ಕೆ.ಆರ್.ಪೇಟೆ-ಚಿಣ್ಣರ ಜಾಣರ ಜಗಲಿ ಹರಟೆ ಕಾರ್ಯಕ್ರಮ ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಹಾಗೂ ಸಾಧನೆಯ ಹಾದಿಯಲ್ಲಿ ವಿದ್ಯಾರ್ಥಿಗಳು ಮುನ್ನಡೆಯಲು ಪ್ರೇರಕ ಶಕ್ತಿಯಾಗಿ ಕೆಲಸ ಮಾಡಲಿದೆ ಎಂದು ಶಾಸಕ ಎಚ್.ಟಿ.ಮಂಜು ಹೇಳಿದರು.
ತಾಲೂಕಿನ ಹೇಮಗಿರಿಯ ಬಿ ಜಿ ಎಸ್ ಶಿಕ್ಷಣ ಸಂಸ್ಥೆಯಲ್ಲಿ ಹೇಮಗಿರಿ ಶಾಖಾ ಮಠದ ಗೌರವ ಕಾರ್ಯದರ್ಶಿ ಡಾ.ಜೆ. ಎನ್.ರಾಮಕೃಷ್ಣೆಗೌಡರ ನೇತೃತ್ವದಲ್ಲಿ ಆಯೋಜಿಸಿದ್ದ ಚಿಣ್ಣರ ಜಾಣರ ಜಗಲಿ ಹರಟೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮಕ್ಕಳಲ್ಲಿ ಮಾತನಾಡುವ ಕಲೆಯನ್ನು ವೃದ್ಧಿಸಿ ಲೋಕಜ್ಞಾನದ ಬಗ್ಗೆ ಅಭಿರುಚಿ ಮೂಡಿಸಿ ಮುನ್ನಡೆಸಲು ಹರಟೆ ಕಾರ್ಯಕ್ರಮವು ವರದಾನವಾಗಿದೆ.ಹಿರಿಯರು ನಾಚುವಂತೆ ಪ್ರಭುದ್ದತೆಯಿಂದ ಮಾತನಾಡಿ ವಿಚಾರ ಮಂಡಿಸುವ ವಿದ್ಯಾರ್ಥಿಗಳ ಸುಪ್ತ ಪ್ರತಿಭೆಯು ಅಸಾಮಾನ್ಯವಾಗಿದೆ.ಈ ಹರಟೆ ಕಾರ್ಯಕ್ರಮ ಮಕ್ಕಳ ಸಮಗ್ರವಾದ ವ್ಯಕ್ತಿತ್ವ ವಿಕಸನಕ್ಕೆ ವರದಾನವಾಗಿದೆ ಎಂದು ಹೇಳಿದರು.
ನಾಡಿನ ಪ್ರಖ್ಯಾತ ಹರಟೆ ಕಾರ್ಯಕ್ರಮದ ಖ್ಯಾತಿಯ ಮಾತುಗಾರ ಗುಂಡೂರಾವ್ ಚಿಣ್ಣರ ಜಾಣರ ಜಗಲಿ ಹರಟೆ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿ,ಗ್ರಾಮೀಣ ಪ್ರದೇಶದಲ್ಲಿಯೂ ಪ್ರತಿಭಾವಂತ ವಿದ್ಯಾರ್ಥಿಗಳಿದ್ದಾರೆ.ಮಕ್ಕಳ ಸಮಗ್ರವಾದ ವ್ಯಕ್ತಿತ್ವ ವಿಕಾಸಕ್ಕೆ ಹರಟೆ ಕಾರ್ಯಕ್ರಮ ಸೂಕ್ತವಾದ ವೇದಿಕೆಯಾಗಿದ್ದು,ಮಕ್ಕಳ ಮಾತಿನ ಶೈಲಿಯು ಅಮೋಘವಾಗಿದೆ ಎಂದು ತಿಳಿಸಿ ಕಾರ್ಯಕ್ರಮ ಆಯೋಜಿಸಿದ ರಾಮಕೃಷ್ಣೆಗೌಡರ ದೂರದೃಷ್ಟಿ ಯನ್ನು ಪ್ರಶಂಸಿಸಿದರು.
ತಾಲೂಕು ಜೆಡಿಎಸ್ ಅಧ್ಯಕ್ಷ ಜಾನಕಿರಾಮ್, ಎಪಿಎಂಸಿ ಮಾಜಿ ಅಧ್ಯಕ್ಷ ಐನೋರಹಳ್ಳಿ ಮಲ್ಲೇಶ್, ಪಿಎಲ್ ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಬಿ.ನಂಜಪ್ಪ, ಪತ್ರಕರ್ತರಾದ ಲೋಕೇಶ್, ರಾಜು, ಮನು, ಸೈಯ್ಯದ್ ಕಲೀಲ್, ಪ್ರಾಂಶುಪಾಲ ಆನಂದ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಶಾಲಾ ಮಕ್ಕಳಿಂದ ತಂದೆ ತಾಯಿಗಳಿಗೆ ಪಾದಪೂಜೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
———————–ಮನು ಮಾಕವಳ್ಳಿ ಕೆ ಆರ್ ಪೇಟೆ