ತುಮಕೂರು: ಹೆಣ್ಣಿನ ಮೇಲೆ ಸಮಾಜದಲ್ಲಿ ನಿರಂತರವಾಗಿ ಆಗುತ್ತಿರುವ ದೌರ್ಜನ್ಯವನ್ನು ಖಂಡಿಸಬೇಕು,ಅತ್ಯಾಚಾರ,ಅನಾಚಾರ,ಧಾರ್ಮಿಕ ಮೂಢನಂಬಿಕೆಗಳು ಹೀಗೆ ಎಲ್ಲದರಲ್ಲೂ ಹೆಣ್ಣು ಶೋಷಣೆಗೆ ಒಳಗಾಗುತ್ತಿದ್ದಾಳೆ,12ನೇ ಶತಮಾನದಲ್ಲಿ ಹೆಣ್ಣಿನ ಹಕ್ಕುಗಳಿಗಾಗಿ,ಸಮಾನತೆಗಾಗಿ ಹೋರಾಟ ಪ್ರಾರಂಭವಾಯಿತು. ಪ್ರತಿ ಹೆಣ್ಣು ಆರ್ಥಿಕವಾಗಿ ಶೈಕ್ಷಣಿಕವಾಗಿ,ಸಾಮಾಜಿಕವಾಗಿ ಬೆಳೆಯಬೇಕು ತಮ್ಮ ಹಕ್ಕುಗಳಿಗಾಗಿ ಸದಾ ಹೋರಾಟ ನಡೆಸಿ ಗಂಡಸಿಗೆ ತಾವೂ ಸಹ ಸರಿಸಮಾನ ಎಂದು ಪ್ರತಿಪಾದಿಸಬೇಕು ಎಂದು ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷ ಮಲ್ಲಿಕಾ ಬಸವರಾಜುರವರು ತಿಳಿಸಿದರು.
ಅವರು ಇಂದು ತುಮಕೂರು ನಗರದ ಶಿವಲಾಸ್ಯ ಸಮುದಾಯ ಭವನದಲ್ಲಿ ನಿರ್ಭಯ ಮಹಿಳಾ ಜಾಗೃತಿ ವೇದಿಕೆ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ವಕೀಲೆ ಎಂ.ಆರ್.ಶೋಭಾ, ಹೆಣ್ಣಿನ ಬಗ್ಗೆ ಇರುವ ವಿವಿಧ ಕಾನೂನುಗಳನ್ನು ತಿಳಿಸುತ್ತಾ ಚಿಕ್ಕ ಮಕ್ಕಳ ಮೇಲೆ ಲೈಂಗಿಕ ಶೋಷಣೆ,ದೌರ್ಜನ್ಯ ನಡೆಯುತ್ತಿದೆ,ಪೋಕ್ಸೋ ಕಾನೂನು ಕಠಿಣವಾಗಿದ್ದು ವಯಸ್ಸಾದವರು ಸಹ ಚಿಕ್ಕ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಿರುವುದು ಇಡೀ ಸಮಾಜ ತಲೆ ತಗ್ಗಿಸುವಂತಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಗೀತಾ ಫ್ಯಾಷನ್ ಡಿಸೈನ್ ಅಕಾಡೆಮಿಯ ಮುಖ್ಯಸ್ಥೆ ಗೀತಾ ಶಾಂತಕುಮಾರ್ ಪ್ರತಿ ಹೆಣ್ಣುಮಕ್ಕಳು ಟೈಲರಿಂಗ್ ನ್ನು ಕಲಿಯಬೇಕು ಇಂದು ಫ್ಯಾಷನ್ ಡಿಸೈನಿಂಗ್ ಗೆ ಉತ್ತಮ ಬೇಡಿಕೆಯಿದೆ ನಮ್ಮ ಸಂಸ್ಥೆಯಿಂದ ಒಂದೇ ದಿನಕ್ಕೆ ಬ್ಲೌಸ್ ಹೊಲಿಯುವುದನ್ನು ಕಲಿಸುತ್ತೇವೆ,ಬಡ ಹೆಣ್ಣು ಮಕ್ಕಳಿಗೆ ನಾವು ಟೈಲರಿಂಗ್ ಹೇಳಿ ಕೊಡಲು ನಮ್ಮ ಸಂಸ್ಥೆ ಸದಾ ಸಿದ್ಧವಿದೆ.

ಇಡೀ ಭಾರತವಲ್ಲದೆ ಇಡೀ ಜಗತ್ತು ಫ್ಯಾಷನ್ ಡಿಸೈನಿಂಗ್ ಗೆ ಉತ್ತಮ ಮಾರುಕಟ್ಟೆ ಹೊಂದಿದೆ ಆದ್ದರಿಂದ ಹೆಣ್ಣುಮಕ್ಕಳು ಫ್ಯಾಷನ್ ಡಿಸೈನಿಂಗ್ ತರಬೇತಿ ಪಡೆದು ತಾವೇ ಸ್ವಂತ ಅಂಗಡಿ ತೆರೆದರೆ ನಾಲ್ಕು ಜನಕ್ಕೆ ಕೆಲಸ ಕೊಡಲು ಸಾಧ್ಯವಾಗುತ್ತದೆ ಜೊತೆಗೆ ತಾವೂ ಸಹ ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ನಿರ್ಭಯ ಮಹಿಳಾ ಜಾಗೃತಿ ವೇದಿಕೆಯ ಅಧ್ಯಕ್ಷೆ ಗೀತಾನಾಗೇಶ್ ರವರು ಹೆಣ್ಣು ತನ್ನ ಕಾಲು ಮೇಲೆ ತಾನು ನಿಲ್ಲಬೇಕು. ಯಾರ ಬಳಿಯೂ ಕೈಚಾಚದೆ ಸ್ವಂತ ಉದ್ಯೋಗವನ್ನು ಹೊಂದಬೇಕು. ವರದಕ್ಷಿಣೆ ಎಂಬುದು ಪೆಡಂಭೂತವಾಗಿ ಹೆಣ್ಣನ್ನು ಕಾಡುತ್ತಿದೆ. ಈ ನಿಟ್ಟಿನಿಲ್ಲಿ ತಾವುಗಳು ಗಟ್ಟಿತನ ಬೆಳೆಸಿಕೊಳ್ಳಿ,ಮಹಿಳಾ ಸಾಧಕಿಯರನ್ನು ಇಂದು ಸನ್ಮಾನಿಸಿ ಗೌರವಿಸಿದ್ದು ನಮಗೆ ಖುಷಿ ಕೊಟ್ಟಿದೆ,ಅವರಿಗೆ ಸದಾ ನಾವುಗಳು ಪ್ರೋತ್ಸಾಹ ನೀಡಿದಾಗ ಆಕೆಗೆ ಮತ್ತಷ್ಟು ಗಟ್ಟಿತನ ಬರುತ್ತದೆ ಎಂದು ಹೇಳಿದರು.

ವೇದಿಕೆಯಲ್ಲಿ ರೇಣುಕಮ್ಮ, ಪುಷ್ಪಲತಾ, ಸಿ.ಎನ್.ಸುಗುಣಾದೇವಿ, ಸಿ.ಎಲ್.ಸುನಂದಮ್ಮ, ಎನ್.ನಂದಿನಿ, ಶ್ರೀಮತಿ ಗೀತಾನಟರಾಜು, ಶ್ರೀಮತಿ ನವ್ಯ.ಜಿ, ಜ್ಯೋತಿಆಚಾರ್ಯ, ಶೈಲಜವೆಂಕಟೇಶ್, ರೂಪ,ಲತಾನಾರಾಯಣ್, ವೇದವತಿ, ಮಂಜುಳಾರಾವ್, ಭಾರತಿರವಿಕುಮಾರ್, ಶಾರದ, ಸವಿತ, ಮಂಗಳಜಯಪ್ರಕಾಶ್, ಅಂಬಿಕಾಮಹೇಶ್ ಮುಂತಾದವರು ಉಪಸ್ಥಿತರಿದ್ದರು.
- ಕೆ.ಬಿ.ಚಂದ್ರಚೂಡ