ಎಚ್.ಡಿ. ಕೋಟೆ; ಹುಣಸೂರು ಮಾರ್ಗದ ಸರ್ಕಾರಿ ಬಸ್‌ಗಳು ನಿಲುಗಡೆ ಮಾಡದ ಕಾರಣ ತಮಗೆ ಅತೀವ ಸಮಸ್ಯೆಯುಂಟಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ತಾಲೂಕಿನ ಭೀಮನಹಳ್ಳಿ ಗ್ರಾಮದ ವಿದ್ಯಾರ್ಥಿಗಳು ಹಠಾತ್ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿ, ತಾಲೂಕಿನ ಅಣ್ಣೂರು ಹೊಸಳ್ಳಿ,ಎಲೆಹುಂಡಿ,ಭೀಮನಹಳ್ಳಿ ಸುತ್ತಮುತ್ತಲ ಗ್ರಾಮಗಳ ನೂರಾರು ವಿದ್ಯಾರ್ಥಿ,ವಿದ್ಯಾರ್ಥಿನಿಯರು ಶಿಕ್ಷಣಕ್ಕಾಗಿ ನೆರೆಯ ಹುಣಸೂರು ತಾಲೂಕಿನ ಕಾಲೇಜುಗಳಲ್ಲಿ ದಾಖಲಾಗಿದ್ದಾರೆ. ಬೆಳಗಿನ ಎಂಟು ಗಂಟೆಯಿಂದ 10ಗಂಟೆ ತನಕ ಶಾಲಾ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಸರ್ಕಾರಿ ಬಸ್‌ಗಳಿಗಾಗಿ ಕಾದು ನಿಂತರೂ ಬಸ್‌ಗಳು ನಿಲುಗಡೆ ಮಾಡುತ್ತಿಲ್ಲ ಎಂದು ದೂರಿದರು.
ಬಸ್ಸುಗಳ ಸಮಸ್ಯೆಯಿಂದ ವಿದ್ಯಾರ್ಥಿಗಳು ಕಲಿಕೆಗೆ ತೊಂದರೆಯಾಗುತ್ತಿದೆ ಎಂದು ಹಲವಾರು ಬಾರಿ ದೂರು ಹೇಳಿಕೊಂಡರೂ ಉಪಯೋಗವಾಗದ ಹಿನ್ನೆಲೆಯಲ್ಲಿ ಈ ದಿಢೀರ್ ಪ್ರತಿಭಟನೆಗಿಳಿದು ರಸ್ತೆ ತಡೆ ನಡೆಸಬೇಕಾಗಿ ಬಂದಿತು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಎಚ್.ಡಿ. ಕೋಟೆ ಹಾಗೂ ಹುಣಸೂರು ಮಾರ್ಗದ ರಸ್ತೆ ಬಂದ್ ಆಗಿದ್ದರಿಂದಾಗಿ ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣಗೊಂಡಿತ್ತು.
ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿದ ಎಚ್.ಡಿ. ಕೋಟೆ ಪೊಲೀಸರು ಯಾವುದೇ ಅನುಮತಿ ಪಡೆಯದೇ ರಸ್ತೆ ತಡೆ ನಡೆಸುವುದು ಕಾನೂನು ಬಾಹಿರ ಎಂದು ಪ್ರತಿಭಟನಾಕಾರರ ಮನವೊಲಿಸಿದಾಗ ವಿದ್ಯಾರ್ಥಿಗಳು ಸಮಸ್ಯೆ ಹೇಳಿಕೊಂಡು ಪ್ರತಿಭಟನೆ ಕೈಬಿಟ್ಟರು.
ಈ ಸಂದರ್ಭದಲ್ಲಿ ಕೆಎಸ್‌ಆರ್‌ಟಿಸಿ ಸಂಚಾರ ನಿಯಂತ್ರಣಾಧಿಕಾರಿ ಮಾತನಾಡಿ,ಮಂಗಳವಾರದಿಂದಲೇ ಬಸ್ ಚಾಲಕರಿಗೆ ಸೂಚನೆ ನೀಡಿ ನಿಲುಗಡೆಗೆ ಅವಕಾಶ ಕಲ್ಪಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುವ ಭರವಸೆ ನೀಡಿದರು.
ಸುಮಾರು ಎರಡು ತಾಸಿಗೂ ಅಧಿಕ ಕಾಲ ರಸ್ತೆತಡೆ ನಡೆಸಿದ್ದ ವಿದ್ಯಾರ್ಥಿಗಳು ಪೊಲೀಸರ ಮತ್ತು ಸಂಚಾರ ನಿಯಂತ್ರಕರ ಮಾತಿಗೆ ಕಿವಿಗೊಟ್ಟು ಪ್ರತಿಭಟನೆ ಕೈಬಿಟ್ಟರು. ಆದರೆ ಸಮಸ್ಯೆ ಬಗೆ ಹರಿಯದೆ ಹೋದಲ್ಲಿ ಮುಂದೆ ನಿಯಮಾನುಸಾರ ಹೋರಾಟ ನಡೆಸುವ ಎಚ್ಚರಿಕೆ ನೀಡಿದರು.
ವರದಿ : ಶಿವು ಕೋಟೆ
ಫೋನ್: 7411991888