ಕೆ.ಆರ್.ಪೇಟೆ: ಕ್ರೀಡೆಗಳು ಮನುಷ್ಯನ ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ದಿಗೆ ಸಹಕಾರಿಯಾಗಿವೆ ಹಾಗಾಗಿ ಪ್ರತಿಯೊಬ್ಬರೂ ಒಂದಲ್ಲ ಒಂದು ಕ್ರೀಡೆಯಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು. ಕ್ರೀಡೆಗಳು ಯುವಕರನ್ನು ದುಶ್ಚಟಗಳಿಂದ ಪಾರು ಮಾಡುತ್ತವೆ ಎಂದು ತಾಲ್ಲೂಕು ಎಪಿಎಂಸಿ ಮಾಜಿ ಅಧ್ಯಕ್ಷ ಎಂ.ಪಿ.ಲೋಕೇಶ್ ಹೇಳಿದರು.
ಅವರು ಕೆ.ಆರ್.ಪೇಟೆ ತಾಲ್ಲೂಕಿನ ಮಡುವಿನಕೋಡಿ ಗ್ರಾಮದ ಶ್ರೀ ಆಂಜನೇಯ ಸ್ವಾಮಿ ರಥೋತ್ಸವ ಹಾಗೂ ಜಾತ್ರಾ ಮಹೋತ್ಸವದ ಅಂಗವಾಗಿ ನಡೆಯುತ್ತಿರುವ ಹೊನಲು ಬೆಳಕಿನ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದರು.
ಯುವಕರು ಶಾಲಾ ಕಾಲೇಜುಗಳ ಬಿಡುವಿನ ವೇಳೆಯಲ್ಲಿ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು. ಕ್ರೀಡಾಕೂಟಗಳನ್ನು ಗ್ರಾಮಗಳಲ್ಲಿ ಇರುವ ಸಂಘ ಸಂಸ್ಥೆಗಳು ಆಯೋಜಿಸಿ ಕ್ರೀಡಾಸಕ್ತ ಯುವಕರಿಗೆ ಅವಕಾಶಗಳನ್ನು ಕಲ್ಪಿಸಿಕೊಡಬೇಕು. ಈ ಮೂಲಕ ಯುವಕರು ದಾರಿ ತಪ್ಪದಂತೆ ನೋಡಿಕೊಳ್ಳಬೇಕು. ಹಬ್ಬ ಹರಿದಿನಗಳ ನೆಪದಲ್ಲಿ ಕ್ರೀಡೆಗಳನ್ನು ಆಯೋಜಿಸುವುದು ಒಳ್ಳೆಯ ಬೆಳವಣಿಗೆಯಾಗಿದೆ. ಕ್ರೀಡಾಕೂಟಗಳನ್ನು ಆಯೋಜಿಸಲು ತಗಲುವ ವೆಚ್ಚವನ್ನು ದಾನಿಗಳಿಂದ ಪಡೆದುಕೊಂಡು ಕ್ರೀಡೆಯಲ್ಲಿ ವಿಜೇತರಾದವರು ಬಹುಮಾನ ನೀಡುವ ಮೂಲಕ ಕ್ರೀಡೆಯಲ್ಲಿ ಆಸಕ್ತಿ ಬೆಳೆಯುವಂತೆ ನೋಡಿಕೊಳ್ಳಬೇಕಾಗಿದೆ ಎಂದು ಎಂ.ಪಿ.ಲೋಕೇಶ್ ತಿಳಿಸಿದರು.

ಮನ್‌ಮುಲ್ ನಿರ್ದೇಶಕ ಎಂ.ಬಿ.ಹರೀಶ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ನಮ್ಮ ಮಡುವಿನಕೋಡಿ ಗ್ರಾಮದ ಯುವಕರು ಪ್ರತಿ ವರ್ಷವೂ ಒಂದಲ್ಲ ಒಂದು ಕ್ರೀಡಾಕೂಟವನ್ನು ಗ್ರಾಮ ದೇವತೆ ಶ್ರೀ ಆಂಜನೇಯಸ್ವಾಮಿ ರಥೋತ್ಸವದ ಅಂಗವಾಗಿ ಆಯೋಜಿಸುತ್ತಾ ಬರುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಕ್ರೀಡಾಕೂಟಕ್ಕೆ ನಮ್ಮ ಸಹಕಾರ ಯಾವತ್ತೂ ಇದ್ದೇ ಇರುತ್ತದೆ ಎಂದು ಯುವಕರನ್ನು ಹುರುದುಂಬಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಆರ್.ಟಿ.ಓ.ಮಲ್ಲಿಕಾರ್ಜುನ್ ಚಾರಿಟೇಬಲ್ ಟ್ರಸ್ಟಿನ ಕಾರ್ಯದರ್ಶಿ ಗಂಜಿಗೆರೆ ಮಹೇಶ್ ಕ್ರೀಡಾ ಕೂಟದಲ್ಲಿ ಭಾಗವಹಿಸಿ ಕ್ರೀಡಾಪಟುಗಳನ್ನು ಪರಿಚಯ ಮಾಡಿಕೊಂಡರು. ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಪ್ರವೀಣ್‌ಕುಮಾರ್, ಮುಖಂಡರಾದ ನಾಗೇಶ್, ಉಮೇಶ್, ಎಂ.ಪಿ.ವಿಜಯ್‌ಕುಮಾರ್, ಸತೀಶ್, ವಕೀಲ ಅನ್ವೇಶ್ ಸೇರಿದಂತೆ ಅನೇಕ ಮುಖಂಡರು, ಗ್ರಾಮಸ್ಥರು ಉಪಸ್ಥಿತರಿದ್ದರು.
-ಶ್ರೀನಿವಾಸ್ ಆರ್.