ಕೆ.ಆರ್.ಪೇಟೆ: ತಾಲ್ಲೂಕಿನ ಆಲಂಬಾಡಿಕಾವಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನೂತನ ನಿರ್ದೇಶಕರುಗಳನ್ನು ಆಯ್ಕೆ ಮಾಡಲಾಯಿತು.
ಸಾಲಗಾರರ ಸಾಮಾನ್ಯ ಕ್ಷೇತ್ರದಿಂದ ಎ.ಟಿ.ಕರಿಶೆಟ್ಟಿ, ಐಪನಹಳ್ಳಿ ಡಿ.ಸುರೇಶ್, ಗುಡುಗನಹಳ್ಳಿ ಸುದರ್ಶನ್, ರಾಜು.ಎಸ್, ಪಿ.ನಂಜುಂಡೇಗೌಡ, ಮಹಿಳಾ ಮೀಸಲು ಕ್ಷೇತ್ರದಿಂದ ಗುಡುಗನಹಳ್ಳಿ ಜವರಮ್ಮ, ಆಶಾ ದೇವರಾಜು, ಬಿಸಿಎಂಎ ಮೀಸಲು ಕ್ಷೇತ್ರದಿಂದ ಎಂ.ಮೋಹನ್, ಬಿಸಿಎಂ.ಬಿ. ಮೀಸಲು ಕ್ಷೇತ್ರದಿಂದ ಬಸವನಹಳ್ಳಿ ಕೀರ್ತಿ.ಬಿ.ಎಂ, ಎಸ್.ಸಿ.ಮೀಸಲು ಕ್ಷೇತ್ರದಿಂದ ಬಸವನಹಳ್ಳಿ ಕೃಷ್ಣಯ್ಯ, ಎಸ್.ಟಿ.ಮೀಸಲು ಕ್ಷೇತ್ರದಿಂದ ಭಾಗ್ಯಮ್ಮ ಹಾಗೆಯೇ ಸಾಲಗಾರರಲ್ಲದ ಕ್ಷೇತ್ರದಿಂದ ಎ.ರಾಜು ಚುನಾಯಿತರಾಗಿದ್ದಾರೆ ಎಂದು ಚುನಾವಣಾಧಿಕಾರಿ ವಾಸಿಂ ಪಾಷಾ ತಿಳಿಸಿದ್ದಾರೆ.
ಈ ಪೈಕಿ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯರಾದ ಎ.ಎಂ.ಸಂಜೀವಪ್ಪ ಮತ್ತು ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ನಾಗೇಂದ್ರಕುಮಾರ್ ಬಣದ ಸ್ವಾಭಿಮಾನಿ ಬಳಗದಿಂದ 8 ಮಂದಿ ಗೆಲುವು ಸಾಧಿಸಿ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಅದೇ ರೀತಿ ಸ್ವತಂತ್ರ ಅಭ್ಯರ್ಥಿಗಳಾದ ಎ.ರಾಜು, ಆಶಾದೇವರಾಜು, ಐಪನಹಳ್ಳಿ ಸುರೇಶ್, ಬಸವನಹಳ್ಳಿ ಬಿ.ಎಂ.ಕೀರ್ತಿ ಅವರು ಗೆಲುವು ಸಾಧಿಸಿದ್ದಾರೆ.

ನೂತನ ನಿರ್ದೇಶಕರನ್ನು ಶಾಸಕ ಹೆಚ್.ಟಿ.ಮಂಜು, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಜಾನಕೀರಾಂ, ತಾಲೂಕು ಪಂಚಾಯಿತಿ ಸದಸ್ಯ ಎ.ಎಂ.ಸಂಜೀವಪ್ಪ, ಜಿ.ಪಂ.ಮಾಜಿ ಸದಸ್ಯ ಬಿ.ನಾಗೇಂದ್ರಕುಮಾರ್, ಗ್ರಾಮ ಪಂಚಾಯಿತಿ ಅಧ್ಯಕ್ಷ ವೆಂಕಟೇಶ್ ಸೇರಿದಂತೆ ಹಲವು ಗಣ್ಯರು ಅಭಿನಂದಿಸಿದರು.
ತಮ್ಮ ಸ್ವಾಭಿಮಾನಿ ಬಣದ ನೂತನ ನಿರ್ದೇಶಕರನ್ನು ಅಭಿನಂದಿಸಿ ಮಾತನಾಡಿ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಎ.ಎಂ.ಸಂಜೀವಪ್ಪ ಅವರು ಕಳೆದ ಐದು ವರ್ಷಗಳ ಕಾಲ ನಮ್ಮ ನೇತೃತ್ವದಲ್ಲಿ ಆಲಂಬಾಡಿಕಾವಲು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವನ್ನು ಅಭಿವೃದ್ಧಿ ಪಥದತ್ತ ತೆಗೆದುಕೊಂಡು ಹೋದ ಕಾರಣ ನಮ್ಮ ಬಣದ ಮೇಲೆ ವಿಶ್ವಾಸವಿಟ್ಟು ಬರೋಬ್ಬರಿ 8ಮಂದಿ ನಿರ್ದೇಶಕರನ್ನು ಆಯ್ಕೆ ಮಾಡಿರುವ ಸೊಸೈಟಿ ವ್ಯಾಪ್ತಿಯ ಎಲ್ಲಾ ಶೇರುದಾರರಿಗೆ ಹಾಗೂ ಮುಖಂಡರಿಗೆ ನಾನು ಆಭಾರಿಯಾಗಿರುತ್ತೇನೆ. ಇದೇ ರೀತಿ ಮುಂಬರುವ ತಾ.ಪಂ ಮತ್ತು ಜಿ.ಪಂ.ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಶಕ್ತಿ ಪ್ರದರ್ಶನ ಮಾಡುತ್ತೇನೆ ಎಂದು ಗುಡುಗಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ನಾಗೇಂದ್ರಕುಮಾರ್ ಮಾತನಾಡಿ ನಮ್ಮ ಆಲಂಬಾಡಿಕಾವಲು ಗ್ರಾಮದ ಸೊಸೈಟಿ ಚುನಾವಣೆಯಲ್ಲಿ ನಮ್ಮ ಸ್ವಾಭಿಮಾನಿ ಬಣಕ್ಕೆ 8 ಸ್ಥಾನ ನೀಡಿರುವ ಮತದಾರರಿಗೆ ಹಾಗೂ ಸಹಕಾರಿ ಧುರೀಣರಿಗೆ ನಾನು ಕೃತಜ್ಞತೆಗಳನ್ನು ಸಲ್ಲಿಸಲು ಬಯಸುತ್ತೇನೆ ಎಂದು ತಿಳಿಸಿದರು.
-ಶ್ರೀನಿವಾಸ ಆರ್.