ತುಮಕೂರು: ತ್ರಿವಿಧ ದಾಸೋಹಿ ಈ ನಾಡು ಕಂಡ ನಿಜವಾದ ಸಂತ,ಸನ್ಯಾಸ ಪರಂಪರೆಯ ಹರಿಕಾರರಾದ ಕರ್ನಾಟಕ ರತ್ನ,ಪದ್ಮಭೂಷಣ ಲಿಂಗೈಕ್ಯ ಡಾ||ಶ್ರೀ ಶ್ರೀ ಶಿವಕುಮಾರಸ್ವಾಮೀಜಿಗಳ 118 ನೇ ಜಯಂತಿ ಹಾಗೂ ಗುರುವಂದನಾ ಕಾರ್ಯಕ್ರಮ ಸಿದ್ದಗಂಗೆಯಲ್ಲಿ ನಡೆಯಿತು.
ಬೆಳಿಗ್ಗೆಯಿಂದಲೇ ಡಾ||ಶ್ರೀ ಶಿವಕುಮಾರಸ್ವಾಮೀಜಿಗಳ ಗದ್ದುಗೆಗೆ ಅಭಿಷೇಕ ಪೂಜಾ ಕೈಂಕರ್ಯಗಳು ಶ್ರೀ ಸಿದ್ದಲಿಂಗಸ್ವಾಮೀಜಿ ಮತ್ತು ಕಿರಿಯ ಶ್ರೀಗಳಾದ ಶಿವಸಿದ್ದೇಶ್ವರ ಸ್ವಾಮೀಜಿಗಳ ನೇತೃತ್ವದಲ್ಲಿ ನಡೆಯಿತು.
ಬಿಜೆಪಿ ಅಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ,ಸಹಕಾರ ಸಚಿವ ಕೆ.ಎನ್.ರಾಜಣ್ಣ,ರೇಣುಕಾಚಾರ್ಯ ಸೇರಿದಂತೆ ನಾಡಿನ ಗಣ್ಯರು ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆ ಸಲ್ಲಿಸಿದರು.
ವೇದಿಕೆಯ ಕಾರ್ಯಕ್ರಮದಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥಸಿಂಗ್ ಪಾಲ್ಗೊಂಡು ಡಾ||ಶ್ರೀ ಶಿವಕುಮಾರಸ್ವಾಮೀಜಿಗಳ ಪ್ರತಿಮೆಗೆ ಪುಷ್ಪವೃಷ್ಟಿ ನೆರವೇರಿಸಿ ಸಿದ್ದಗಂಗಾ ವೈದ್ಯಕೀಯ ಕಾಲೇಜಿನ ಹಾಸ್ಟೆಲ್ ನ್ನು ಉದ್ಘಾಟಿಸಿ ಮಾಡನಾಡಿದರು.
ಕನ್ನಡನಾಡು ಆಧ್ಯಾತ್ಮಿಕ ಶಕ್ತಿಯ ಕೇಂದ್ರ,ಇಲ್ಲಿ ಹಲವಾರು ಜನ ಸಾಧು ಸಂತರು ಜನಿಸಿ ನಾಡಿಗೆ ತಮ್ಮ ಕೊಡುಗೆಯನ್ನು ನೀಡಿ ಮಾರ್ಗದರ್ಶನ ನೀಡಿದ್ದಾರೆ ಈ ನಿಟ್ಟಿನಲ್ಲಿ ಶ್ರೀ ಶಿವಕುಮಾರಸ್ವಾಮೀಜಿಗಳ ಕೊಡುಗೆ ಅಪಾರ ಸುಮಾರು 8 ಸಾವಿರ ಮಕ್ಕಳನ್ನು ಸಾಕಿ ಅವರಿಗೆ ವಿದ್ಯೆ ವಸತಿ,ಅನ್ನವನ್ನು ನೀಡಿದ್ದಾರೆ ಅದನ್ನು ಇಂದಿಗೂ ಶ್ರೀ ಮಠ ನಡೆಸುತ್ತಿರುವುದು ಶ್ಲಾಘನೀಯ,ಇಂದು ಈ ಕಾರ್ಯಕ್ರಮಕ್ಕೆ ನಾನು ಆಗಮಿಸಿರುವುದು ನನ್ನ ಸೌಭಾಗ್ಯ,ನನಗೆ ಆಧ್ಯಾತ್ಮಕ ಅನುಭವವಾಗಿದೆ,ಶ್ರೀ ಸಿದ್ಧಗಂಗಾ ಮಠ ಆಧ್ಯಾತ್ಮಕ ಸಾಂಸ್ಕೃತಿ ರಾಯಭಾರಿಯಾಗಿದೆ ಎಂದು ಹೇಳಿದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ಸಿದ್ಧಗಂಗಾ ಮಠ ಜಾತಿಭೇದವಿಲ್ಲದೆ ಎಲ್ಲರಿಗೂ ಆಶ್ರಯ ನೀಡಿದೆ, ಜಾತಿ ಧರ್ಮಗಳ ತಾರತಮ್ಯವಿಲ್ಲದೆ ಅನ್ನ, ಅಕ್ಷರ, ಆಶ್ರಯ ನೀಡುವ ಮೂಲಕ ಸಮಾಜಕ್ಕೆ ಸಾವಿರಾರು ಮುತ್ತುರತ್ನಗಳನ್ನು ನೀಡಿರುವ ಶ್ರೀ ಶಿವಕುಮಾರ ಸ್ವಾಮೀಜಿಗಳಿಗೆ “ಭಾರತ ರತ್ನ” ಪುರಸ್ಕಾರ ನೀಡಿ ಗೌರವಿಸಬೇಕು ಎಂದು ಕೇಂದ್ರ ಸಚಿವ ರಾಜನಾಥ್ ಸಿಂಗ್ ಅವರ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರು.
ಗುರುವಿನಿಂದ ನಮ್ಮ ಬಂಧುಗಳು, ಗುರುವಿನಿಂದ ನಮ್ಮ ದೈವಗಳು, ಗುರುವಿನಿಂದ ಪುಣ್ಯ ಜಗಕ್ಕೆಲ್ಲ, ಗುರುವಿನಿಂದಲೇ ಮುಕ್ತಿ ಎಂದು ಸರ್ವಜ್ಞ ಹೇಳಿದ್ದಾರೆ. ನಾನು ಶ್ರೀಗಳ ಕೊನೆ ದಿನಗಳಲ್ಲಿ ಅವರನ್ನು ಚೆನ್ನೈ ಆಸ್ಪತ್ರೆಯಲ್ಲಿ ಭೇಟಿ ಮಾಡುವ ಅವಕಾಶ ಸಿಕ್ಕಿತ್ತು. ಶಿವಕುಮಾರಸ್ವಾಮಿಗಳು ನಮ್ಮ ಜಿಲ್ಲೆಯವರು. ನಮ್ಮ ತಂದೆ ತಾಯಿಗಳು ನನಗೂ ಶಿವಕುಮಾರ ಎಂದು ಹೆಸರಿಟ್ಟಿರುವುದು ನನ್ನ ಭಾಗ್ಯ. ಶ್ರೀಗಳನ್ನು ದಿನವೂ ಸ್ಮರಿಸುವ ಪುಣ್ಯ ನನ್ನದು ಎಂದು ನಾನು ಭಾವಿಸುತ್ತೇನೆʼ ಎಂದರು.
ನಾವೆಲ್ಲರೂ ದೇವರ ಸ್ವರೂಪಿಯನ್ನು ಸ್ಮರಿಸುತ್ತಿದ್ದೇವೆ. ನಮ್ಮ ದೇಹಕ್ಕೆ ಹಸಿವಾದರೆ ಪ್ರಸಾದ ಬೇಕು. ಮನಸ್ಸಿಗೆ ಹಸಿವಾದರೆ ಪ್ರಾರ್ಥನೆ ಮಾಡಬೇಕು. ಮನುಷ್ಯನ ಪ್ರಯತ್ನ ವಿಫಲವಾದರೂ ಪ್ರಾರ್ಥನೆ ವಿಫಲವಾಗುವುದಿಲ್ಲ ಎಂಬುದು ನನ್ನ ನಂಬಿಕೆ. ನಾನು ಧರ್ಮ, ದೇವರ ಮೇಲೆ ನಂಬಿಕೆ ಇಟ್ಟುಕೊಂಡಿರುವವನು. ಧರ್ಮ ಯಾವುದಾದರೂ ತತ್ವವೊಂದೇ, ನಾಮ ನೂರಾದರೂ ದೈವವೊಂದೇ, ಪೂಜೆ ಯಾವುದಾದರೂ ಭಕ್ತಿಯೊಂದೇ, ಕರ್ಮ ಹಲವಾದರೂ ನಿಷ್ಠೆಯೊಂದೆ, ದೇವನೊಬ್ಬ ನಾಮ ಹಲವು. ನಮ್ಮ ಮನಸ್ಸಿಗೆ ಶಾಂತಿ ಸಿಗಬೇಕು ಎಂದು ನಾವು ಈ ಮಠಕ್ಕೆ ಆಗಮಿಸಿ ಶ್ರೀಗಳನ್ನು ಸ್ಮರಿಸುತ್ತಿದ್ದೇವೆ ಎಂದು ಹೇಳಿದರು.

ಧರ್ಮ ಎಂದರೆ ಮನುಷ್ಯತ್ವ. ಮನುಷ್ಯತ್ವ ರೂಪಿಸುವ ಪವಿತ್ರ ಕೆಲಸವನ್ನು ಶ್ರೀಗಳು ಮಾಡಿದ್ದಾರೆ. ಈ ಮಠದಲ್ಲಿ ಬಡವ ಶ್ರೀಮಂತ, ಜಾತಿ ಧರ್ಮ, ಮೇಲು ಕೀಳು ತಾರತಮ್ಯವಿಲ್ಲ. ಹೀಗಾಗಿ ಈ ಮಠಕ್ಕೆ ದೊಡ್ಡ ಹೆಸರಿದೆ. ಇದನ್ನು ನಾವು ನೀವು ಉಳಿಸಿಕೊಂಡು ಹೋಗಬೇಕು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ವೇದಿಕೆಯಲ್ಲಿ ಸುತ್ತೂರು ಸ್ವಾಮೀಜಿಗಳು,ಕೇಂದ್ರ ಜಲಶಕ್ತಿ ಸಚಿವ ವಿ.ಸೋಮಣ್ಣ,ಶಾಸಕ ಜಿ.ಬಿ.ಜ್ಯೋತಿಗಣೇಶ್,ಬಿ.ಸುರೇಶ್ ಗೌಡ,ಚಿದಾನಂದ್,ರಂಗನಾಥ್,ಜಿಲ್ಲಾಧಿಕಾರಿ ಶ್ರೀಮತಿ ಶುಭಕಲ್ಯಾಣ್,ಇತರರು ಉಪಸ್ಥಿತರಿದ್ದರು.
- ಕೆ.ಬಿ.ಚಂದ್ರಚೂಡ