ಚಿಕ್ಕಮಗಳೂರು: ಹಿಂದೂ ರಾಷ್ಟ್ರ ಪರಿಕಲ್ಪನೆಯಡಿ ಭಿತ್ತಿದ ಸ್ವಯಂ ಸೇವಕ ಸಂಘದ ಪುಟ್ಟದೊಂದು ಭೀಜ ಇಂದು ಬೃಹತ್ ಹೆಮ್ಮರವಾಗಿ ಬೆಳೆದು ಪ್ರಪಂಚದಲ್ಲೇ ಅತ್ಯಂತ ದೊಡ್ಡ ಧರ್ಮ ಪ್ರಚಾರಕ ಹಾಗೂ ಸಹಾಯಹಸ್ತ ಚಾಚುವ ಸಂಘವಾಗಿದೆ ಎಂದು ದಕ್ಷಿಣ ಕರ್ನಾಟಕ ಆರ್‌ಎಸ್‌ಎಸ್ ಪ್ರಾಂತ ಬೌದ್ಧಿಕ್ ಪ್ರಮುಖ್ ಕೃಷ್ಣ ಪ್ರಸಾದ್ ಹೇಳಿದರು.
ನಗರದ ಬಸವನಹಳ್ಳಿ ಶಾಲೆ ಸಮೀಪ ಯುಗಾದಿ ಹಬ್ಬ ಹಾಗೂ ಆರ್‌ಎಸ್‌ಎಸ್ ಸಂಘಟನೆ ನೂರರ ಸಂವತ್ಸರ ಅಂಗವಾಗಿ ಹಮ್ಮಿಕೊಂಡಿದ್ಧ ನವಯುಗದ ನವಗಾನ ಶುಭ ನುಡಿ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
ರಾಷ್ಟ್ರದ ಹಿತ ಚಿಂತನೆಗಾಗಿ ಆರ್‌ಎಸ್‌ಎಸ್ ಸಂಸ್ಥಾಪಕ ಕೇಶವ್ ಬಲಿರಾಮ್ ಹೆಡ್ಗೆವಾರ್ ಅನೇಕ ಸ ವಾಲು, ಅಪಹಾಸ್ಯವನ್ನು ಎದುರಿಸಿ ಸಂಘವನ್ನು ಗಟ್ಟಿತನದಿಂದ ಸ್ಥಾಪಿಸಿದ ಕಾರಣ, ಇಂದು ದೇಶದಲ್ಲಿ ಸಾವಿರಾರು ಶಾಖೆಗಳು, ಕೋಟ್ಯಾಂತರ ಮಂದಿ ಸ್ವಯಂ ಸೇವಕರು ಭಾರತೆಂಭೆಯ ಸೇವೆಯಲ್ಲಿ ತಮ್ಮನ್ನು ಅರ್ಪಿಸಿಕೊಂಡಿದ್ದಾರೆ ಎಂದರು.
ವಿಶ್ವ ಭೂಪಟದ ಭಾರತೀಯ ನೆಲದಲ್ಲಿ ದೇವಾನುದೇವತೆಗಳು ನೆಲೆಯೂರಲು ಹಾಗೂ ಹಿಂದೂಗಳಾಗಿ ಜನಿಸಲು ಸೌಭಾಗ್ಯ ಪಡೆದಿರಬೇಕು. ಇಲ್ಲಿನ ವಿಶೇಷ ಪೂಜಾಪದ್ಧತಿ ಆಚರಿಸುವ ಹಿಂದೂಗಳಿಗೆ ದೊರಕಿರುವುದು ಸುಮ್ಮನೆಯಲ್ಲ. ಹಿರಿಯರ ಯೋಗದಿಂದ ನಮಗೆ ಧಕ್ಕಿದೆ. ಈ ಪರಂಪರೆ ಉಳಿಸುವ ಜವಾಬ್ದಾರಿ ಪ್ರತಿಯೊಬ್ಬ ಹಿಂದೂಗಳ ಕರ್ತವ್ಯವಾಗಬೇಕು ಎಂದು ಹೇಳಿದರು.

ಬ್ರಿಟಿಷರ ಆಳ್ವಿಕೆಯಲ್ಲಿ ಹಿಂದೂಗಳನ್ನು ಗುಲಾಮರನ್ನಾಗಿಸಿ ನಾಯಿಗಿಂತ ಕಡೆಗಣಿಸಲಾಗಿತ್ತು. ನಮ್ಮ ಆಳ್ವಿಕೆ ನಮಗೆ ಕೊಡಿ ಎನ್ನಲು, ಭಿಕ್ಷೆ ಬೇಡುವ ಸ್ಥಿತಿಯಿತ್ತು. ಇದನ್ನರಿತ ಹೆಡ್ಗೆವಾರ್ ಆರ್‌ಎಸ್‌ಎಸ್ ಸ್ಥಾಪಿಸಿ, ಬ್ರಿಟಿಷರ ಧ್ವಜ ಕೆಳಗಿಳಿಸುವ ಸಂಕಲ್ಪ ಮಾಡಿದರು. ಈ ಸತ್ಯಾಂಶವನ್ನು ಭಾರತ ಸರ್ಕಾರ ನವ ನಿಮೃತಗಳು ಎಂಬ ಪುಸ್ತಕದಲ್ಲಿ ಅಡಕವಾಗಿಸಿದ್ದು, ಓದಿ ದೇಶದ ಇತಿಹಾಸ ಅರಿಯಬೇಕು ಎಂದರು.
ಅಯೋಧ್ಯೆಯಲ್ಲಿ ಬಾಲರಾಮನ ಪಟ್ಟಾಭೀಷೇಕ ಹಾಗೂ 144ನೇ ಮಹಾಕುಂಭ ಮೇಳದ ಭಾಗ್ಯವು ಕಣ್ತುಂಬಿಕೊಂಡ ಭಾರತೀಯರು ಹಾಗೂ ಈ ವಸಂತದಲ್ಲಿ ಜನಿಸಿದ ಪುಟ್ಟಕಂದಮ್ಮಗಳು ಅದೃಷ್ಟವಂತರು. ಈ ಹೋರಾಟದಲ್ಲಿ ನಿರತರಾದವರಿಗೆ ಭಾಗ್ಯ ಲಭಿಸಿಲ್ಲ, ಪೂರ್ವಜರಿಗೂ ಸಿಕ್ಕಿಲ್ಲ. ಈ ಸೌಭಾಗ್ಯ ಧಕ್ಕಿರುವ ಹಿಂದೂಗಳು ಹೆಮ್ಮೆಪಡಬೇಕು ಎಂದು ತಿಳಿಸಿದರು.
ಹಿಂದೂ ರಾಷ್ಟçವೆಂದರೆ ಜನ್ಮವಿತ್ತ ತಾಯಿಯಂತೆ ಗೌರವಿಸುವ ಗುಣ ಬೆಳೆಸಿದ್ದು ಆರ್‌ಎಸ್‌ಎಸ್. ಎಂದ ಅವರು ಸರ್ವಸ್ವವನ್ನು ಭಾರತೆಂಭೆಯ ಸೇವೆಗೆ ಸನ್ನದ್ಧವಾಗಲು ಕೋಟ್ಯಾಂತರ ಸ್ವಯಂ ಸೇವಕರು ರಾಷ್ಟ್ರಕ್ಕಾಗಿ ಅರ್ಪಣೆ ಮಾಡಿಕೊಂಡಿದ್ದಾರೆ. ನಿರ್ಮಲ ಹೃದಯದಿಂದ ಮಾತ್ರ ದೇಶದ ಪ್ರೀತಿ, ವಿಶ್ವಾಸ ಗಳಿಸಬಹುದು ಎಂದು ಹೇಳಿದರು.

ಪ್ರಸ್ತುತ ಕಾಲಘಟ್ಟದಲ್ಲಿ ಹಿಂದೂಗಳನ್ನು ಹತ್ತಿಕ್ಕಲು ಕೆಲವು ಪಕ್ಷ ಹಾಗೂ ಸಂಘಟನೆಗಳು ಸವಾಲು ಹಾಕುತ್ತಿವೆ. ಸಾಮರಸ್ಯ ಕೊರತೆ, ಜಾತಿ, ಭಾಷೆ ಹೆಸರಿನಲ್ಲಿ ಹೊಡೆದಾಳಿಸುತ್ತಿದೆ. ಅಲ್ಲದೇ ಮಹಿಷಾ ಸಂಸ್ಕೃತಿ ಬಿತ್ತುವ ಕೆಲಸವಾಗುತ್ತಿದೆ. ದೇಶಕ್ಕಾಗಿ ಮಡಿದ ರಾಜಗುರು, ಸುಖದೇವ್ ಪ್ರಾಣಕ್ಕೆ ಬೆಲೆಕೊಡಲು ಹಾಗೂ ಸನಾತನ ಸಂಸ್ಕೃತಿ ಉಳಿಸುವ ಕಾರ್ಯ ಹಿಂದೂಗಳಿಂದ ಆಗಬೇಕಿದೆ ಎಂದು ಹೇಳಿದರು.
ದೇಶದ ಸ್ವಯಂ ಸೇವಕರು ರಾಷ್ಟ್ರ ಎಂಬ ಜೀವನ ಮಂತ್ರವನ್ನು ಅಳವಡಿಸಿಕೊಂಡು ನಿಸ್ವಾರ್ಥದಿಂದ ಕಾರ್ಯನಿರ್ವಹಿಸುತ್ತಿವೆೆ. ಮನುಷ್ಯರಾಗಿ ಹುಟ್ಟಿದ ಮೇಲೆ ಪರೋಪಕಾರಿ ಸೇವೆಗೆ ಮುಡಿಪಿಡಲು ಆರ್‌ಎಸ್ ಎಸ್ ಸಂಘಟನೆ ಪ್ರೇರಣೆಯಾಗಿದೆ. ಪ್ರಕೃತಿ ವಿಪತ್ತು ಅಥವಾ ಭೂಕಂಪ ಸಂದರ್ಭದಲ್ಲಿ ಸ್ವಯಂಪ್ರೇರಿತರಾಗಿ ತೆರಳಿ ಜೀವ ಉಳಿಸುವ ಕಾರ್ಯ ಆರ್‌ಎಸ್‌ಎಸ್ ಮಾಡುತ್ತಿದೆ ಎಂದರು.
ವೈದ್ಯ ಹಾಗೂ ಸಂಘಟನೆ ಮುಖಂಡ ಡಾ|| ಸಂತೋಷ್ ಮಾತನಾಡಿ, ಆರ್‌ಎಸ್‌ಎಸ್ ಎಂದಿಗೂ ಸ್ವಂತಕ್ಕಾಗಿ ಆಸ್ತಿಗಳಿಸದೇ, ರಾಷ್ಟ್ರದ ಪರೋಪಕಾರಕ್ಕಾಗಿ ದುಡಿಯುತ್ತಿರುವ ಏಕೈಕ ಸಂಘ. ಈ ವಿರುದ್ಧ ಕೆಲವರು ಅಪಪ್ರಚಾರದಲ್ಲಿ ತೊಡಗಿಸುವ ಕಾರ್ಯ ಹೆಚ್ಚಾಗಿದ್ದು ಸಂಘಟನೆ ಬಲ ತಿಳಿಯದವರು ಈ ರೀತಿ ಹೇಳಿಕೆಗೆ ಕಿವಿಗೊಡಬಾರದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಆರ್‌ಎಸ್‌ಎಸ್ ಜಿಲ್ಲಾ ಸಂಘ ಚಾಲಕ ಘನಶ್ಯಾಮ್ ಆಳ್ವ, ನಗರ ಚಾಲಕ ರಾಜ ರಾಮಕೋಟೆ, ನೂರಾರು ಸ್ವಯಂ ಸೇವಕರು ಹಾಗೂ ಕುಟುಂಬಸ್ಥರು ಭಾಗಿಯಾಗಿದ್ದರು.
- ಸುರೇಶ್ ಎನ್.