ಕೆ.ಆರ್.ಪೇಟೆ- ಬೆಳೆದು ನಿಂತಿರುವ ಬೆಳೆಗಳ ಸಂರಕ್ಷಣೆಗಾಗಿ ಹೇಮಾವತಿ ಜಲಾಶಯದಿಂದ ಹೇಮಾವತಿ ಎಡದಂಡೆ ಕಾಲುವೆಗೆ ನೀರು ಹರಿಸಿ ತಾಲೂಕಿನ ಕೆರೆ-ಕಟ್ಟೆಗಳನ್ನು ತುಂಬಿಸುವಂತೆ ಶಾಸಕ ಹೆಚ್.ಟಿ.ಮಂಜು ರಾಜ್ಯ ವಿಧಾನ ಸಭೆಯಲ್ಲಿ ಆಗ್ರಹಿಸಿದರು .
ಹೇಮಾವತಿ ನೀರಿನ ವಿಚಾರವಾಗಿ ಬುಧವಾರ ( ಮಾ.05 ) ವಿಧಾನ ಸಭೆಯಲ್ಲಿ ಧ್ವನಿಯೆತ್ತಿದ ಶಾಸಕ ಹೆಚ್.ಟಿ.ಮಂಜು ತಾಲೂಕು ವ್ಯಾಪ್ತಿಯಲ್ಲಿ ಸುಮಾರು 10 ಸಾವಿರ ಎಕರೆ ಪ್ರದೇಶದಲ್ಲಿ ಕಬ್ಬು, ಸುಮಾರು 60 ಸಾವಿರ ಎಕರೆ ಪ್ರದೇಶದಲ್ಲಿ ಭತ್ತ ಮತ್ತು ತೆಂಗು ಮತ್ತಿತರ ತೋಟಗಾರಿಕಾ ಬೆಳೆಗಳು ನೀರಾಗಾಗಿ ಕಾಯುತ್ತಿವೆ. ಸಕಾಲದಲ್ಲಿ ಹೇಮೆಯ ನೀರು ಬಾರದಿದ್ದರೆ ಬೆಳೆದು ನಿಂತಿರುವ ಬೆಳೆಗಳು ಒಣಗಿ ರೈತರು ಸಂಕಷ್ಟಕ್ಕೀಡಾಗುತ್ತಾರೆ.
ಪ್ರಸ್ತುತ ಹೇಮಾವತಿ ಜಲಾಶಯದಲ್ಲಿ ಸಾಕಷ್ಟು ನೀರಿದೆ. ಜಲಾಶಯದಲ್ಲಿ ಸಂಗ್ರಹವಾಗಿರುವ ನೀರನ್ನು ತಾಲೂಕಿನ ನದಿ ಅಣೆಕಟ್ಟೆ ನಾಲೆಗಳಾದ ಮಂದಗೆರೆ ಎಡ ಮತ್ತು ಬಲದಂಡೆ ನಾಲೆ, ಹೇಮಗಿರಿ ನಾಲೆ ಮತ್ತು ಹೇಮಾವತಿ ಜಲಾಶಯದ ಹೇಮಾವತಿ ಎಡದಂಡೆ ನಾಲೆಗಳ ಮುಖಾಂತರ ಹರಿಸಿ ಬರಿದಾಗಿರುವ ಕೆರ-ಕಟ್ಟೆಗಳನ್ನು ತುಂಬಿಸಿ ರೈತರಿಗೆ ಅನುಕೂಲ ಮಾಡಿಕೊಡುವಂತೆ ಮನವಿ ಮಾಡಿದರು.
ಶಾಸಕ ಹೆಚ್.ಟಿ.ಮಂಜು ಅವರ ಮನವಿಗೆ ರಾಜ್ಯದ ಉಪ ಮುಖ್ಯಂತ್ರಿಗಳು ಹಾಗೂ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರ ಪರವಾಗಿ ಸದನದಲ್ಲಿ ಉತ್ತರಿಸಿದ ರಾಜ್ಯ ಪಂಚಾಯತ್ ಹಾಗೂ ಗ್ರಾಮೀಣಾಭಿವೃದ್ದಿ ಖಾತೆ ಸಚಿವ ಹೆಚ್.ಕೆ.ಪಾಟೀಲ್ 29-07-2024 ರಂದು ನಡೆದ ನೀರಾವರಿ ಸಲಹಾ ಸಮಿತಿಯ ನಿರ್ಣಯದಂತೆ ಹೇಮಾವತಿ ಜಲಾಶಯದಿಂದ 30-07 2024 ರಿಂದ 04.01.2025 ರವರೆಗೆ ರಬಿ, ಖಾರೀಫ್ ಮತು ಭತ್ತದ ಬೆಳೆಗೆ ಈಗಾಗಲೇ ನೀರು ಹರಿಸಲಾಗಿದೆ.
ಪ್ರಸ್ತುತ ಜಲಾಶಯದಲ್ಲಿ 20.66 ಟಿ.ಎಂ.ಸಿ ನೀರಿನ ಸಂಗ್ರಹವಿದ್ದು ಸದರಿ ನೀರನ್ನು ಹಾಸನ, ಮಂಡ್ಯ ಮತ್ತು ತುಮಕೂರು ಜಿಲ್ಲೆಗಳ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಕಾಯ್ದಿರಿಸಬೇಕಾಗಿರುವುದರಿಂದ ಮುಂದಿನ ಮೇ ತಿಂಗಳ ಅಂತ್ಯದವೆರೆಗೂ ಹೇಮಾವತಿ ಜಲಾಶಯದಿಂದ ಕಾಲುವೆಗಳಿಗೆ ನೀರು ಹರಿಸಲು ಸಾಧ್ಯವಿಲ್ಲ ಎಂದರು.

ಸಚಿವ ಹೆಚ್.ಕೆ.ಪಾಟೀಲ್ ಅವರ ಉತ್ತರಕ್ಕೆ ತೃಪ್ತರಾಗದ ಶಾಸಕ ಹೆಚ್.ಟಿ.ಮಂಜು ತಾಲೂಕಿನ ನದಿ ಅಣೆಕಟ್ಟೆ ನಾಲೆಗಳಾದ ಮಂದಗೆರೆ ಎಡ ಮತ್ತು ಬಲದಂಡೆ ನಾಲೆ, ಹೇಮಗಿರಿ ನಾಲೆಗಳು ಮೆಟ್ಟೂರು, ಕೆ.ಆರ್.ಎಸ್ ಅಣೆಕಟ್ಟೆಗಳ ನಿರ್ಮಾಣಕ್ಕೂ ಮುನ್ನವೇ ಶತಮಾನಗಳ ಹಿಂದೆ ರಾಜ ಮಹಾರಾಜರುಗಳಿಂದ ನಿರ್ಮಾಣಗೊಂಡಿವೆ. ನದಿ ಅಣೆಕಟ್ಟೆ ನಾಲೆಗಳ ರೈತರು ಯಾವಾಗಲೂ ಎರಡು ಬೆಳೆ ಭತ್ತ ಬೆಳೆಯುತ್ತಿದ್ದಾರೆ. ತಾಲೂಕಿನ ನದಿ ಅಣೆಕಟ್ಟೆ ನಾಲೆಗಳ ವ್ಯಾಪ್ತಿಯಲ್ಲಿ 10 ರಿಂದ 15 ಸಾವಿರ ಎಕರೆ ಪ್ರದೇಶದಲ್ಲಿ ಕಬ್ಬಿನ ಬೆಳೆಯಿದೆ. ಜೊತೆಗೆ ತೆಂಗು ಮುಂತಾದ ತೋಟಗಾರಿಕಾ ಬೆಳೆಗಳಿವೆ. ಬೆಳೆದು ನಿಂತಿರುವ ಬೆಳೆಗಳ ಸಂರಕ್ಷಣೆಯಾಗಬೇಕು.
ಈ ನಾಲಾ ವ್ಯಾಪ್ತಿಯ ರೈತರು ಬತ್ತದ ಒಟ್ಟಲು ಹಾಕಿ ನಾಟಿ ಮಾಡಲು ನೀರಿಗಾಗಿ ಕಾಯುತ್ತಿದ್ದಾರೆ. ನದಿ ಅಣೆಕಟ್ಟೆ ನಾಲೆಗಳಿಗೆ ನೀರು ಬಿಡುವ ವಿಚಾರ ನೀರಾವರಿ ಸಲಹಾ ಸಮಿತಿಯ ವ್ಯಾಪ್ತಿಗೆ ಬರುವುದಿಲ್ಲ. ಆದಕಾರಣ ತಕ್ಷಣವೇ ನದಿ ಅಣೆಕಟ್ಟೆ ನಾಲೆಗಳಾದ ಮಂದಗೆರೆ ಎಡ ಮತ್ತು ಬಲದಂಡೆ ನಾಲೆಗಳು ಮತ್ತು ಹೇಮಗಿರಿ ನಾಲೆಗಳಿಗೆ ನೀರು ಹರಿಸಿ. ಹೇಮಾವತಿ ಜಲಾಶಯದ ಹೇಮಾವತಿ ಎಡದಂಡೆ ನಾಲೆಗೆ ನಾನು ಬೇಸಿಗೆ ಬೆಳೆಗೆ ನೀರು ಬಿಡಿ ಎಂದು ಕೇಳುತ್ತಿಲ್ಲ.
ಜನ-ಜಾನುವಾರುಗಳ ಕುಡಿಯುವ ನೀರಿನ ಸಮಸ್ಯೆಯ ಪರಿಹಾರಕ್ಕಾಗಿ ಹೇಮಾವತಿ ಎಡದಂಡೆ ನಾಲೆಗೆ ನೀರು ಹರಿಸಿ ತಾಲೂಕಿನ ಕೆರೆ-ಕಟ್ಟೆಗಳನ್ನು ಹೇಮೆಯ ನೀರಿನಿಂದ ತುಂಬಿಸಿ. ಕೆರೆ-ಕಟ್ಟೆಗಳು ತುಂಬವಿದರೆ ಅಂತರ್ಜಲ ಮಟ್ಟವೂ ಅಭಿವೃದ್ದಿಯಾಗುತ್ತದೆ. ಆದಕಾರಣ ಹೇಮಾವತಿ ಎಡದಂಡೆ ನಾಲೆಯ ಮುಖಾಂತರ ತಾಲೂಕಿನ ಕೆರೆ-ಕಟ್ಟೆಗಳನ್ನು ತುಂಬಿಸಿ ಹಾಗೂ ನದಿ ಅಣೆಕಟ್ಟೆ ನಾಲೆಗಳ ರೈತರ ಕೃಷಿಗೆ ಅಗತ್ಯ ನೀರು ಬಿಡಿ ಎಂದು ಆಗ್ರಹಿಸಿದರು.
- ಶ್ರೀನಿವಾಸ್ ಆರ್. ಕೆ.ಆರ್.ಪೇಟೆ