ತುಮಕೂರು-ಡಿ.ಕೆ.ಶಿವಕುಮಾರ್-ರಾಜೀನಾಮೆ-ಒತ್ತಾಯಿಸಿ-ಜಿಲ್ಲಾ- ಜೆಡಿಎಸ್-ಪ್ರತಿಭಟನೆ

ತುಮಕೂರು:ಸಂವಿಧಾನ ಬದಲಾವಣೆ ಮಾಡುವುದಾಗಿ ಹೇಳಿಕೆ ನೀಡಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರಾಜೀನಾಮೆ ನೀಡಬೇಕುಎಂದು ಒತ್ತಾಯಿಸಿ ಜಿಲ್ಲಾ ಜೆಡಿಎಸ್ ಮುಖಂಡರು ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿ, ಭಾರತ ಸಂವಿಧಾನ ಸೂರ್ಯ ಇದ್ದಂತೆ ಅದರಿಂದ ಬೆಳಕು ಪಡೆಯಬಹುದಷ್ಟೇ ಮುಟ್ಟಲು ಸಾಧ್ಯವಿಲ್ಲ ಎಂದು ಮುಖಂಡರು ಎಚ್ಚರಿಕೆ ನೀಡಿದರು.

ಜಿಲ್ಲಾ ಜೆಡಿಎಸ್ ಕಚೇರಿಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆಯಲ್ಲಿ ಆಗಮಿಸಿದ ಮುಖಂಡರು ಡಿಸಿ ಕಚೇರಿ ಬಳಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿಪತ್ರ ಸಲ್ಲಿಸಿದರು. ಈ ವೇಳೆ ಮಾತನಾಡಿದ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಆರ್.ಸಿ.ಆಂಜನಪ್ಪ, ಡಾ.ಬಿ.ಆರ್.ಅಂಬೇಡ್ಕರ್ ರಚಿಸಿರುವ ಸಂವಿಧಾನವನ್ನು ಬದಲಾವಣೆ ಮಾಡುವುದಾಗಿ ಉಪಮುಖ್ಯ ಮಂತ್ರಿ ಹೇಳಿರುವುದು ಖಂಡನೀಯ, ಕೂಡಲೇ ಅವರುತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು.ಸಾಂವಿಧಾನಿಕ ಹುದ್ದೆಯಲ್ಲಿರುವ ಡಿ.ಕೆ.ಶಿವಕುಮಾರ್ ಇಂತಹ ಬಾಲಿಶ ಹೇಳಿಕೆ ನೀಡಿರುವುದು ಖಂಡನೀಯ ಎಂದರು.


ಭಾರತ್ ಜೋಡೋಯಾತ್ರೆ ಮಾಡಿ ಸಂವಿಧಾನದ ಪ್ರತಿಯನ್ನು ಕೈಯಲ್ಲಿ ಹಿಡಿದುಕೊಂಡು ಪ್ರದರ್ಶನ ಮಾಡಿದ ಕಾಂಗ್ರೆಸ್ ನಾಯಕರ ಉದ್ದೇಶ ಸಂವಿಧಾನ ರಕ್ಷಣೆಗೋ ಅಥವಾ ದುರ್ಬಲಗೊಳಿಸಲೊ ಎಂದು ಹೇಳಬೇಕು.ದೇಶದ ಎಲ್ಲರೂ ಗೌರವಿಸುವ ಅಂಬೇಡ್ಕರ್ ಅವರ ಸಂವಿಧಾನಕ್ಕೆ ಕಾಂಗ್ರೆಸ್ ನಾಯಕರು ಅಪಮಾನ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಯಾವುದೇ ಅಭಿವೃದ್ಧಿ ಕೆಲಸಗಳಾಗಿಲ್ಲ. ದಿನಬಳಕೆ ಪದಾರ್ಥಗಳ ಬೆಲೆ ಹೆಚ್ಚಾಗಿ ಜನಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿದ್ದಾರೆ.ಕಾಂಗ್ರೆಸ್ ನಾಯಕರು ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ.ಸ್ಮಾರ್ಟ್ ಮೀಟರ್ ಟೆಂಡರ್‌ನಲ್ಲಿ ಇಂಧನ ಸಚಿವ ಜಾರ್ಜ್ ಮೇಲೆ 15ಸಾವಿರ ಕೋಟಿ ರೂ.ಗಳ ಹಗರಣದ ಆರೋಪ ಕೇಳಿ ಬಂದಿದೆ ಎಂದು ಆರ್.ಸಿ.ಆಂಜನಪ್ಪ ಆರೋಪಿಸಿದರು.

ಸೇವಾದಳ ಜಿಲ್ಲಾಧ್ಯಕ್ಷ ಕೆಂಪರಾಜು, ಬಸವರಾಜು, ನಗರ ಪಾಲಿಕೆ ಮಾಜಿ ಸದಸ್ಯ ಲಕ್ಷ್ಮಣ್ ನರಸಿಂಹರಾಜು, ಮಧುಗೌಡ ಮೊದಲಾದವರು ಭಾಗವಹಿಸಿದ್ದರು.‌

ಕೆ.ಬಿ.ಚಂದ್ರಚೂಡ

Leave a Reply

Your email address will not be published. Required fields are marked *

× How can I help you?