ಮಂಡ್ಯ-ರೈತರು-ಪೂರ್ಣ-ಪ್ರಮಾಣದಲ್ಲಿ-ಸರ್ಕಾರಿ-ಯೋಜನೆಗಳನ್ನು- ಸದುಪಯೋಗ-ಪಡಿಸಿಕೊಳ್ಳಿ-ಎನ್.ಚೆಲುವರಾಯಸ್ವಾಮಿ

ಮಂಡ್ಯ-  ರೈತರು ಪೂರ್ಣ ಪ್ರಮಾಣದಲ್ಲಿ ಸರ್ಕಾರಿ ಯೋಜನೆಗಳನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಕೃಷಿ ಸಚಿವರಾದ ಎನ್ ಚೆಲುವರಾಯಸ್ವಾಮಿ ಹೇಳಿದರು.

ಇಂದು (ಮಾ.24) ನಗರದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಕೃಷಿ ಇಲಾಖೆಯ ವತಿಯಿಂದ ನಡೆದ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಕೃಷಿ ಕವಚ ಕಾರ್ಯಕ್ರಮದ ಕೃಷಿ ಇಲಾಖೆ ಯೋಜನೆಗಳ ಒಗ್ಗೂಡಿತ ಬದು ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಕೃಷಿಯ ಮೂಲಕ ರೈತರು ಆರ್ಥಿಕವಾಗಿ ಸದೃಢರಾಗಲು ಇಂತಹ ಕಾರ್ಯಾಗಾರಗಳು ಅತ್ಯಗತ್ಯ ಎಂದರು.

ಭಾರತದ ಮಾಜಿ ಪ್ರಧಾನಿ ಹಾಗೂ ಶ್ರೇಷ್ಠ ಅರ್ಥಶಾಸ್ತ್ರಜ್ಞ ದಿವಂಗತ ಡಾ. ಮನಮೋಹನ್ ಸಿಂಗ್ ರವರು ಪ್ರಥಮ ಬಾರಿಗೆ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಜಾರಿಗೆ ಗೊಳಿಸಿದರು, ದೇಶದ ಯಾವುದೇ ಪ್ರಜೆಯೂ ಹಸಿವಿನಿಂದ ಬಳಲಬಾರದೆಂದು ಆಹಾರ ಸುರಕ್ಷತಾ ಕಾಯ್ದೆಯನ್ನು ಜಾರಿಗೊಳಿಸಿದ್ದರು.

ಬೇಸಿಗೆ ಕಾಲದಲ್ಲಿ ಹೆಚ್ಚಿನ ನೀರಿನ ಸಮಸ್ಯೆ ಉದ್ಭವಿಸುತ್ತದೆ, ಇದರಿಂದ ಬೆಳೆಹಾನಿ ಸಂಭವ ಹೆಚ್ಚು, ಮೊದಲ ಹಂತದಲ್ಲಿ ಕೃಷಿ ಭಾಗ್ಯ ಯೋಜನೆಯಡಿ ನೀರಿನ ಕೊರತೆ ಇರುವ ರಾಜ್ಯದ 104 ತಾಲ್ಲೂಕುಗಳಲ್ಲಿ ಕೃಷಿ ಹೊಂಡ ಯೋಜನೆಯನ್ನು ಜಾರಿಗೆ ತರಲಾಗಿತ್ತು. ಈಗ 224 ತಾಲ್ಲೂಕುಗಳಲ್ಲೂ ಕೃಷಿ ಹೊಂಡ ನಿರ್ಮಾಣ ಯೋಜನೆಯನ್ನು ಜಾರಿಗೆ ತರಲಾಯಿತು. ಇದರಿಂದ ನೀರಿನ ಕೊರತೆಯಾದ ಸಂದರ್ಭದಲ್ಲಿ 15-30 ದಿನಗಳ ಅವಧಿಗೆ ಕೃಷಿಗೆ ನೀರನ್ನು ನೀಡಬಹುದು ಎಂದು ತಿಳಿಸಿದರು.

ಕೃಷಿ ಇಲಾಖೆಯಲ್ಲಿ ರೈತರಿಗೆ ಹಲವಾರು ಯೋಜನೆಗಳಿದ್ದು, ರೈತರು ಸದುಪಯೋಗ ಪಡಿಸಿಕೊಳ್ಳಬೇಕು. ತಾಲ್ಲೂಕು ಮಟ್ಟದಲ್ಲಿ ಜನಪ್ರತಿನಿಧಿಗಳ ಅಧ್ಯಕ್ಷತೆಯಲ್ಲಿ ಮನರೇಗಾ ಯೋಜನೆ ಕುರಿತು ಕಾರ್ಯಾಗಾರ ನಡೆಸಿ ಹೆಚ್ಚಿನ ಸಾಧನೆ ಮಾಡುವಂತೆ ತಿಳಿಸಿದರು.

ಸರ್ಕಾರ ಬಡವರು, ಹಿಂದುಳಿದ ಹಾಗೂ ಮಹಿಳೆಯರ ಜೀವನ ಸುಧಾರಿಸಲು ಪಂಚ ಗ್ಯಾರಂಟಿ ಯೋಜನೆಯನ್ನು ಜಾರಿಗೆ ತರಲಾಯಿತು. ಇಂತಹ ಯೋಜನೆಯನ್ನು ಈ ಹಿಂದೆ ಯಾವುದೇ ಸರ್ಕಾರ ಜಾರಿಗೆ ತಂದಲ್ಲಿ. ಪಂಚ ಗ್ಯಾರಂಟಿ ಯೋಜನೆಯನ್ನು ನಮ್ಮ ಸರ್ಕಾರ ಜಾರಿಗೆ ತರುವ ಮೂಲಕ ಹೃದಯ ಶ್ರೀಮಂತಿಕೆಯನ್ನು ಮೆರೆದಿದೆ ಎಂದರು.

ಗ್ಯಾರಂಟಿ ಯೋಜನೆಗಳ ಮೂಲಕ ಪ್ರತಿ ತಾಲ್ಲೂಕಿಗೆ ಒಂದು ವರ್ಷಕ್ಕೆ ರೂ 230 ಕೋಟಿ ರೂ ವೆಚ್ಚ ಮಾಡಲಾಗುತ್ತಿದೆ. ಮಂಡ್ಯ ಜಿಲ್ಲೆಗೆ ಒಂದು ವರ್ಷದಲ್ಲಿ ಪಂಚ ಗ್ಯಾರಂಟಿ ಯೋಜನೆಗಾಗಿ 1610 ಕೋಟಿ ರೂ ವೆಚ್ಚವಾಗುತ್ತದೆ. ಈ ಯೋಜನೆಯಲ್ಲಿ ಯಾವುದೇ ಮದ್ಯವರ್ತಿಗಳಲ್ಲಿ ನೇರವಾಗಿ ಹಣ ಪೋಲಾಗದೆ ಫಲಾನುಭವಿಗಳ ಖಾತೆಗೆ ಜಮೆಯಾಗುತ್ತಿದೆ. ಗ್ಯಾರಂಟಿ ಯೋಜನೆಗಳ ಜೊತೆಗೆ ಹಲವಾರು ಅಭಿವೃದ್ಧಿ ಕೆಲಸಗಳು ಸಹ ನಿರಂತರವಾಗಿ ನಡೆಯುತ್ತಿದೆ ಎಂದರು.

ಸಭೆಯಲ್ಲಿ ಶ್ರೀರಂಗಪಟ್ಟಣ ವಿಧಾನಸಭಾ ಶಾಸಕ ಹಾಗೂ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ಅಧ್ಯಕ್ಷರಾದ ಎ.ಬಿ. ರಮೇಶ್ ಬಂಡಿಸಿದ್ದೇಗೌಡ, ಮೈಷುಗರ್ ಅಧ್ಯಕ್ಷ ಗಂಗಾಧರ, ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ ಆರ್ ನಂದಿನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಜಂಟಿ ಕೃಷಿ ನಿರ್ದೇಶಕ ಅಶೋಕ್, ಬೆಲ್ಲದ ನಾಡು ರೈತ ಉತ್ಪಾದಕ ಕಂಪನಿಗಳು ಒಕ್ಕೂಟದ ಅಧ್ಯಕ್ಷ ಕಾರಸವಾಡಿ ಮಹದೇವ, ಮಂಡ್ಯ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾನಿಲಯದ ವಿಶೇಷಾಧಿಕಾರಿ ಡಾ.ಕೆ. ಎಂ. ಹರಿಣಿ ಕುಮಾರ್, ನರೇಗಾ ಆಯುಕ್ತಾಲಯ ಜಂಟಿ ನಿರ್ದೇಶಕಿ ಲಲಿತಾ ರೆಡ್ಡಿ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

× How can I help you?