ಮಂಡ್ಯ: ಜಗದ್ಗುರು ಬಸವಣ್ಣನವರಿಗಿಂತ ಮೊದಲೇ ಸಮಾಜ ಸುಧಾರಣೆಯಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ರವರು ಮಹತ್ವದ ಪಾತ್ರವನ್ನು ನಿರ್ವಹಿಸಿದ್ದರು ಎಂದು ಅಪರ ಜಿಲ್ಲಾಧಿಕಾರಿ ಬಿ.ಸಿ. ಶಿವಾನಂದಮೂರ್ತಿ ಹೇಳಿದರು.
ಮಾ.12 ರಂದು ನಡೆದ ಕರ್ನಾಟಕದ ಸಂಘ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಸಮಿತಿ ಇವರ ಸಂಯುಕ್ತಾಶ್ರಯದಲ್ಲಿ ನಡೆದ ರೇಣುಕಾಚಾರ್ಯ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶ್ರೀ ಜಗದ್ಗುರು ರೇಣುಕಾಚಾರ್ಯ ರವರ ಸಿದ್ಧಾಂತ ಶಿಖಾಮಣಿ ಎಂಬ ಗ್ರಂಥದಲ್ಲಿ ಎಲ್ಲಾ ಧರ್ಮಗಳಿಗಿಂತ ಮಾನವ ಧರ್ಮ ಶ್ರೇಷ್ಠ ಎಂದು ಪ್ರತಿಪಾದಿಸಲಾಗಿದೆ.
ನಾವೆಲ್ಲರೂ ಕೇವಲ ಒಂದು ಜಾತಿ ಮತಕ್ಕೆ ಸೀಮಿತವಾಗದೆ ಜಗದ್ಗುರು ರೇಣುಕಾಚಾರ್ಯರ ಮಾನವೀಯತೆ ಸಿದ್ಧಾಂತಗಳನ್ನು ಪಾಲಿಸೋಣ, ಅವರ ಮಾರ್ಗದರ್ಶನದಂತೆ ಎಲ್ಲರೂ ಸಮಾನರು ಎಂದು ಮನೋಭಾವನೆಯ ಜೊತೆಗೆ ಬೆಳಕಿನೆಡೆಗೆ ಸಾಗೋಣ, ಮಂಡ್ಯ ಜಿಲ್ಲೆಯಲ್ಲೂ ಸಹ ಶ್ರೀ ರೇಣುಕಾಚಾರ್ಯರ ಪ್ರಭಾವಕ್ಕೊಳಗಾಗಿ ಅನೇಕ ಕ್ರಾಂತಿಗಳು ಜರುಗಿವೆ ಎಂದು ತಿಳಿಸಿದರು.

ಮಠಗಳ ಜಾತ್ಯತೀತ ಕೊಡುಗೆ ಅನನ್ಯ-ಶ್ರೀ ತ್ರಿನೇತ್ರ ಶಿವಯೋಗಿ ಸ್ವಾಮೀಜಿ ಮಠಗಳು ಸಮಾಜಕ್ಕೆ ಜಾತ್ಯತೀತವಾಗಿ ದೊಡ್ಡ ಕೊಡುಗೆಯನ್ನೇ ನೀಡಿವೆ ಎಂದು ಅಭಿಪ್ರಾಯಪಟ್ಟ ಅವರು, ಸಿದ್ದಗಂಗಾ ಮಠ, ಸುತ್ತೂರು ಮಠ ನಮ್ಮ ಬೇಬಿ ಮಠ ಸೇರಿದಂತೆ ರಾಜ್ಯದ ಮಠಗಳ ಶಾಲೆಗಳಲ್ಲಿ, ಹಾಸ್ಟೆಲ್‌ಗಳಲ್ಲಿ ಎಲ್ಲಾ ಜಾತಿ ಜನಾಂಗದ ವಿದ್ಯಾರ್ಥಿಗಳಿರುವುದು ಇದಕ್ಕೆ ಸಾಕ್ಷಿ ಎಂಬುದನ್ನು ಘಂಟಾಘೋಷವಾಗಿ ಹೇಳುತ್ತೇನೆ.

ಶಿವನ ಸ್ವರೂಪವಾಗಿ ಗುರುಗಳು ಈ ಜಗತ್ತಿನಲ್ಲಿ ಇದ್ದಾರೆ. ಅದರಂತೆ ಜಗದ್ಗುರು ಶ್ರೀ ರೇಣುಕಾಚಾರ್ಯರು ಬಂದಿದ್ದಾರೆ. ಗುರುಗಳು ಜ್ಞಾನವನ್ನು ನೀಡಲು, ಅರಿವನ್ನು ನೀಡಲು, ಭಕ್ತರನ್ನು ಬೆಳಕಿನೆಡೆಗೆ ಕರೆದುಕೊಂಡು ಹೋಗಲು ಬರುತ್ತಾರೆ ವಿನಃ ಸಿರಿ ಸಂಪತ್ತು ಗಳಿಸುವುದಕ್ಕಲ್ಲ . ಮಧ್ವಾಚಾರ್ಯರು,ಶಂಕರಾಚಾರ್ಯರು, ಬಸವಣ್ಣನವರು,ಬುದ್ಧ,ಜಗದ್ಗುರು ರೇಣುಕಾಚಾರ್ಯರಾಗಬಹುದು ಎಲ್ಲರೂ ಬಂದ ಉದ್ದೇಶ ಒಂದೇ ಸಮಾಜದ ಕಲ್ಯಾಣಕ್ಕಾಗಿ ಪ್ರತಿಯೊಬ್ಬರಲ್ಲೂ ಸಂಸ್ಕಾರ ಕೊಟ್ಟು ಬೆಳೆಸಲು ಬಂದಿರುವವರು.ಬಸವಣ್ಣನವರ ಕಳಬೇಡ,ಕೊಲಬೇಡ, ಹುಸಿಯ ನುಡಿಯಲು ಬೇಡ , ವಚನ ಸದಾ ಕಾಲಕ್ಕೂ ಪ್ರಸ್ತುತ ಎಂದರು.
ನಂತರ ವಿಶೇಷ ಉಪನ್ಯಾಸ ನೀಡಿ ಮಾತನಾಡಿದ ಶ್ರೀ ಜಗದ್ಗುರು ರೇಣುಕಾಚಾರ್ಯ ವಿಜ್ಞಾನ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಡಾ. ಮಮತಾ ಸಾಲಿಮಠ ಶ್ರೀ ಜಗದ್ಗುರು ರೇಣುಕಾಚಾರ್ಯರು, ಸಮಾಜದ ಒಳಿತಿಗಾಗಿ ಅನೇಕ ಕಾರ್ಯಗಳನ್ನು ಮಾಡಿದ್ದಾರೆ, ಕೊಲ್ಲಿಪಾತಿಯಲ್ಲಿ ವಿವಿಧ ಸಮುದಾಯಗಳ 18 ಮಠಗಳ ನಿರ್ಮಿಸಿದ್ದಾರೆ, ಈಗಲೂ ಸಹ ಅವು ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದರು.

ಸಮಾರಂಭಕ್ಕೂ ಮುನ್ನ ಜಗದ್ಗುರು ಶ್ರೀ ರೇಣುಕಾಚಾರ್ಯ ಪ್ರತಿಮೆಗೆ ಗಣ್ಯರು ಪುಷ್ಪಾರ್ಚನೆ ನೆರವೇರಿಸಿದರು.
ಸಮಾರಂಭದಲ್ಲಿ ಮಳವಳ್ಳಿ ತಾಲೂಕು ಧನಗೂರು ಸಿಂಹಾಸನ ಸಂಸ್ಥಾನ ಮಠದ ಷಡಕ್ಷರ ದೇಶಿಕೇಂದ್ರ ಶಿವಾಚಾರ್ಯ ಸ್ವಾಮಿಗಳು, ಕೆ.ಆರ್.ಪೇಟೆ ತೆಂಡೇಕೆರೆ ಬಾಳೆಹೊನ್ನೂರು ಶಾಖಾ ಮಠದ ಶ್ರೀ ಗಂಗಾಧರ ಶಿವಾಚಾರ್ಯಸ್ವಾಮಿ, ವಿಶೇಷ ಆಹ್ವಾನಿತರಾದ ಜಿಲ್ಲಾ ಬಸವ ಸಮಿತಿ ಅಧ್ಯಕ್ಷ ಎಂ.ಬಿ. ರಾಜಶೇಖರ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ವಿ.ನಂದೀಶ್, ಸರ್ಕಲ್ ಇನ್ಸ್ಪೆಕ್ಟರ್ ನವೀನ್
ಜಗಜ್ಯೋತಿ ಬಸವೇಶ್ವರ ಸಹಕಾರ ಸಂಘದ ನಾಗರಾಜು, ವಿವಿಧ ಸಮಿತಿಯ ಮುಖ್ಯಸ್ಥರಾದ ಕೆ.ಎಸ್. ಷಡಕ್ಷರಿ, ಎಂ.ಎಸ್.ಶಿವಪ್ರಕಾಶ್, ಗೊರವಾಲೆ ಚಂದ್ರಶೇಖರ್ ಉಪಸ್ಥಿತರಿದ್ದರು.