ಎಚ್.ಡಿ.ಕೋಟೆ: ಪಟ್ಟಣದ ಪುರಸಭೆಯ ಮಾಜಿ ಶಾಸಕ ದಿ.ಎಸ್.ಚಿಕ್ಕಮಾದು ಸಭಾಂಗಣದಲ್ಲಿ 2025-26 ನೇ ಸಾಲಿನ 65.24 ಲಕ್ಷ ರೂ,ವೆಚ್ಚದ ಆಯವ್ಯಯವನ್ನು ಪುರಸಭೆ ಸ್ಥಾಯಿಸಮಿತಿ ಅಧ್ಯಕ್ಷ ಮಧುಕುಮಾರ್ ಮಂಡಿಸಿದರು.
ಪ್ರಕೃತಿ ವಿಕೋಪದಡಿ ಪಟ್ಟಣದಲ್ಲಿ ಮಳೆಗೆ ಹಾನಿಗೊಳಗಾದ ಸಾರ್ವಜನಿಕರಿಗೆ ರೂ, 20 ಸಾವಿರಗಳನ್ನು ನೀಡುವುದು. ಹುಣಸೂರು-ಬೇಗೂರು ಮುಖ್ಯರಸ್ತೆಯ ಚಿತ್ತದಾಮ ಬಳಿ ಕಮಾನು ನಿರ್ಮಾಣಕ್ಕೆ 8 ಲಕ್ಷರೂ, ಪುರಸಭೆ ವ್ಯಾಪ್ತಿಯ ರಸ್ತೆ ಇಕ್ಕೆಲಗಳಲ್ಲಿ ಅರಣ್ಯೀಕರಣ ಮಾಡಲು ಎರಡು ಲಕ್ಷರೂ, ಮೀಸಲಿಡಲಾಗಿದೆ.
ಸರ್ಕಾರದಿಂದ ಬರುವ ಹದಿನೈದನೇ ಹಣಕಾಸು ಯೋಜನೆಯ 98 ಲಕ್ಷ ರೂ, ಎಸ್ ಎಫ್ ಸಿ ವಿದ್ಯುತ್ ಶಕ್ತಿ ಅನುದಾನ 2 ಕೋ, 2 ಲಕ್ಷ ರೂ,
ಕುಡಿಯುವ ನೀರಿಗೆ 8 ಲಕ್ಷ ಅನುದಾನದೊಂದಿಗೆ ಪುರಸಭೆಯ ಅನುದಾನ ಬಳಸಿ ಪಟ್ಟಣವನ್ನು ಅಭಿವೃದ್ಧಿ ಪಡಿಸಲು ಬಜೆಟ್ ನಲ್ಲಿ ಘೋಷಿಸಲಾಗಿದೆ.
ಯಾವ ಯಾವುದಕ್ಕೆ ಖರ್ಚು (ಲಕ್ಷ ರೂ,)
ಬೀದಿ ದೀಪ ನಿರ್ವಹಣೆಗೆ 22, ನೀರು ಸರಬರಾಜು ವೆಚ್ಚಕ್ಕೆ 64, ವಾಹನಗಳ ಇಂಧನ ಹಾಗೂ ದುರಸ್ಥಿ ಹಾಗೂ ನಿರ್ವಹಣೆಗೆ 35.70
ಹೊರಗುತ್ತಿಗೆ ನೌಕರರ ವೇತನಕ್ಕೆ 60, ಪೌರಕಾರ್ಮಿಕರ ಬೆಳಗಿನ ಉಪಹಾರಕ್ಕೆ 7, ಕಚೇರಿ ಯಂತ್ರೋಪಕರಣ ಹಾಗೂ ಕಂಪ್ಯೂಟರ್ ಗಳಿಗೆ 5, ಒಳಚರಂಡಿ ಹಾಗೂ ರಸ್ತೆಗಳ ನಿರ್ಮಾಣಕ್ಕೆ 1 ಕೋ, ರೂ, ಮಳೆ ನೀರು ಚರಂಡಿ ನಿರ್ಮಾಣಕ್ಕೆ 10 ಲಕ್ಷ, ರೂ, ಅಂದಾಜಿಸಲಾಗಿದೆ.

ಪುರಸಭೆಯ ಆದಾಯದ ಮೂಲಗಳು ಲಕ್ಷ ರೂ, ಗಳಲ್ಲಿ :-
- ಆಸ್ತಿ ತೆರಿಗೆ, ದಂಡ, ಬಡ್ಡಿ 1ಕೋ, 95.
- ನೀರಿನ ತೆರಿಗೆ 45
- ಮಳಿಗೆಗಳ ಬಾಡಿಗೆ 8
- ಉದ್ದಿಮೆ ಪರವಾನಗಿ 12
- ಸಂತೆ, ಫುಟ್ ಪಾತ್, ಆಡು, ಕುರಿ, ಕೋಳಿ, ಮೀನಿನ ಅಂಗಡಿ, ನೆಲಬಾಡಿಗೆ ವೆಚ್ಚ 23.55
- ಕಟ್ಟಡ ಪರವಾನಗಿ, ಮೇಲ್ವಿಚಾರಣೆ ಖಾತೆ ಬದಲಾವಣೆ 25.05 ಬರುವ ಆದಾಯಗಳನ್ನು ಸಂಗ್ರಹಿಸಿ ಅಭಿವೃದ್ಧಿ ಕಾರ್ಯಗಳನ್ನು ನಡೆಸಲು ಉದ್ದೇಶಿಸಲಾಗಿದೆ.
ಹತ್ತಾರು ಸಲಹೆ ನೀಡಿದ ಸದಸ್ಯರು – ಬಜೆಟ್ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಸದಸ್ಯರುಗಳು:- ಪುರಸಭೆ ವ್ಯಾಪ್ತಿಯ ಸ್ಮಶಾನಗಳಿಗೆ ನೀರಿನ ವ್ಯವಸ್ಥೆ ಒದಗಿಸಬೇಕು. ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನಿಸುವುದು, ಪಟ್ಟಣದ ವರ್ತಕರು ಮೃತಪಟ್ಟ ಸಂದರ್ಭದಲ್ಲಿ ಅವರಿಗೆ ಪುರಸಭೆಯಿಂದ ಶವಸಂಸ್ಕಾರಕ್ಕೆ ನೆರವಾಗಬೇಕು. ಹ್ಯಾಂಡ್ ಪೋಸ್ಟ್ ನಲ್ಲಿ ವಾಹನ ದಟ್ಟಣೆಗೆ ಪರಿಹಾರ ಕಂಡುಕೊಳ್ಳಬೇಕು. ತ್ಯಾಜ್ಯವಿಲೇವಾರಿಗೆ ಕ್ರಮ ಕೈಗೊಳ್ಳಬೇಕು. ಪಟ್ಟಣದ ಪ್ರಮುಖ ಬೀದಿಯಲ್ಲಿರುವ ಬೀದಿ ದೀಪಗಳು ಹಳೆಯದಾಗಿ ರುವುದರಿಂದ ಪಾದಚಾರಿಗಳು ಹಾಗೂ ವಾಯುವಿಹಾರಿಗಳಿಗೆ ತೊಂದರೆಯಾಗಿದೆ. ಬೀದಿ ದೀಪಗಳಿಗೆ ನೂತನ ಮಾದರಿಯ ಬಲ್ಬ್ ಗಳನ್ನು ಅಳವಡಿಸಬೇಕು. ಉದ್ಯಾನವನಗಳನ್ನು ಅಭಿವೃದ್ಧಿ ಪಡಿಸಬೇಕು. ಪ್ರಕೃತಿ ವಿಕೋಪದಡಿ ಪುರಸಭೆಯಿಂದ ಸಹಾಯ ಧನ ನೀಡುವುದು ಸ್ವಾಗತಾರ್ಹ. ಈ ಅನುದಾನವನ್ನು ಐದು ಸಾವಿರ ರೂ, ಗಳಿಗೆ ಹೆಚ್ಚಿಸಲು ಅನುಮೋದನೆ ಎಲ್ಲ ಸದಸ್ಯರು ಒಪ್ಪಿಗೆ ಸೂಚಿಸಿದರಲ್ಲದೇ, ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಗಮನಹರಿಸಬೇಕು ಎಂಬಿತ್ಯಾದಿ ಸಲಹೆಗಳನ್ನು ನೀಡಿದರು.
ಬಜೆಟ್ ವೇಳೆ ನೀರಿಗಾಗಿ ಪ್ರತಿಭಟನೆ:-
ಅತ್ತ ಪುರಸಭೆಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಬಜೆಟ್ ಮಂಡಿಸಲು ಸಿದ್ಧತೆ ನಡೆಸುತ್ತಿರುವಾಗಲೇ 8ನೇ ವಾರ್ಡ್ ನ ನಿವಾಸಿಗಳು ನೀರಿಗಾಗಿ ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ನಿವಾಸಿ ಚಿಕ್ಕನಾಯಕ ಮಾತನಾಡಿ, ಕಳೆದ ಎರಡು, ಮೂರು ವರ್ಷಗಳಿಂದ ನೀರಿಗೆ ಹಾಹಕಾರವಿದೆ. ಈ ಸಂಬಂಧ ವಾರ್ಡ್ ಸದಸ್ಯೆಗೆ ಹಾಗೂ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದರು ಸಮಸ್ಯೆ ಬಗೆಹರಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕುಡಿಯುವ ನೀರು ಸಮರ್ಪಕವಾಗಿ ಬರುತ್ತಿಲ್ಲ. ಈ ಬಗ್ಗೆ ನೀರುಗಂಟಿಯನ್ನು ಪ್ರಶ್ನಿಸಿದರೆ ಅಸಡ್ಡೆಯ ಉತ್ತರ ನೀಡುತ್ತಾರೆ. ಇದರಿಂದ ನಮಗೆ ಸಾಕಷ್ಟು ತೊಂದರೆಯಾಗುತ್ತಿದೆ ಎಂದು ವಾರ್ಡ್ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು.
ಹಬ್ಬ-ಹರಿದಿನಗಳಲ್ಲಿ ನೀರಿಗಾಗಿ ಇನ್ನಿಲ್ಲದ ಸಂಕಷ್ಟ ಅನುಭವಿಸುತ್ತಿದ್ದೇವೆ. ನಮ್ಮ ವಾರ್ಡ್ ಸದಸ್ಯೆ ನಾಪತ್ತೆಯಾಗಿದ್ದಾರೆ. ಸಮಸ್ಯೆ ಬಗೆಹರಿಸದಿದ್ದರೆ, ಪುರಸಭೆ ಕಚೇರಿಗೆ ಬೀಗ ಜಡಿದು ಉಪವಾಸ ಸತ್ಯಾಗ್ರಹ ಕೈಗೊಳ್ಳಬೇಕಿದೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು. ಮಧು ಸೇರಿದಂತೆ ವಾರ್ಡ್ ನ ಸಾರ್ವಜನಿಕರು ಭಾಗವಹಿಸಿದ್ದರು.

ಈ ವೇಳೆ ಪುರಸಭಾ ಸದಸ್ಯೆ ಮಿಲ್ ನಾಗರಾಜು ಮಾತನಾಡಿ, ಪಟ್ಟಣದಲ್ಲಿ ನಾಯಿಗಳ ಹಾವಳಿ ಹೆಚ್ಚಾಗಿದೆ. ನಾಯಿಗಳನ್ನು ಸೆರೆಹಿಡಿಯಬೇಕು. ಪಟ್ಟಣದಲ್ಲಿ ತೆರಿಗೆ ಸಂಗ್ರಹಕ್ಕೆ ಹೆಚ್ಚಿನ ಒತ್ತು ನೀಡಬೇಕು. ಸಂಗ್ರಹಿಸಿದ ಹಣವನ್ನು ತುರ್ತು ಜನೋಪಯೋಗಿ ಕೆಲಸಕ್ಕೆ ಬಳಸಿಕೊಳ್ಳಬೇಕು ಎಂದರು.

ಪುರಸಭಾ ಸದಸ್ಯ ಎಚ್.ಸಿ.ನರಸಿಂಹಮೂರ್ತಿ ಮಾತನಾಡಿ, ಸರ್ಕಾರ ನದಿ ನೀರು ಶುದ್ಧೀಕರಣ ಮಾಡಲು 2 ಕೋ, 18 ಲಕ್ಷ ರೂ, ಅನ್ನು ಎಚ್.ಡಿ.ಕೋಟೆ ಪುರಸಭೆಗೆ ನೀಡಿದೆ. ಅದನ್ನು ಸಮರ್ಪಕವಾಗಿ ಬಳಸಿಕೊಂಡು ಜರೂರಾಗಿ ಕಾಮಗಾರಿ ನಡೆಸಬೇಕು.ಎರಡನೇ ಹಂತದ ಕಬಿನಿ ಕುಡಿಯುವ ನೀರಿಗೆ ಶಾಸಕರು ಅನುದಾನ ನೀಡಿದ್ದಾರೆ ಅದನ್ನು ಬಳಸಿಕೊಳ್ಳಬೇಕು ಎಂದರು.
ಈ ವೇಳೆ ಪುರಸಭೆ ಅಧ್ಯಕ್ಷೆ ಶಿವಮ್ಮ ಚಾಕಹಳ್ಳಿ ಕೃಷ್ಣ, ಉಪಾಧ್ಯಕ್ಷ ಆಸಿಫ್ ಇಕ್ಬಾಲ್, ಸದಸ್ಯರಾದ ಐಡಿಯಾ ವೆಂಕಟೇಶ್, ಮಿಲ್ ನಾಗರಾಜು, ರಾಜು ವಿಶ್ವಕರ್ಮ, ಎಚ್.ಸಿ.ನರಸಿಂಹಮೂರ್ತಿ, ನಂಜಪ್ಪ, ಲೋಕೇಶ್, ಪ್ರೇಮ್ ಕುಮಾರ್, ಸರೋಜಮ್ಮ, ಅನಿತಾ ನಿಂಗನಾಯಕ, ನಾಗಮ್ಮ, ದರ್ಶಿನಿ ಯಶ್ವಂತ್, ನಂದಿನಿ, ನಾಮನಿರ್ದೇಶಿತ ಸದಸ್ಯರು ಹಾಗೂ ಪುರಸಭಾ ಮುಖ್ಯಾಧಿಕಾರಿ ಸುರೇಶ್ ಸೇರಿದಂತೆ ಸಿಬ್ಬಂದಿ ವರ್ಗದವರು ಇದ್ದರು.
– ಶಿವಕುಮಾರ ಕೋಟೆ