ಮಂಡ್ಯ- ಅರಣ್ಯ ಪ್ರದೇಶದಲ್ಲಿ ದಶಕಗಳ ಹಿಂದಿನಿಂದಲೂ ಸಮರ್ಪಕವಾದ ಭೂ ದಾಖಲೆಗಳೊಂದಿಗೆ ವಾಸಿಸುತ್ತಿರುವ ಜನರನ್ನು ಅರಣ್ಯಾಧಿಕಾರಿಗಳು ಓಕ್ಕಲೆಬ್ಬಿಸುವ ಪ್ರಯತ್ನ ಮಾಡಬೇಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಕೃಷಿ ಸಚಿವ ಎನ್ ಚೆಲುವರಾಯಸ್ವಾಮಿ ಹೇಳಿದರು.
ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಗಣಿ ಮತ್ತು ಅರಣ್ಯ ಇಲಾಖೆಗೆ ಸಂಬಂಧ ಪಟ್ಟ ಅಧಿಕಾರಿಗಳೊಂದಿಗೆ ಆಯೋಜಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ನಾವೆಲ್ಲರೂ ರೈತಾಪಿ ಕುಟುಂಬದಿಂದ ಬಂದವರು ಹಾಗಾಗಿ ಹಳ್ಳಿಯ ಜೀವನಶೈಲಿ ನಮಗೆ ಹೊಸತಲ್ಲ, ಅರಣ್ಯ ಪ್ರದೇಶದಲ್ಲಿ ಜೀವನೋಪಾಯಕ್ಕಾಗಿ ಜೀವನ ನಡೆಸುತ್ತಿರುವ ಜನರ ಮೇಲೆ ಅಧಿಕಾರಿಗಳು ಒತ್ತಡ ಏರಬೇಡಿ ಎಂದು ಹೇಳಿದರು.
ಈಗಾಗಲೇ ಸರ್ಕಾರದಿಂದಲೇ ಜಾಗ ಗುರುತಿಸಿ ಅವರಿಗೆ ಭೂಮಿ( ಹಕ್ಕು) ಪತ್ರವನ್ನು ನೀಡಲಾಗಿದೆ, ಅಂತಹ ಸ್ಥಳಗಳನ್ನು ಕೈಬಿಟ್ಟು ಉಳಿದ ಅರಣ್ಯ ಪ್ರದೇಶಗಳನ್ನು ಗುರುತಿಸಿ ಸರ್ವೆ ನಡೆಸಿ, ಅರಣ್ಯಾಧಿಕಾರಿಗಳು ಕಾಡಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಗಿಡಗಳನ್ನು ನೆಡುವ ಕಾರ್ಯ ಕೈಗೊಳ್ಳಿ ಎಂದು ಸೂಚನೆ ನೀಡಿದರು.
ಅನೇಕ ಸಂದರ್ಭಗಳಲ್ಲಿ ಜಿಲ್ಲೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ಸಂಭವಿಸುವ ಸಾಧ್ಯತೆ ಇರುತ್ತದೆ ಅದರಿಂದ ಜಿಲ್ಲಾ ಮಟ್ಟದ ಎಲ್ಲಾ ಅಧಿಕಾರಿಗಳು ಸರ್ಕಾರದಿಂದ ಅವರಿಗೆ ನೀಡಲಾಗಿರುವ ನಿವಾಸಗಳಲ್ಲಿ ಕಡ್ಡಾಯವಾಗಿ ವಾಸಿಸಬೇಕು, ಅಹಿತಕರ ಘಟನೆಗಳು ನಡೆದ ಸಂದರ್ಭದಲ್ಲಿ ಅಂತಹ ಪ್ರಕರಣಗಳನ್ನು ಅತ್ತಿಕುವಲ್ಲಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು.

ಗಣಿ ಅಧಿಕಾರಿಗಳು ಹೆಚ್ಚಿನ ದಕ್ಷತೆಯಿಂದ ಕಾರ್ಯ ನಿರ್ವಹಿಸಿ, ಜಿಲ್ಲೆಯಲ್ಲಿ ಅನುಮತಿ ಇಲ್ಲದೆ ಯಾವುದೇ ಕಾರಣಕ್ಕೂ ಗಣಿಗಾರಿಕೆ ಅಥವಾ ಭೂ ಸಂಪತ್ತನ್ನು ಲೂಟಿ ಮಾಡುವ ಪ್ರಕರಣಗಳು ದಾಖಲಾಗದಂತೆ ಕಟ್ಟುನಿಟ್ಟಿನ ಕ್ರಮವಹಿಸಿ, ಅಕ್ರಮ ಗಣಿಗಾರಿಕೆ ನಡೆಸುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಎಚ್ಚರಿಸಿದರು.
ಜಿಲ್ಲಾಧಿಕಾರಿ ಡಾ ಕುಮಾರ ಅವರು ಮಾತನಾಡಿ ಮದ್ದೂರಿನ ಶಿಂಷಾ ನದಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅಕ್ರಮ ಮರಳು ಸಾಗಣೆ ನಡೆಯುತ್ತಿದೆ ಎಂದು ಮಾಹಿತಿ ಇದೆ, ಪ್ರಸ್ತುತ 17 ಕ್ಕೂ ಹೆಚ್ಚು ಮರಳು ದಂಧೆ ಪ್ರಕರಣ ದಾಖಲಾಗಿದ್ದು ಕಾನೂನು ಕ್ರಮ ಜಾರಿಗೊಳಿಸಲಾಗಿದೆ, ಗಣಿ ಅಧಿಕಾರಿಗಳು ಹೆಚ್ಚಿನ ಮುತುವರ್ಜಿ ವಹಿಸಿ ಆಕ್ರಮ ಮರಳು ಸಾಗಾಣಿಕೆಗೆ ತಿಲಾಂಜಲಿ ಬಿಡಬೇಕು ಎಂದರು.
ಅರಣ್ಯ ಪ್ರದೇಶದಲ್ಲಿ ಸೂಕ್ತ ದಾಖಲೆಗಳೊಂದಿಗೆ ವಾಸಿಸುತ್ತಿರುವ ಜನರನ್ನು ಓಕ್ಕಲೆಬ್ಬಿಸದೆ ಸಾಧ್ಯವಾದಲ್ಲಿ ಅವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ, ಇಂತಹ ಸೂಕ್ಷ್ಮ ಪ್ರಕರಣಗಳನ್ನು ಕಾನೂನು ದೃಷ್ಟಿಯ ಜೊತೆಗೆ ಮಾನವಿಯತೆ ಇಂದಲೂ ನೋಡಬೇಕು ಎಂದು ಹೇಳಿದರು.
ನಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅವರು ಮಾತನಾಡಿ ಇತ್ತೀಚೆಗೆ ನಾಗಮಂಗಲದಲ್ಲಿ ಬ್ಲಾಸ್ಟಿಂಗ್ನಿಂದ ಸಾವು ಸಂಭವಿಸಿದೆ, ಅರಣ್ಯ ಪ್ರದೇಶಗಳಲ್ಲಿ ಯಾರು ಯಾವುದೇ ರೀತಿಯ ಅನುಮತಿ ಇಲ್ಲದೆ ಸ್ಪೋಟಕ ವಸ್ತುಗಳನ್ನು ಬಳಸದಂತೆ ಕ್ರಮವಹಿಸಿ, ನಿಯಮ ಮೀರಿ ಯಾರಾದರೂ ದುಷ್ಕರ್ಮಿಗಳು ಸ್ಪೋಟಕಗಳನ್ನು ಸ್ಪೋಟಿಸಿದರೆ ಅಂತಹವರು ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸಭೆಯಲ್ಲಿ ಉಪವಿಭಾಗಾಧಿಕಾರಿಗಳಾದ ಶಿವಮೂರ್ತಿ, ಶ್ರೀನಿವಾಸ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಆಧಿಕಾರಿ ಪುಷ್ಪ, ಜಿಲ್ಲಾ ಅರಣ್ಯಾಧಿಕಾರಿ ರಾಜು ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.