಈ ಮಣ್ಣಿಗೆ ಹಕ್ಕುಪತ್ರ ಸಿಗುತ್ತದಾ?” – ನವೀನ್ ಗಂಭೀರ ಪ್ರಶ್ನೆ!
“ನಾನು ಹೊತ್ತು ತಂದಿರುವ ಮಣ್ಣಿನಲ್ಲಿ ಏನಾದರೂ ತೊಂದರೆ ಇದೆಯಾ? ಈ ಮಣ್ಣಿಗೆ ಹಕ್ಕುಪತ್ರ ಕೊಡಲು ಸಾಧ್ಯವೇ? ಇಲ್ಲವೇ?” ಎಂದು ನವೀನ್ ತಹಶೀಲ್ದಾರ್ ಕಚೇರಿಗೆ ತೆರಳಿ ಅಧಿಕಾರಿಗಳಿಗೆ ಪ್ರಶ್ನೆ ಮಾಡಲು ನಿರ್ಧರಿಸಿದ್ದಾರೆ.
ಸರ್ಕಾರಕ್ಕೆ ಎಚ್ಚರಿಕೆ!
ಜಿಲ್ಲಾಡಳಿತ ಹಾಗೂ ಸರ್ಕಾರದ ನಿರ್ಲಕ್ಷ್ಯತೆಯನ್ನು ಈ ಪ್ರತಿಭಟನೆಯ ಮೂಲಕ ಸಮಾಜಕ್ಕೆ ತಲುಪಿಸಲು ನವೀನ್ ಪ್ರಯತ್ನಿಸುತ್ತಿದ್ದಾರೆ. ಹಕ್ಕುಪತ್ರಕ್ಕಾಗಿ ಗ್ರಾಮಸ್ಥರ ಹೋರಾಟ ಮುಂದುವರಿಯಲಿದ್ದು, ಸರ್ಕಾರ ಸೂಕ್ತ ಕ್ರಮ ಕೈಗೊಂಡು ತಕ್ಷಣ ಸಮಸ್ಯೆಯನ್ನು ಬಗೆಹರಿಸಬೇಕಾಗಿದೆ.
ಸ್ಥಳಕ್ಕೆ ತಹಶೀಲ್ದಾರ್ ಬರದೇ ಇರುವುದು ಜನರ ಆಕ್ರೋಶ ಹೆಚ್ಚಿಸಿದೆ
ಗ್ರಾಮಸ್ಥರ ನಿಗಾ ಇದೀಗ ಸರ್ಕಾರದ ನಿರ್ಧಾರಗಳತ್ತ ಹರಿಯುತ್ತಿದ್ದು, ಈ ಪ್ರತಿಭಟನೆಯಿಂದ ಸರ್ಕಾರ ಎಚ್ಚೆತ್ತುಕೊಂಡು ಶೀಘ್ರದಲ್ಲಿ ನಿರ್ಧಾರ ಕೈಗೊಳ್ಳುತ್ತದೆಯೇ ಎಂಬುದು ಕುತೂಹಲ ಮೂಡಿಸಿದೆ.