ಅರಕಲಗೂಡು: ತಾಲೂಕಿನ ಶಣವಿನಕುಪ್ಪೆ ಗ್ರಾಮದ ದೇವಸ್ಥಾನದ ಬಳಿ ರಸ್ತೆ ಬದಿ ಜಾಗವನ್ನು ಗ್ರಾಪಂ ಪಿಡಿಒ ಅಕ್ರಮವಾಗಿ ಇ ಖಾತೆ ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ಶನಿವಾರ ಸ್ಥಳಕ್ಕೆ ಭೇಟಿ ನೀಡಿದ್ದ ಅಧಿಕಾರಿಗಳ ವಿರುದ್ದ ಹರಿಹಾಯ್ದರು.
ಗ್ರಾಮದ ಅಂಜನೇಯಸ್ವಾಮಿ ದೇವಸ್ಥಾನ ಬಳಿ ಜಾಗವನ್ನು ಮಹಿಳಾ ಹಾಲು ಉತ್ಪಾದಕರ ಸಂಘದ ಕಟ್ಟಡ ನಿರ್ಮಾಣಕ್ಕೆ ಗ್ರಾಪಂ ಪಿಡಿಒ ಇ ಖಾತೆ ಮಾಡಿಕೊಟ್ಟಿರುವ ಕುರಿತು ಗ್ರಾಮಸ್ಥರು ತಕರಾರು ತೆಗೆದ ಹಿನ್ನಲೆಯಲ್ಲಿ ತಾಪಂ ಇಒ ಪ್ರಕಾಶ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಗ್ರಾಮದ ಕೆಲವರು ಈ ಜಾಗವನ್ನು ಅಕ್ರಮವಾಗಿ ಖಾತೆ ಮಾಡಿಕೊಡಲಾಗಿದೆ. ಸಂಘದ ಕಟ್ಟಡ ಕಟ್ಟಲು ಅವಕಾಶ ನೀಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಮಾತಿನ ಚಕಮಕಿ ನಡೆಯಿತು.
ಗ್ರಾಪಂ ಸದಸ್ಯ ಸಂತೋಷ್ ಮಾತನಾಡಿ, ರಸ್ತೆ ಬದಿ 40 ಅಡಿ ಜಾಗ ಬಿಟ್ಟು ಮನೆ ನಿರ್ಮಿಸಿಕೊಳ್ಳುವಂತೆ ಗ್ರಾಪಂ ಪಿಡಿಒ ಆದೇಶ ಮಾಡಿದ್ದರು. ಅದರಂತೆ ನಿಯಮಾನುಸಾರ 40 ಅಡಿ ಜಾಗ ಬಿಟ್ಟು ಮನೆ ನಿರ್ಮಿಸಿಕೊಳ್ಳಲಾಗಿದೆ. ಈಗ ಜಾಗ ತಮಗೆ ಸೇರಿದೆ, ಈಗ ಏಕಾಏಕಿ ಶ್ರೀ ವೀರಾಂಜನೇಯಸ್ವಾಮಿ ಮತ್ತು ಈಶ್ವರ ದೇವಸ್ಥಾನ ನಡುವಿನ ಜಾಗವನ್ನು ಡೇರಿ ಕಟ್ಟಡ ಕಟ್ಟಲು ರಸ್ತೆ ನಿಯಮಗಳನ್ನೂ ಗಾಳಿಗೆ ತೂರಿ ಅಕ್ರಮವಾಗಿ ಇ ಖಾತೆ ಮಾಡಲಾಗಿದೆ. ಅಲ್ಲದೇ ಸ್ಥಳಕ್ಕೆ ಪೊಲೀಸರನ್ನು ಕರೆಸಲಾಗಿದೆ. ಈ ಹಿಂದೆ ಗ್ರಾಮಸ್ಥರನ್ನು ಒಕ್ಕಲೆಬ್ಬಿಸುವ ಹುನ್ನಾರ ಅಡಗಿದೆ. ಈ ಜಾಗ ದೇವಸ್ಥಾನಗಳ ಕಾರ್ಯಕ್ರಮಗಳಿಗೆ ಅನುಕೂಲಕರವಾಗಿದೆ. ರಸ್ತೆ ಬದಿಯ ಈ ಜಾಗದಲ್ಲಿ ಡೇರಿ ಕಟ್ಟಡ ಕಟ್ಟಲು ಅವಕಾಶ ನೀಡುವುದಿಲ್ಲ. ನಿಯಮಬಾಹಿರವಾಗಿ ಮಾಡಿರುವ ಇ ಖಾತೆಯನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.

ಈ ಕುರಿತು ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ತಾಪಂ ಇಒ ತಿಳಿಸಿದರು.
ಅರಕಲಗೂಡು ಪೊಲೀಸರು ಬಂದೋಬಸ್ತ್ ಏರ್ಪಡಿಸಿದ್ದರು.
- ಶಿವಕುಮಾರ