ಕೆ.ಆರ್.ಪೇಟೆ: ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಪ್ರಗತಿ ಪರಿಶೀಲನಾ ಸಭೆ ತಾಲ್ಲೂಕು ಅಧ್ಯಕ್ಷರಾದ ಅಗ್ರಹಾರಬಾಚಹಳ್ಳಿ ಎ.ಬಿ.ಕುಮಾರ್ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಮಾತನಾಡಿದ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಎ.ಬಿ.ಕುಮಾರ್ ಗ್ಯಾರಂಟಿ ಯೋಜನೆಗಳಿಂದ ಜನರ ಆರ್ಥಿಕ ಸಬಲೀಕರಣಗೊಳ್ಳುತ್ತಿದೆ ಹಾಗಾಗಿ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪುವಂತೆ ನೋಡಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಅರ್ಹರಿಗೆ ಯೋಜನೆಯಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು. ಪ್ರಮುಖವಾಗಿ ಗೃಹಲಕ್ಷ್ಮೀ ಯೋಜನೆಯ ಹಣವು ಕಾರಣಾಂತರಗಳಿಂದ ಕೆಲವು ಫಲಾನುಭವಿಗಳಿಗೆ ಡಿಬಿಟಿ ಮೂಲಕ ಬ್ಯಾಂಕ್ ಖಾತೆಗೆ ಸರಿಯಾಗಿ ಜಮಾ ಆಗುತ್ತಿಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ.
ಇದನ್ನು ಸಂಬಂಧಪಟ್ಟ ಫಲಾನುಭವಿಗಳು ಕಚೇರಿಗೆ ಬಂದಾಗ ಸರಿಪಡಿಸಿಕೊಡಬೇಕು ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು. ತಾಲ್ಲೂಕಿನ ಅಗ್ರಹಾರಬಾಚಹಳ್ಳಿ ಗ್ರಾಮದ ಮಾರ್ಗವಾಗಿ ಚಿಲ್ಲದಹಳ್ಳಿ, ನಗರೂರು, ಮಾರ್ಗೋನಹಳ್ಳಿ, ಬಳ್ಳೇಕೆರೆ ಮಾರ್ಗದ ಮೂಲಕ ಪ್ರತಿದಿನ 3ಟ್ರಿಪ್ ಕೆ.ಎಸ್.ಆರ್.ಟಿ.ಸಿ ಬಸ್ ಓಡಿಸಿದರೆ ನೂರಾರು ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗಲಿದೆ ಈ ಬಗ್ಗೆ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಎ.ಬಿ.ಕುಮಾರ್ ಸಾರಿಗೆ ಅಧಿಕಾರಿಗೆ ಸಲಹೆ ನೀಡಿದರು.
ಉತ್ತರಿಸಿದ ಸಾರಿಗೆ ಕೂಡಲೇ ಸದರಿ ಮಾರ್ಗದ ಸರ್ವೆ ಮಾಡಿಸಿ, ಮೇಲಧಿಕಾರಿಗಳ ಸಲಹೆ ಪಡೆದುಕೊಂಡು ಅಗ್ರಹಾರಬಾಚಹಳ್ಳಿ ಮಾರ್ಗದಲ್ಲಿ ಬಸ್ ಓಡಿಸಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

ತಾಲ್ಲೂಕಿನಲ್ಲಿ ಯುವ ನಿಧಿ ಯೋಜನೆ ಅಡಿಯಲ್ಲಿ ಒಟ್ಟು 816ಮಂದಿ ನೊಂದಣಿ ಮಾಡಿಸಿಕೊಂಡಿದ್ದಾರೆ. ಈ ಪೈಕಿ 550ಪದವೀಧರ ಅಭ್ಯರ್ಥಿಗಳಿಗೆ ತಲಾ 3000ಸಾವಿರ , 12ಡಿಪ್ಲೋಮೋ ಅಭ್ಯರ್ಥಿಗಳಿಗೆ 1500ರೂ ಸೇರಿ 80ಲಕ್ಷದ 85ಸಾವಿರ ನೀಡಲಾಗುತ್ತಿದೆ. ಗೃಹಜ್ಯೋತಿ ಯೋಜನೆ ಅಡಿಯಲ್ಲಿ ಒಟ್ಟು 67123ಸಾವಿರ ಮಂದಿ ನೊಂದಾಯಿಸಿಕೊಂಡಿದ್ದಾರೆ. ಇನ್ನೂ ಕೂಡ 3869 ಸಾವಿರ ಮಂದಿ ಬಾಕಿ ಇದ್ದಾರೆ.
ಇದೂವರೆವಿಗೂ ಸುಮಾರು 38ಕೋಟಿಯಷ್ಟು ವಿದ್ಯುತ್ ಬಿಲ್ ಅನ್ನು ಸರ್ಕಾರವು ಫಲಾನುಭವಿಗಳ ಪರವಾಗಿ ಚೆಸ್ಕಾಂ ಗೆ ಪಾವತಿ ಮಾಡಿದೆ. ತಾಲ್ಲೂಕಿನಲ್ಲಿ ಇದೂವರೆವಿಗೂ 7ಲಕ್ಷದ 28ಸಾವಿರ ಮಂದಿ ಸಾರಿಗೆ ಬಸ್ಸುಗಳಲ್ಲಿ ಪ್ರಯಾಣ ಮಾಡಿದ್ದು, ಇದರ ಬಾಬ್ತು ಸಬ್ಸಿಡಿ 2ಕೋಟಿ 13ಲಕ್ಷದ 52ಸಾವಿರ ರೂಗಳನ್ನು ರಾಜ್ಯ ಸರ್ಕಾರವು ಸಾರಿಗೆ ಇಲಾಖೆಗೆ ಪಾವತಿ ಮಾಡಿದೆ ಎಂದು ಆಯಾಯ ಇಲಾಖೆಯ ಅಧಿಕಾರಿಗಳು ವರದಿ ಮಂಡಿಸಿದರು.

ಸಭೆಯಲ್ಲಿ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಸದಸ್ಯ ಕಾರ್ಯದರ್ಶಿಗಳು ಹಾಗೂ ತಾ.ಪಂ.ಇಓ ಸುಷ್ಮ,ಕೆ, ಸದಸ್ಯರಾದ
ಸಿ.ಆರ್.ಪಿ.ಕುಮಾರ್, ಬಂಡಿಹೊಳೆ ಯೋಗೇಶ್(ಉಮೇಶ್), ದೊಡ್ಡತಾರಹಳ್ಳಿ ಸೋಮಶೇಖರ್, ಕೆ.ಎಸ್.ಆರ್.ಟಿ.ಸಿ.ಶಿವಣ್ಣ, ಕನಕದಾಸನಗರ ಶಿವಮ್ಮ, ಸಿಂಧುಘಟ್ಟ ಅಫೀಜ್ ಉಲ್ಲಾ, ಬೂಕನಕೆರೆ ರೂಪಾ, ಯಗಚಗುಪ್ಪೆ ಶಿವಲಿಂಗಪ್ಪ, ಬೊಮ್ಮೇನಹಳ್ಳಿ ಲತಾ, ಅಧಿಕಾರಿಗಳಾದ ಚೆಸ್ಕಾಂ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಪುಟ್ಟಸ್ವಾಮಿ, ಆಹಾರ ಇಲಾಖೆಯ ಶಿರಸ್ತೇದಾರ್ ಪೂರ್ಣಿಮಾ, ಸಾರಿಗೆ ಇಲಾಖೆಯ ಡಿಪೋ ಮ್ಯಾನೇಜರ್ ಪಿ.ವನಿತಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಎಸಿಡಿಪಿಓ ಅಕ್ಕಮಹಾದೇವಿ, ಪಂಚಾಯತ್ ರಾಜ್ ಇಲಾಖೆಯ ಸಹಸಯಕ ನಿರ್ದೇಶಕ ಡಾ.ಟಿ.ನರಸಿಂಹರಾಜು, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ವಿಷಯ ನಿರ್ವಾಹಕಿ ಚೈತ್ರಾ.ಕೆ. ಇತರರು ಉಪಸ್ಥಿತರಿದ್ದರು.
- ಶ್ರೀನಿವಾಸ್ ಆರ್.