ಕೆ ಆರ್ ಪೇಟೆ: ತಾಲ್ಲೂಕು ಅಕ್ಕಿಹೆಬ್ಬಾಳು ಹೋಬಳಿ ಬೀರುವಳ್ಳಿ ಗ್ರಾಮ ಪಂಚಾಯತಿಯಲ್ಲಿ ಲಂಚದ ಹಾವಳಿ ಮಿತೀ ಮೀರಿದ್ದು ಇದನ್ನು ಖಂಡಿಸಿ ಆಡಳಿತಾರೂಢ ಅಧ್ಯಕ್ಷರು ಹಾಗೂ ಗ್ರಾಮ ಪಂಚಾಯತಿ ಸದಸ್ಯರುಗಳೇ ಕಚೇರಿಯ ಬೀಗ ಜಡಿದು ಪ್ರತಿಭಟನೆ ನಡೆಸಿದ ಅಪರೂಪದ ಘಟನೆ ನಡೆಯಿತು.
ಗ್ರಾಮ ಪಂಚಾಯತಿ ಅಧ್ಯಕ್ಷೆ ಸುಜಾತ ನಾಗರಾಜು ನೇತೃತ್ವದಲ್ಲಿ ಗ್ರಾಮ ಪಂಚಾಯತ್ ಕಚೇರಿಗೆ ಬೀಗ ಜಡಿದು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾಕಾರರು ನಮ್ಮ ಬೀರುವಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಯಾವುದೇ ಕೆಲಸಗಳು ಅಧಿಕಾರಿಗಳಿಗೆ ಲಂಚ ನೀಡದೇ ಕ್ರಿಯಾಯೋಜನೆಗೆ ಸೇರಿಸುವುದಿಲ್ಲ. ಕ್ರಿಯಾಯೋಜನೆಗೆ ಸೇರಿದ ಕಾಮಗಾರಿಗಳನ್ನು ವರ್ಕ್ ಆರ್ಡರ್ ಮಾಡಿಸಿಕೊಡಲು ಇಂತಿಷ್ಟು ಲಂಚ ನೀಡಬೇಕಾದ ಅನಿವಾರ್ಯತೆ ಇದೆ. ಇದರಿಂದಾಗಿ ನರೇಗಾ ಕಾಮಗಾರಿಯ ಅನುಷ್ಠಾನ ಮತ್ತು ಪ್ರಗತಿಯಲ್ಲಿ ಬೀರುವಳ್ಳಿ ಗ್ರಾಮ ಪಂಚಾಯಿತಿ ಕಳಫೆ ಸಾಧನೆ ಮಾಡಿದೆ. ಅಧಿಕಾರಿಗಳು ಮನಸೋ ಇಚ್ಚೆ ಕಾಮಗಾರಿಗಳನ್ನು ಕ್ರಿಯಾಯೋಜನೆಗೆ ಸೇರಿಸಿಕೊಂಡು ಸದಸ್ಯರನ್ನು ಕಡೆಗಣಿಸುತ್ತಿದ್ದಾರೆ. ತಮಗೆ ಇಷ್ಟ ಬಂದ ಗುತ್ತಿಗೆದಾರರಿಗೆ ಲಂಚ ಪಡೆದು ಕಾಮಗಾರಿ ನಿರ್ವಹಣೆ ಮಾಡಲು ಅವಕಾಶ ನೀಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಗಂಭೀರ ಆರೋಪ ಮಾಡಿದರು.

ಈ ಸಂಬಂಧ ಹಲವು ಭಾರಿ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿಗಳಿಗೆ ಹಾಗೂ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು, ಇಂಜಿನಿಯರುಗಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಅಧ್ಯಕ್ಷ ಸುಜಾತನಾಗರಾಜು, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಕುಮಾರ್, ಚಂದ್ರಪ್ಪ,ಮಾಜಿ ಸದಸ್ಯ ಈರೇಗೌಡ,ಮಲ್ಲೇಶ್,ಹಾಲಿ ಸದಸ್ಯ ಶೋಭಿತ್,ಲಕ್ಷ್ಮೀಕುಮಾರ್,ಉಪಾಧ್ಯಕ್ಷ ಪ್ರಕಾಶ್,ವಿರೂಪಾಕ್ಷ ಮತ್ತಿತರರು ಧರಣಿಯಲ್ಲಿ ಪಾಲ್ಗೊಂಡಿದ್ದರು.
- ಶ್ರೀನಿವಾಸ್ ಆರ್.