ತುಮಕೂರು- ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸತತ 16ನೇ ರಾಜ್ಯ ಬಜೆಟ್ ಮಂಡಿಸಿದ ಖ್ಯಾತಿಗೆ ಪಾತ್ರವಾಗಿರುವುದಕ್ಕೆ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷರಾದ ಪಿ.ಆರ್. ಕುರಂದವಾಡ ಅವರು ಧನ್ಯವಾದ ಸಲ್ಲಿಸಿದ್ದಾರೆ.
2025-26 ನೇ ಸಾಲಿನ ಬಜೆಟ್‌ನಲ್ಲಿ ಪ್ರಮುಖವಾಗಿ ಕೈಗಾರಿಕೆಗಳಿಗೆ ಹೂಡಿಕೆ ಹೆಚ್ಚಿಸಲು 13,692 ಕೋಟಿ ರೂ. ಸಹಾಯಧನ, ಇ -ಖಾತಾ ಅಭಿಯಾನಕ್ಕೆ ಆದ್ಯತೆ, 2025 -30 ಹೊಸ ಕೈಗಾರಿಕಾ ನೀತಿಯ ಜಾರಿ ಹಾಗೂ ಬಂಡವಾಳ ಹೂಡಿಕೆಗೆ ಉತ್ತೇಜನ, ಎತ್ತಿನಹೊಳೆ ಯೋಜನೆಯಿಂದ ತುಮಕೂರಿನ 45 ಕೆರೆ ಹಾಗೂ ಕೊರಟಗೆರೆಯ 62 ಕೆರೆಗಳನ್ನು ತುಂಬಿಸಲು 533 ಕೋಟಿ ಮೀಸಲು, ತುಮಕೂರಿನಲ್ಲಿ ಜಪಾನೀಸ್ ಇಂಡಸ್ಟ್ರಿಯಲ್ ಪಾರ್ಕ್, ವಸಂತ ನರಸಾಪುರದಲ್ಲಿ ಮಹಿಳಾ ಹಾಸ್ಟೆಲ್ ಸ್ಥಾಪನೆ, 20 ಲಕ್ಷ ಉದ್ಯೋಗ ಸೃಷ್ಟಿಯ ಗುರಿ, ಸೇವಾ ವಲಯದ ಬೆಳವಣಿಗೆಗೆ ಆದ್ಯತೆ ನೀಡಿರುವುದು ಉತ್ತಮ ಕಾರ್ಯವಾಗಿದೆ ಎಂದಿದ್ದಾರೆ.

ದೇವನಹಳ್ಳಿವರೆಗೂ ಮೆಟ್ರೋ ವಿಸ್ತರಣೆ, ಪ್ರಮುಖ ಹತ್ತು ಜಿಲ್ಲೆಗಳ ಪ್ರವಾಸಿ ತಾಣಗಳ ಅಭಿವೃದ್ಧಿ, ಉದ್ಯಮಶೀಲತೆ ಉತ್ತೇಜನಕ್ಕೆ ಆದ್ಯತೆ, ಭದ್ರಾ ಮೇಲ್ದಂಡೆ ಯೋಜನೆಯ ಅನುಷ್ಠಾನ, 6,000 ಆಹಾರ ಸಂರಕ್ಷಣಾ ಘಟಕ ಸ್ಥಾಪನೆ, 1850 ಕಿಲೋ ಮೀಟರ್ ರಾಜ್ಯ ಹೆದ್ದಾರಿ ಅಭಿವೃದ್ಧಿ, ಅಮೃತ್ 2.0 ಯೋಜನೆಯಡಿ ಕುಡಿಯುವ ನೀರು ಯೋಜನೆ, ಈ ಬಜೆಟ್ ಅನ್ನು ತುಮಕೂರು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷರಾದ ಪಿ.ಆರ್. ಕುರಂದವಾಡ ರವರು ಸ್ವಾಗತಿಸಿದ್ದು, ಆದರೆ ಈ ಬಜೆಟ್‌ನಲ್ಲಿ ಅಂದುಕೊಂಡಂತೆ ತುಮಕೂರು ಜಿಲ್ಲೆಗೆ ವಿಶೇಷ ಪ್ರಾತಿನಿಧ್ಯತೆಯನ್ನು ನೀಡದಿರುವುದು ಕಂಡು ಬರುತ್ತದೆ ಹಾಗೂ ಮುಂದಿನ ದಿನಗಳಲ್ಲಿ ವಿಶೇಷ ಪ್ರಾತಿನಿಧ್ಯತೆಯನ್ನು ಕಲ್ಪಿಸುತ್ತಾರೆ ಎಂಬ ಆಶಯವನ್ನು ಅವರು ವ್ಯಕ್ತಪಡಿಸಿದ್ದಾರೆ.