ಚಿಕ್ಕಮಗಳೂರು: ಮಾದಕ ವಸ್ತುಗಳ ಸೇವನೆಗೆ ಒಳಗಾದರೆ ಅದರಿಂದ ಹೊರಬರುವುದು ಕಷ್ಟ ಇದು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಅಶ್ವತ್ ಬಾಬು ಹೇಳಿದರು.
ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿಕ್ಕಮಗಳೂರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಚಿಕ್ಕಮಗಳೂರು ಇವರುಗಳ ಸಂಯುಕ್ತಾಶ್ರಯದಲ್ಲಿ ನೆನ್ನೆ ಸಂಜೆ ನಗರದ ಡಾ|| ಬಿ.ಆರ್. ಅಂಬೇಡ್ಕರ್ ಪದವಿ ಕಾಲೇಜು ಬಾಲಕರ ವಿದ್ಯಾರ್ಥಿನಿಲಯದಲ್ಲಿ ಮದ್ಯ ಮತ್ತು ಮಾದಕ ವಸ್ತುಗಳ ವ್ಯಸನದಿಂದಾಗುವ ದುಷ್ಪರಿಣಾಮ ಕುರಿತು ವಿಚಾರ ಸಂಕಿರಣ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ದುಶ್ಚಟಗಳು ವ್ಯಕ್ತಿಯ ಬದುಕು, ಕುಟುಂಬ ಮಾತ್ರವಲ್ಲದೆ ಸಮಾಜದ ಮೇಲೂ ನೇರ ಪರಿಣಾಮ ಬೀರುತ್ತದೆ. ಮಾದಕ ವಸ್ತು ಸೇವನೆ ವ್ಯಕ್ತಿಯ ಮೆದುಳು, ದೈಹಿಕ, ಮಾನಸಿಕ ಆರೋಗ್ಯ ಹಾಗೂ ಸಾಮಾಜಿಕ ಬದುಕಿಗೂ ಮಾರಕವಾಗಿದೆ. ಆರಂಭದಲ್ಲಿ ಕುತೂಹಲ ಅಥವಾ ಸ್ನೇಹಿತರ ಒತ್ತಡದಿಂದ ತೊಡಗುವ ಮದ್ಯ ಅಥವಾ ಕಡಿಮೆ ಬೆಲೆಗೆ ಸಿಗುವ ಪಾನ್ ವಸ್ತುಗಳ ಸೇವನೆ ಕೊನೆಗೆ ಮಾರಕ ಗಾಂಜಾ, ಅಫೀಮು, ಕೊಕೇನ್ ದಾಸರನ್ನಾಗಿಸುತ್ತದೆ. ಮೆದುಳಿನಲ್ಲಿ ಬದಲಾವಣೆ ತಂದು, ಸೇವಿಸುವಂತೆ ಪ್ರೇರೇಪಿಸಿ ಕೊನೆಗೆ ವ್ಯಸನಿಗಳನ್ನಾಗಿಸುತ್ತದೆ. ಅಪರಾಧ ಕೃತ್ಯಗಳಿಗೆ ಪ್ರಚೋದನೆ ನೀಡುವ ವ್ಯಸನ ಅಪಘಾತಗಳಿಗೂ ಕಾರಣವಾಗುವುದು ಎಂದು ಹೇಳಿದರು.
ಜಿಲ್ಲಾ ಕೌಶಲ್ಯಾಭಿವೃದ್ದಿ ಅಧಿಕಾರಿ ಹೆಚ್.ಸಿ, ಪ್ರಶಾಂತ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಮಾದಕ ದ್ರವ್ಯಗಳನ್ನು ವಿತರಿಸುವ ಜಾಲವನ್ನು ಮಟ್ಟ ಹಾಕಲು ಕಾನೂನಿನೊಂದಿಗೆ ಸಹಕರಿಸುವುದು, ಮಾದಕ ವಸ್ತುಗಳನ್ನು ಬಳಸುತ್ತಿರುವವರಿಗೆ ಅವುಗಳ ಮಾರಕ ಪರಿಣಾಮದ ಕುರಿತು ತಿಳುವಳಿಕೆ ನೀಡಿ ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ವಿದ್ಯಾರ್ಥಿಗಳು ಹಾಗೂ ಯುವ ಜನತೆ ಮುಂದಾಗಬೇಕು. ಇತ್ತೀಚಿನ ದಿನಗಳಲ್ಲಿ ಅಮಲು ಪದಾರ್ಥ ಸೇವನೆ ಇಂದಿನ ಯುವ ಜನಾಂಗದಲ್ಲಿ ಹೆಚ್ಚಾಗಿ ಕಂಡು ಬರುತ್ತಿರುವುದು ಆತಂಕ ಮೂಡಿಸುತ್ತಿದ್ದು, ಈ ದೃಷ್ಟಿಯಿಂದ ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಪ್ರಯೋಜನಕಾರಿ, ಇಂತಹ ವ್ಯಸನಗಳ ಸೇವನೆ ಒಂದು ರೀತಿಯ ಫ್ಯಾನ್ ಎಂಬುದಾಗಿ ತಿಳಿದ ಯುವಕರು ಮಾದಕ ವಸ್ತುಗಳತ್ತ ಆಕರ್ಷಿತರಾಗಿ ನಿರಂತರ ಉಪಯೋಗಕ್ಕೆ ತೊಡಗುತ್ತಾರೆ. ಇಂತಹ ಕಾರ್ಯಕ್ರಮ ಆಯೋಜನೆಯಿಂದ ಜಾಗೃತಿ ಮೂಡಿಸಲು ಸಾಧ್ಯ. ಜೀವನದ ಗುರಿ ಹಾಗೂ ಹಾದಿ ತಪ್ಪಿಸುವ ಮಾದಕ ವ್ಯಸನ ಹಾಗೂ ವ್ಯಸನಿಗಳಿಂದ ದೂರವಿದ್ದು ಉತ್ತಮ ಹವ್ಯಾಸಗಳನ್ನು ಬೆಳೆಸಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಿ ಎಂದು ಹೇಳಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಾನಸಿಕ ಆರೋಗ್ಯ ತಜ್ಞರು ಡಾ|| ವಿನಯ್ ಕುಮಾರ್ ಕಾರ್ಯಕ್ರಮದಲ್ಲಿ ಮದ್ಯ ಮತ್ತು ಮಾದಕ ವಸ್ತುಗಳ ಸೇವನೆಯಿಂದಾಗು ದುಷ್ಪರಿಣಾಮಗಳ ಕುರಿತು ಉಪನ್ಯಾಸ ನೀಡಿದರು. ಮಾದಕ ವಸ್ತುಗಳ ಉಪಯೋಗ ಸಾಮಾನ್ಯವಾಗಿ ಪ್ರಪಂಚಾದ್ಯಂತ ಕಂಡು ಬರುವ ಒಂದು ದೊಡ್ಡ ಪಿಡುಗು. ಇದು ಗಂಡು-ಹೆಣ್ಣು, ಬಡವ-ಶ್ರೀಮಂತ ಎನ್ನುವ ಯಾವುದೇ ಭೇದ-ಭಾವವಿಲ್ಲದೆ ಎಲ್ಲೆಡೆಯೂ ಕಂಡು ಬರುವ ತೊಂದರೆ. ಸಾಮಾನ್ಯವಾಗಿ ಉಪಯೋಗಿಸುವ ಮಾದಕ ವಸ್ತುಗಳು: ಮದ್ಯ ತಂಬಾಕು, ಗಾಂಜಾ, ಕೋಕೇನ್, ನಿದ್ದೆ ಮಾತ್ರೆಗಳು, ಮಾದಕ ವಸ್ತುಗಳ ಚಟವು ವ್ಯಕ್ತಿಯ ಮೆದುಳಿನ ಮೇಲೆ ದೀರ್ಘ ಕಾಲದ ಮತ್ತು ಪ್ರಭಾವಿ ಪರಿಣಾಮ ಬೀರುತ್ತದೆ. ಮಾದಕ ವಸ್ತುಗಳ ಸೇವನೆಯ ತವಕ/ಹಪಹಪಿಸುವಿಕೆ, ಮಾದಕ ವಸ್ತುಗಳ ಸೇವನೆ ಮೇಲೆ ನಿಯಂತ್ರಣ ತಪ್ಪಿ ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದು, ಮಾದಕ ವಸ್ತುಗಳ ದುಷ್ಪರಿಣಾಮಗಳಾಗುತ್ತಿದ್ದರೂ ಅದರ ಸೇವನೆ ಹಾಗೂ ಉಪಯೋಗ ಮುಂದುವರಿಸುವುದು. ವ್ಯಕ್ತಿಯು ತನ್ನ ಜವಾಬ್ದಾರಿಗಳನ್ನು ನಿರ್ಲಕ್ಷಿಸಲಾರಂಭಿಸುತ್ತಾನೆ.
ಶಾಲೆಗೆ ಮತ್ತು ಕಾಲೇಜಿಗೆ ಚಕ್ಕರ್ ಹೊಡೆದು ಮಾದಕ ವಸ್ತು ಬಳಸಲು ಹೋಗುವುದು ಕೆಲಸಕ್ಕೆ ಗೈರು ಹಾಜರಾಗುವುದು ಕೆಲಸ ಅರ್ಧಕ್ಕೆ ಬಿಟ್ಟು ಹೋಗುವುದು ಹೆಂಡತಿ ಮಕ್ಕಳನ್ನು ನಿರ್ಲಕ್ಷಿಸುವುದು ಮನೆ ಖರ್ಚಿಗೆ ದುಡ್ಡು ಕೊಡದೆ ಅದನ್ನು ಮಾದಕ ವಸ್ತುಗಳ ಖರೀದಿಯಲ್ಲಿ ಉಪಯೋಗಿಸುವುದು ಸಾಮಾಜಿಕ ಜವಾಬ್ದಾರಿಗಳನ್ನು ನಿರ್ಲಕ್ಷಿಸುವುದು.
ವ್ಯಕ್ತಿಯು ಅಪಾಯಕಾರಿ ಸನ್ನಿವೇಶಗಳಲ್ಲಿ ಮಾದಕ ವಸ್ತುಗಳನ್ನು ಬಳಸಲಾರಂಭಿಸುತ್ತಾನೆ ಹಾಗೂ ಮಾದಕ ವಸ್ತುವಿನ ಮತ್ತಿನಲ್ಲಿರುವಾಗ ಅಪಾಯಕಾರಿ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಮಾದಕ ವಸ್ತುಗಳನ್ನು ಬಳಸಿ ವಾಹನ ಚಲಾಯಿಸುವುದು, ಒಂದೇ ಸಿರಿಂಜಿನಲ್ಲಿ ಎಲ್ಲರೂ ಸೇರಿ ಇಂಜೆಕ್ಷನ್ ತೆಗೆದುಕೊಳ್ಳುವುದು, ಮಾದಕ ವಸ್ತು ತೆಗೆದುಕೊಳ್ಳಲು ಬಳಸಿದ ಸೂಜಿಯನ್ನೇ ಪದೇಪದೆ ಬಳಸುವುದು, ಇವುಗಳಿಂದ ಹಲವಾರು ತೊಂದರೆಗೆ ತುತ್ತಾಗುತ್ತಾರೆ. ಆದರಿಂದ ಇವುಗಳನ್ನು ತ್ಯಜೀಸಿ ಉತ್ತಮ ಜೀವನ ರೂಪಿಸಿಕೊಳ್ಳಿ ಎಂದು ಹೇಳಿದರು.

ಜಿಲ್ಲಾ ಗ್ರಂಥಾಲಯ ಅಧಿಕಾರಿ ಉಮೇಶ್ ಅನಾದಿ ಕಾಲದಿಂದಲೂ ಮಾದಕ ವಸ್ತುಗಳನ್ನು ಜನರು ಬಳಸುತ್ತಿದ್ದರು. ಆದರೆ ಅವು ಕೇವಲ ಮೋಜು ಅಥವಾ ಸಾಮಾಜಿಕ ಸಮಾರಂಭಗಳಲ್ಲಿ ಬಳಕೆಯಾಗುತ್ತಿದ್ದವು ಮತ್ತು ಅವುಗಳು ಮದ್ಯ, ಹೊಗೆಸೊಪ್ಪು, ಗಾಂಜಾ ಇತ್ಯಾದಿಗಳಿಗೆ ಸೀಮಿತವಾಗಿದ್ದವು.
ಸಮಯ ಕಳೆದಂತೆ ಹೊಸ-ಹೊಸ ರಾಸಾಯನಿಕ ಮಾದಕ ವಸ್ತುಗಳನ್ನು ತಯಾರಿಸಲಾಯಿತಲ್ಲದೇ, ಅವುಗಳನ್ನು ಉಪಯೋಗಿಸಲು ಹೊಸ ಹೊಸ ವಿಧಾನಗಳನ್ನೂ ಕೂಡ ಜನ ಅನ್ವೇಷಿಸತೊಡಗಿದರು. ಇದು ಒಂದು ಬೃಹತ್ ಮಾರುಕಟ್ಟೆಯಾಗಿ ಬೆಳೆದು ನಿಂತು ಜನರ ದೈಹಿಕ, ಮಾನಸಿಕ ಆರೋಗ್ಯ ಹದಗೆಟ್ಟಿಸಿತ್ತಲ್ಲದೆ, ದೇಶದ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ತೊಡಕುಂಟು ಮಾಡತೊಡಗಿತು. ಇದರಿಂದ ಜನರ ಆರೋಗ್ಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತಲೆ ಇದೆ. ಇನ್ನಾದರೂ ಜನರು ಇವುಗಳ ವ್ಯಸನದಿಂದ ಮುಕ್ತರಾಗಿ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿದೇಶಕರು (ಗೇಡ್-೧) ರೇವಣ್ಣ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ ಮಂಜುನಾಥ್, ಡಾ. ಬಿ.ಆರ್. ಅಂಬೇಡ್ಕರ್ ಪದವಿ ಕಾಲೇಜು ಬಾಲಕರ ವಿದ್ಯಾರ್ಥಿನಿಲಯದ ನಿಲಯ ಪಾಲಕ ಶಿವಶಂಕರ್, ಹಾಗೂ ವಿದ್ಯಾರ್ಥಿಗಳು ಮುಂತಾದವರು ಉಪಸ್ಥಿತರಿದ್ದರು.