ಚಿಕ್ಕಮಗಳೂರು: ಮುಖ್ಯ ಮಂತ್ರಿ ಸಿದ್ಧರಾಮಯ್ಯ ಅವರು ಶುಕ್ರವಾರ ಮಂಡಿಸಿರುವ ರಾಜ್ಯ ಬಜೆಟ್ ಮುಸ್ಲಿಮರ ತುಷ್ಠೀಕರಣದ ಬಜೆಟ್ ಆಗಿದೆಯಲ್ಲದೆ, ಬಜೆಟ್ ಮೂಲಕ ರಾಜ್ಯದ ಜನರ ಮೂಗಿಗೆ ತುಪ್ಪ ಸವರಿದ್ದಾರೆ ಎಂದು ಜಿಲ್ಲಾ ಬಿಜೆಪಿ ಟೀಕಿಸಿದೆ ಎಂದು ಪಕ್ಷದ ವಕ್ತಾರ ಹಿರೇಮಗಳೂರು ಪುಟ್ಟಸ್ವಾಮಿ ತಿಳಿಸಿದ್ದಾರೆ.
ಕಳೆದ ವರ್ಷ ಮಂಡಿಸಿದ್ದ 3.71 ಲಕ್ಷ ರೂ.ಗಳ ಬಜೆಟ್‌ನಲ್ಲಿ ನೀಡಿದ್ದ ಭರವಸೆಗಳಲ್ಲಿ ಶೇ.5೦ ರಷ್ಟುನ್ನು ಅನುಷ್ಠಾನಕ್ಕೆ ತರುವಲ್ಲಿ ವಿಫಲವಾಗಿರುವ ರಾಜ್ಯ ಸರ್ಕಾರ, ಈ ಬಾರಿ 4.9 ಲಕ್ಷ ಕೋಟಿ ರೂ.ಗಳ ಗಾತ್ರದ ಬಜೆಟ್‌ನಲ್ಲಿ ಹಲವು ಭರವಸೆಗಳೊಂದಿಗೆ ಜನರ ಮೂಗಿಗೆ ತುಪ್ಪ ಸವರಿದ್ದಾರೆ.ಅದೊಂದು ಹುಸಿ ಬಜೆಟ್ ಆಗಿದೆ ಎಂದು ಟೀಕಿಸಿದ್ದಾರೆ.
ವಕ್ಫ್ ಆಸ್ತಿ ರಕ್ಷಣೆಗೆ 150 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ಮುಸ್ಲಿಮರ ಶಿಕ್ಷಣಕ್ಕೆ ಹೆಚ್ಚಿನ ಅನುದಾನವನ್ನು ತೆಗೆದಿಡಲಾಗಿದೆ. ಗುತ್ತಿಗೆಯಲ್ಲಿ ಶೇ.4 ಮೀಸಲು ಮತ್ತು ಕೆಐಎಡಿಬಿಯಲ್ಲಿ ಶೇ.2೦ ರಷ್ಟು ಮೀಸಲಾತಿಯನ್ನು ಒದಗಿಸಿರುವುದು ಸೇರಿದಂತೆ ಮುಸ್ಲಿಮರಿಗೆ ಹೆಚ್ಚಿನ ಒತ್ತು ನೀಡುವ ಮೂಲಕ ತನ್ನ ತುಷ್ಠೀಕರಣ ನೀತಿಯನ್ನು ಮುಖ್ಯ ಮಂತ್ರಿಯವರು ಸಾಬೀತುಪಡಿಸಿದ್ದಾರೆ ಎಂದು ಹೇಳಿದ್ದಾರೆ.
ಬಜೆಟ್‌ಗೂ ಮುನ್ನ ಶಾಸಕರ ವೇತನ ಮತ್ತು ಇತರೆ ಸೌಲಭ್ಯಗಳನ್ನು ಶೇ.5೦ ರಷ್ಟು ಹೆಚ್ಚಿಸಿಕೊಂಡಿರುವ ಸರ್ಕಾರ, ಈ ಬಾರಿ ಬಜೆಟ್‌ನಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಕೇವಲ ಒಂದು ಸಾವಿರ ಮತ್ತು ಸಹಾಯಕಿಯರಿಗೆ 75೦ ರೂ.ಗಳ ವೇತನ ಹೆಚ್ಚಿಸುವ ಮೂಲಕ ಅವರುಗಳ ನಿರೀಕ್ಷೆ ಮತ್ತು ಬೇಡಿಕೆಯನ್ನು ಹುಸಿಗೊಳಿಸಲಾಗಿದೆ. ಅವರುಗಳಿಗೆ ಕನಿಷ್ಟ 3 ಸಾವಿರ ಮತ್ತು 2 ಸಾವಿರ ರೂ.ಗಳನ್ನು ಹೆಚ್ಚಿಸಬೇಕಿತ್ತು ಎಂದು ತಿಳಿಸಿದ್ದಾರೆ.
ಗ್ಯಾರಂಟಿಗಳಿಗೆ ಅನುದಾನ ಪೂರೈಕೆಗಾಗಿ ಮದ್ಯದ ದರ, ಹಾಲಿನ ದರ ಸೇರಿದಂತೆ ವಿವಿಧ ಆಹಾರ ಸಾಮಾಗ್ರಿಗಳ ದರಗಳನ್ನು ಹೆಚ್ಚಿಸಲು ಹೊರಟಿರುವ ರಾಜ್ಯ ಸರ್ಕಾರದ ಕ್ರಮವನ್ನು ಜಿಲ್ಲಾ ಬಿಜೆಪಿ ಖಂಡಿಸುತ್ತದೆ ಎಂದಿರುವ ಅವರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗಾಗಿ ಸಮಾಜ ಕಲ್ಯಾಣ ಇಲಾಖೆಗೆ ಈ ಬಾರಿ ಮೂಲಕ ಈ ಬಾರಿ ನಿಗದಿಸಿರುವ ಅನುದಾನದಲ್ಲಿ ಗ್ಯಾರಂಟಿಗಳಿಗೆ ಬಳಕೆ ಮಾಡುವುದರ ವಿರುದ್ಧ ಬಿಜೆಪಿ ರಾಜ್ಯವ್ಯಾಪಿ ಪ್ರತಿಭಟಿಸಲಿದೆ ಎಂದಿದ್ದಾರೆ.
ಜಿಲ್ಲೆಯ ಜ್ವಲಂತ ಸಮಸ್ಯೆಯಾಗಿರುವ ಕಾಡಾನೆಗಳ ದಾಳಿ ನಿಯಂತ್ರಣಕ್ಕೆ ಸ್ಪಷ್ಟವಾದ ಘೋಷಣೆ ಮಾಡದಿರುವುದು, ನನೆಗುದಿಗೆ ಬಿದ್ದಿರುವ ಮಳಲೂರು ಏತ ನೀರಾವರಿ ಯೋಜನೆ ಕಾಮಗಾರಿ ಪುನಾರಂಭಿಸಲು ಅನುದಾನ ನೀಡದಿರುವುದು, ಜಿಲ್ಲೆಯ ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ಯಾವುದೇ ಕಾರ್ಯ ಯೋಜನೆ ಘೋಷಿಸದಿರುವುದನ್ನು ಬಿಜೆಪಿ ಖಂಡಿಸುತ್ತದೆ ಎಂದು ಹೇಳಿದ್ದಾರೆ.
- ಸುರೇಶ್ ಎನ್.