ಕೆ.ಆರ್.ಪೇಟೆ: 2024-25 ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯು ಕರ್ನಾಟಕ ರಾಜ್ಯದಾಧ್ಯಂತ ಏಕ ಕಾಲದಲ್ಲಿ ಮಾ.21 ಇಂದಿನಿಂದ ಆರಂಭಗೊಳ್ಳುತ್ತಿದ್ದು ಮಾ. 04 ತಾಲ್ಲೂಕಿನ 59 ಪ್ರೌಢಶಾಲೆಗಳ ಒಟ್ಟು 2774 ವಿದ್ಯಾರ್ಥಿಗಳು ತಾಲ್ಲೂಕಿನ 06 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಯನ್ನು ಎದುರಿಸಲಿದ್ದಾರೆ.
ಕೆ.ಆರ್.ಪೇಟೆ ಪಟ್ಟಣದ ಕೆಪಿಎಸ್ ಶಾಲೆ, ಹೊಸಹೊಳಲು ರಸ್ತೆಯ ಸರ್ಕಾರಿ ಪದವಿ ಪೂರ್ವ ಕಾಲೇಜು, ಅಕ್ಕಿಹೆಬ್ಬಾಳು, ಬೂಕನಕೆರೆ, ಕಿಕ್ಕೇರಿ ಹಾಗೂ ಸಂತೇಬಾಚಹಳ್ಳಿ ಸೇರಿದಂತೆ ತಾಲೂಕಿನ ಹೋಬಳಿ ಕೇಂದ್ರಗಳಲ್ಲಿ ಪರೀಕ್ಷೆಯು ನಡೆಯಲಿದೆ. 1492 ಬಾಲಕರು ಹಾಗೂ 1281 ಬಾಲಕಿಯರು ಪರೀಕ್ಷೆಗೆ ಹಾಜರಾಗುತ್ತಿದ್ದಾರೆ.
ಸರ್ಕಾರಿ ಪ್ರೌಢ ಶಾಲೆಗಳ 1721 ವಿದ್ಯಾರ್ಥಿಗಳು, ಅನುದಾನಿತ ಪ್ರೌಢ ಶಾಲೆಗಳ 406, ಅನುದಾನ ರಹಿತ ಖಾಸಗಿ ಶಾಲೆಗಳ 641 ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆಯನ್ನು ಬರೆಯುತ್ತಿದ್ದಾರೆ. 2774 ವಿದ್ಯಾರ್ಥಿಗಳಲ್ಲಿ 2679 ವಿದ್ಯಾರ್ಥಿಗಳು ಹೊಸದಾಗಿ ಪರೀಕ್ಷೆಗ ಹಾಜರಾಗುತ್ತಿದ್ದು, 95 ಪುನರಾವರ್ತಿತ ಹಾಗೂ ಖಾಸಗಿ ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ತಿಮ್ಮೇಗೌಡ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ತಾಲ್ಲೂಕಿನಲ್ಲಿ ಯಾವುದೇ ಸೂಕ್ಷ್ಮ, ಅತಿ ಸೂಕ್ಷ್ಮ ಪರೀಕ್ಷಾ ಕೇಂದ್ರಗಳಿರುವುದಿಲ್ಲ. ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲೂ ಸಿಸಿ ಟಿವಿ ಕಣ್ಗಾಲಿರುತ್ತದೆ. ಪ್ರತಿ ಪರೀಕ್ಷಾ ಕೇಂದ್ರಕ್ಕೂ ಒಬ್ಬರು ಸ್ಥಾನಿಕ ಜಾಗೃತ ದಳ ಸಿಬ್ಬಂಧಿ ಹಾಗೂ ತಾಲ್ಲೂಕು ಹಂತದಲ್ಲಿ ತಹಶೀಲ್ದಾರ್, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಣಾಧಿಕಾರಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ನೇತೃತ್ವದಲ್ಲಿ ವಿಚಕ್ಷಣ ದಳವನ್ನು ರಚಿಸಲಾಗಿದೆ. ಪರೀಕ್ಷಾ ಕೇಂದ್ರದ ಸುತ್ತಾ 200 ಮೀಟರ್ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಣೆ ಮಾಡಲಾಗಿದೆ.
ಎಲ್ಲಾ ಪರೀಕ್ಷಾ ಕೇಂದ್ರಗಳ ವ್ಯಾಪ್ತಿಯಲ್ಲಿ ಬರುವ ಜೆರಾಕ್ಸ್ ಅಂಗಡಿಗಳನ್ನು ಮುಚ್ಚಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಪ್ರತಿ ಪರೀಕ್ಷಾ ಕೇಂದ್ರಕ್ಕೂ ಭದ್ರತೆಗಾಗಿ ಪೊಲೀಸ್ ಸಿಬ್ಬಂಧಿ ಹಾಗೂ ವಿದ್ಯಾರ್ಥಿಗಳ ಆರೋಗ್ಯ ಹಿತದೃಷ್ಠಿಯಿಂದ ಆರೋಗ್ಯ ಶುಶ್ರೂಷಕರನ್ನು ನಿಯೋಜಿಸಲಾಗಿದೆ. ವಿದ್ಯಾಥಿಗಳು ಪರೀಕ್ಷಾ ಕೇಂದ್ರದ ಒಳಗೆ ಡಿಜಿಟಲ್ ಸ್ಮಾರ್ಟ್ ಕೈಗಡಿಯಾರ ಅಥವಾ ಯಾವುದೇ ರೀತಿಯ ಉಪಕರಣಗಳನ್ನು ತರುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ತಾಲ್ಲೂಕಿನ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗೆ ಅಗತ್ಯ ಮೂಲಭೂತ ಸೌಲಭ್ಯದ ವ್ಯವಸ್ಥೆ ಮಾಡಲಾಗಿದ್ದು, ಎಲ್ಲಾ ವಿದ್ಯಾರ್ಥಿಗಳಿಗೂ ಪರೀಕ್ಷೆ ಬರೆಯಲು ಪೀಠೋಪಕರಣದ ವ್ಯವಸ್ಥೆ, ಕುಡಿಯುವ ನೀರು ಹಾಗೂ ಶೌಚಾಲಯ ವ್ಯವಸ್ಥೆ ಮಾಡಲಾಗಿದೆ. ಕಳೆದ ಬಾರಿಯ ಪರೀಕ್ಷೆಯಂತೆ ಈ ಬಾರಿಯೂ ಕೂಡ ವಿದ್ಯಾರ್ಥಿಗಳು ಪರೀಕ್ಷಾ ಕೊಠಡಿಗೆ ಅಭಿಮುಖವಾಗಿ ಕುಳಿತು ಪರೀಕ್ಷೆ ಬರೆಯಲಿದ್ದಾರೆ. ಈ ವರ್ಷದ ಪರೀಕ್ಷೆಯನ್ನು ಸುಗಮವಾಗಿ ನಡೆಸಲು ಶಿಕ್ಷಣ ಇಲಾಖೆಯು ಸರ್ವ ಸಿದ್ಧತೆ ಮಾಡಿಕೊಂಡಿದೆ ಎಂದು ತಿಮ್ಮೇಗೌಡ ಅವರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷಾ ನೋಡಲ್ ಅಧಿಕಾರಿ ಹಾಗೂ ಶಿಕ್ಷಣ ಸಂಯೋಜಕರಾದ ಬಿ.ಕೆ.ಹರೀಶ್ ಹಾಜರಿದ್ದರು.
-ಶ್ರೀನಿವಾಸ. ಆರ್.