ಎಚ್.ಡಿ.ಕೋಟೆ: ಗ್ರಾಮೀಣಾ ಭಿವೃದ್ಧಿ ಪಂಚಾಯತ್ ಇಲಾಖೆ, ಸರ್ವೆ ಇಲಾಖೆ, ಸೇರಿದಂತೆ ಹಲವು ಇಲಾಖೆಗಳ ಅಧಿಕಾರಿಗಳ ವಿರುದ್ಧ ಇಂದು ಸಾರ್ವಜನಿಕರು ಲೋಕಾಯುಕ್ತಕ್ಕೆ ದೂರು ನೀಡಿದರು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಲೋಕಾಯುಕ್ತ ಅಧಿಕಾರಿಗಳಿಂದ ನಡೆದ ಸಾರ್ವಜನಿಕರ ದೂರು ಸ್ವೀಕಾರ ಕಾರ್ಯಕ್ರಮದಲ್ಲಿ ತಾಲೂಕಿನ ಸಾರ್ವಜನಿಕರು ತಮ್ಮ ಅಳಲು ತೋಡಿಕೊಂಡರು.
ಸಿದ್ದಪ್ಪಾಜಿ ರಸ್ತೆಯ ಚನ್ನ ಮಾತನಾಡಿ, ಉಮೇಶ ಸಣ್ಣಯ್ಯ ಅವರಿಗೆ ಖಾತೆ ಆಗಬೇಕಿದ್ದ ಜಾಗ ಈಗ ಮಾದಯ್ಯ ಮಲ್ಲಯ್ಯ ಅವರಿಗೆ ಅಕ್ರಮವಾಗಿ ಖಾತೆಯಾಗಿದೆ. ನಾಲ್ಕು ವರ್ಷದಿಂದ ಉಮೇಶ್ ಹೆಸರಿಗೆ ಖಾತೆ ಮಾಡಿಕೊಡಿ ಎಂದು ಹೇಳುತ್ತಿದ್ದೇನೆ. ಅಧಿಕಾರಿಗಳು ಸತಾಯಿಸುತ್ತಿದ್ದಾರೆ ಎಂದರು.
ಈ ಸಮಸ್ಯೆಗೆ ಉತ್ತರಿಸಿದ ಲೋಕಾಯುಕ್ತ ಡಿ ವೈ ಎಸ್ ಪಿ ಮಾಲತೇಶ್ ಮಾತನಾಡಿ, ಸಾರ್ವಜನಿಕರ ಕೆಲಸಮಾಡಲು ಅಧಿಕಾರಿಗಳು ಸಬೂಬು ಹೇಳಬಾರದು. ನಾಲ್ಕು ವರ್ಷದಿಂದ ನಿಮ್ಮ ಬಳಿ ಬರುತ್ತಿದ್ದಾರೆ. ಇನ್ನು 10 ದಿನ ದಲ್ಲಿ ಖಾತೆ ಮಾಡಿಕೊಡಿ ಎಂದು ಪುರಸಭೆ ಮುಖ್ಯಾಧಿಕಾರಿಗೆ ಸೂಚಿಸಿದರು. ಖಾತೆ ಮಾಡಿಲ್ಲ ಎಂದರೆ ನಮಗೆ ಮತ್ತೆ ದೂರು ನೀಡಿ ಎಂದು ದೂರುದಾರರಿಗೆ ತಿಳಿಸಿದರು.

ಹೆಗಡಾಪುರ ಕೆಂಪಶೆಟ್ಟಿ ಮಾತನಾಡಿ, ನಾಗನಹಳ್ಳಿ ಪಂಚಾಯತಿ ವ್ಯಾಪ್ತಿಗೆ ಬರುವ ಹೆಗ್ಗಡಾಪುರ ಕೆರೆ ಸಾರ್ವಜನಿಕ ಆಸ್ತಿ ಆಗಿದ್ದು, ಈ ಕೆರೆಗೆ ಯಾವುದೇ ದಾಖಲಾತಿ ಇಲ್ಲ. ಎಷ್ಟು ಎಕ್ಕರೆ ಇದೆ ಅಂತ ಮಾಹಿತಿ ಅಧಿಕಾರಿಗಳಿಗೂ ಗೊತ್ತಿಲ್ಲ. ಧರ್ಮಸ್ಥಳ ಸಂಸ್ಥೆ ಅವರು ಈ ಕೆರೆಯನ್ನು ಅಭಿವೃದ್ಧಿ ಮಾಡಲು ಮುಂದೆ ಬಂದಿದ್ದರು ಯಾವುದೇ ದಾಖಲಾತಿ ಇಲ್ಲ ಎಂದು ಕೈಬಿಟ್ಟರು ಸುಮುಟೋ ಕೇಸ್ ದಾಖಲು ಮಾಡಿ ಈ ಕೆರೆ ಒತ್ತುವರಿ ಮಾಡಿಕೊಂಡಿರುವವರಿಗೆ ತಕ್ಕಪಾಠ ಕಲಿಸಿ ಎಂದರು.
A D L R ಮಾತನಾಡಿ, ತಾಲೂಕಿನಲ್ಲಿ 211 ಕೆರೆಗಳಿದ್ದು ಈಗಾಗಲೇ 79 ಕೆರೆಗಳನ್ನು ಅಳತೆ ಮಾಡಿ ಒತ್ತುವರಿಯನ್ನು ತೆರವುಗೊಳಿಸಿದ್ದೇವೆ ಎಂದರು.

ಅಧಿಕಾರಿಗಳು ರಾಜಕಾರಣಿಗಳ ಕೈಗೊಂಬೆ :
ರೈತ ಮುಖಂಡ ವಡ್ಡರಗುಡಿ ನಾಗರಾಜ್ ಮಾತನಾಡಿ, ತಾಲೂಕಿನಲ್ಲಿ ಅನೇಕ ಲೋಕಾಯುಕ್ತ ಸಭೆಗಳನ್ನು ನೋಡಿದ್ದೀನಿ ಅಧಿಕಾರಿಗಳು ಟೈಮ್ ತೆಗೆದುಕೊಂಡು ರೈತರಿಗೆ ಯಾವುದೇ ಕೆಲಸ ಮಾಡಿಕೊಟ್ಟಿಲ್ಲ. ಜಿಲ್ಲಾಧಿಕಾರಿಗಳು ಸಭೆಯನ್ನು ದೂರು ನೀಡಿದರು ಅಧಿಕಾರಿಗಳು ಕ್ಯಾರೆ ಎನ್ನುವುದಿಲ್ಲ ಈ ದಿನ ಮಾತ್ರ ಅಧಿಕಾರಿಗಳು ನಿಮ್ಮ ಮುಂದೆ ಇದ್ದಾರೆ ನಾಳೆ ಬೆಳಿಗ್ಗೆ ಅವರ ಆಫೀಸ್ ಹೋದರೆ ಅವರೇ ಇರುವುದಿಲ್ಲ ಅವರಿಗೆ ಬೇಕಾಗಿರುವುದು ರೈತರಲ್ಲ ರಾಜಕಾರಣಿಗಳು ಬೇಕು ಎಂದರು.
ಈ ವೇಳೆ ಲೋಕಾಯುಕ್ತ ಡಿವೈಎಸ್ಪಿ ಮಾಲ್ತೇಶ್, ತಹಸಿಲ್ದಾರ್ ಶ್ರೀನಿವಾಸ್, ಇಒ ಧರಣೇಶ್, ಇನ್ಸ್ಪೆಕ್ಟರ್ ರವಿಕುಮಾರ್, ಉಮೇಶ್, ಗೋಪಿ, ವೀಣಾ, ಮೋಹನ್, ಮತ್ತು ಅಧಿಕಾರಿ ವರ್ಗದವರು ರೈತ ಮುಖಂಡರು ಸಾರ್ವಜನಿಕರು ಇದ್ದರು.
-ಶಿವು ಕೋಟೆ