ಎಚ್.ಡಿ.ಕೋಟೆ:ತಾಲೂಕಿನ ತುಂಬಸೋಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಜಕ್ಕಹಳ್ಳಿ ಗ್ರಾಮದಲ್ಲಿ 15ನೇ ಹಣಕಾಸು ಯೋಜನೆಯ ಕಾಮಗಾರಿಯಲ್ಲಿ ಅಕ್ರಮ ನಡೆದಿದೆ ಎಂದು ಜಕ್ಕಹಳ್ಳಿ ಗ್ರಾಮದ ಕಾಂಗ್ರೆಸ್ ಮುಖಂಡ ಮಲ್ಲೇಶ್ ಆರೋಪಿಸಿದ್ದಾರೆ.
ನಮ್ಮೂರಿನ ಕುಡಿಯುವ ನೀರು ಯೋಜನೆಯ ಪೈಪ್ ಲೇನ್ ಪದೇ, ಪದೇ ದುರಸ್ಥಿಗೆ ಬರುತ್ತಿದ್ದು ಇದಕ್ಕೆ ಶಾಸ್ವತ ಪರಿಹಾರ ಕಲ್ಪಿಸುವಂತೆ ಕಳೆದ 15 ದಿನಗಳ ಹಿಂದೆ ತೀರ್ಮಾನಿಸಲಾಗಿತ್ತು. ಅದರಂತೆಯೇ ಸಮಸ್ಯೆಗೆ ಪರಿಹಾರವಾಗಿ ನೂತನ ಪೈಪ್ ಲೇನ್ ಅಳವಡಿಕೆ ಕಾಮಗಾರಿ ನಡೆಸುವಂತೆ ನಮ್ಮೂರಿನ ಗ್ರಾ.ಪಂ ಸದಸ್ಯರಿಗೆ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಮಧುರಾ ಮೌಖಿಕವಾಗಿ ತಿಳಿಸಿದ್ದರು.
ಕಾಮಗಾರಿಯ ವೆಚ್ಚಕ್ಕಾಗಿ 15ನೇ ಹಣಕಾಸು ಯೋಜನೆಯಲ್ಲಿ 1.98 ಸಾವಿರ ರೂ, ಗಳ ಅಂದಾಜು ಮಾಡಲಾಗಿತ್ತು. ಆದರೆ, ಕಾಮಗಾರಿ ನಡೆಯದೇ 1.98 ಸಾವಿರ ರೂಗಳನ್ನು ಇದೇ ತಿಂಗಳ 2ನೇ ತಾರೀಖಿನಂದು ಕಾಮಗಾರಿ ನಡೆದಿದೆ ಎಂದು ಮೈಸೂರಿನ ಗುತ್ತಿಗೆದಾರರ ಖಾತೆಗೆ ಹಣ ವರ್ಗಾವಣೆಗೊಳಿಸಿ ಪಿ ಡಿ ಓ ಹಾಗೂ ಅಧ್ಯಕ್ಷರು ಕಮಿಷನ್ ಪಡೆಯುವ ಹುನ್ನಾರ ನಡೆಸಿದ್ದಲ್ಲದೇ ಸರ್ಕಾರಕ್ಕೆ ವಂಚಿಸಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದರು.
ಕಾಮಗಾರಿಯ ಗುತ್ತಿಗೆಯನ್ನು ತಾಲೂಕಿನ ಗುತ್ತಿಗೆದಾರರಿಗೆ ನೀಡುವ ಬದಲು ಮೈಸೂರಿನ ಗುತ್ತಿಗೆದಾರರಿಗೆ ನೀಡಿದ್ದೇಕೆ ? ಕಾಮಗಾರಿ ಪ್ರಾರಂಭಿಸುವ ಮುನ್ನವೇ, ಕಾಮಗಾರಿ ಮುಗಿದಿದೆ ಎಂದು ಹಣ ತೆಗೆದಿದ್ದೇಕೆ ? ಇದಲ್ಲದೇ ಪಿಡಿಒ ಮಧುರಾ ವಿರುದ್ಧ ಈ ಹಿಂದೆಯೂ ಸಹ ತಾಲೂಕು ಕಾರ್ಯನಿರ್ವಹಣಾ ಧಿಕಾರಿಗಳಿಗೆ ಹಲವು ದೂರುಗಳು ಹಾಗೂ ಲೋಕಾಯುಕ್ತದಲ್ಲೂ ಸಹ ಪ್ರಕರಣ ದಾಖಲಾಗಿದ್ದರೂ ಇವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದ ಮೇಲಾಧಿಕಾರಿಗಳ ಮೇಲೆ ಹಲವು ಅನುಮಾನ ಮೂಡುತ್ತಿವೆ ಎಂದು ತಿಳಿಸಿದರು.
ಈ ಹಿಂದೆಯೂ ಸಹ ತುಂಬಸೋಗೆ ಗ್ರಾ.ಪಂನಲ್ಲಿ ಹಲವಾರು ಅಕ್ರಮಗಳು ನಡೆದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಇಂದಿನ ಅಕ್ರಮ ಹಾಗೂ ಈ ಹಿಂದಿನ ಎಲ್ಲಾ ಅಕ್ರಮಗಳ ಕುರಿತು ಮೇಲಧಿಕಾರಿಗೆ ಲಿಖಿತ ದೂರು ನೀಡಲಿದ್ದೇನೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಶೀಘ್ರದಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ .
——————ಶಿವು ಕೋಟೆ