ತುಮಕೂರು: ನಂದಿನಿ ಹಾಲು ಹಾಗೂ ಇದರ ಉತ್ಪನ್ನಗಳಿಗೆ ವಿವಿಧ ರಾಜ್ಯಗಳಲ್ಲಿ ಮಾರುಕಟ್ಟೆ ವಿಸ್ತರಣೆಯಾಗುತ್ತಿದೆ. ಅಮೂಲ್ ಸಂಸ್ಥೆಗೂ ಪೈಪೋಟಿ ನೀಡುವಷ್ಟು ನಂದಿನಿ ಹಾಲಿನ ಉತ್ಪನ್ನಗಳು ಗ್ರಾಹಕರನ್ನು ಸೆಳೆಯುತ್ತಿವೆ ಎಂದು ತುಮಕೂರು ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ನಿರ್ದೇಶಕ ಎಸ್.ಆರ್.ಗೌಡ ಹೇಳಿದರು.
ನಗರದ ಕುಣಿಗಲ್ ವೃತ್ತದ ಬಳಿ ಜಿಲ್ಲಾ ಜೆಡಿಎಸ್ ಕಾರ್ಯಾಧ್ಯಕ್ಷ ಟಿ.ಆರ್.ನಾಗರಾಜು ಅವರ ನಂದಿನಿ ಪಾರ್ಲರ್ ಮಳಿಗೆ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಹಕರ ನಂಬಿಕೆ, ವಿಶ್ವಾಸಕ್ಕೆ ಪಾತ್ರವಾಗಿರುವ ನಂದಿನಿ ಹಾಲು ಹಾಗೂ ಇದರ ಉತ್ಪನ್ನಗಳು ಆರೋಗ್ಯಕರ ಹಾಗೂ ಗುಣಮಟ್ಟದಿಂದ ಕೂಡಿವೆ ಎಂದರು.
ತುಮಕೂರು ನಗರವೊಂದರಲ್ಲೇ ಪ್ರತಿದಿನ 1.6 ಲಕ್ಷ ಲೀಟರ್ ನಂದಿನಿ ಹಾಲು ಮಾರಾಟವಾಗುತ್ತಿದೆ.ಬೆಂಗಳೂರು ಗ್ರಾಮಾಂತರ ಜಿಲ್ಲೆ, ಬೆಂಗಳೂರು ನಗರದ ಬಹು ಭಾಗಗಳಲ್ಲಿ ನಮ್ಮ ನಂದಿನಿ ಹಾಲಿನ ಗ್ರಾಹಕರಿದ್ದಾರೆ.ಮುಂಬೈ ಮಹಾ ನಗರದಲ್ಲಿ ನಂದಿನಿ ಹಾಲು ಹಾಗೂ ಉತ್ಪನ್ನಗಳ ಮಾರುಕಟ್ಟೆ ವಿಸ್ತರಣೆಯಾಗಿದೆ.ನಂದಿನಿ ಉತ್ಪನ್ನಗಳಿಗೆ ಸ್ಪರ್ಧಾತ್ಮಕ ದರವಿದ್ದು ಹೆಚ್ಚು ಗ್ರಾಹರನ್ನು ತಲುಪುತ್ತಿದೆ ಎಂದರು.
ಹಾಲು ಉತ್ಪಾದಕರಿಗೆ ವಿವಿಧ ಪ್ರೋತ್ಸಾಹದಾಯಕ ಯೋಜನೆಗಳನ್ನು ಒಕ್ಕೂಟ ಜಾರಿಗೆತಂದಿದೆ. ಹಾಲು ಉತ್ಪಾದಕರ ಮಕ್ಕಳ ಶೈಕ್ಷಣಿಕ ನೆರವಿಗೆ ವಿಶೇಷ ಯೋಜನೆ ರೂಪಿಸಲಾಗಿದೆ ಎಂದು ಎಸ್.ಆರ್.ಗೌಡ ಹೇಳಿದರು.

ಒಕ್ಕೂಟದ ಮತ್ತೊಬ್ಬ ನಿರ್ದೇಶಕ ನಂಜೇಗೌಡರು, ನಂದಿನಿ ಹಾಲು ಹಾಗೂ ಉತ್ಪನ್ನಗಳನ್ನು ಖರೀದಿಸುವ ಮೂಲಕ ಸ್ಥಳಿಯ ಹಾಲು ಉತ್ಪಾದಕರು, ರೈತರಿಗೆ ಸಹಾಯ ಮಾಡಿದಂತಾಗುತ್ತದೆ ಎಂದು ತಿಳಿಸಿದರು.
ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ್, ವ್ಯವಸ್ಥಾಪಕ ವಿದ್ಯಾಸಾಗರ್, ನಗರಪಾಲಿಕೆ ಮಾಜಿ ಸದಸ್ಯರಾದ ರಾಮಕೃಷ್ಣಪ್ಪ, ಧರಣೇಂದ್ರಕುಮಾರ್, ಮರಿಗಂಗಯ್ಯ, ಮುಖಂಡರಾದ ಭೈರೇಶ್, ಗಿರೀಶ್, ದರ್ಶನ್, ಶ್ರೀನಿವಾಸ್, ಹನುಮಂತರಾಯಪ್ಪ ಸೇರಿದಂತೆ ಹಲವು ಮುಖಂಡರು ಹಾಜರಿದ್ದು ಶುಭಕೋರಿದರು.
- ಕೆ.ಬಿ.ಚಂದ್ರಚೂಡ