ಹಾಸನ: ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳ (ಕೆಎಂಎಫ್) ಹಾಲಿನ ದ ದರವನ್ನು ಪ್ರತಿ ಲೀಟರ್ಗೆ 4 ರೂ. ಹೆಚ್ಚಿಸಿರುವುದರಿಂದ ಹಾಸನ ಸೇರಿ ರಾಜ್ಯದ ಹಲವು ಒಕ್ಕೂಟಗಳಿಗೆ ಅಪಾರ ನಷ್ಟ ಉಂಟಾಗಲಿದೆ ಎಂದು ಹಾಮೂಲ್ ಅಧ್ಯಕ್ಷ ಹೆಚ್ .ಡಿ.ರೇವಣ್ಣ ಆತಂಕ ವ್ಯಕ್ತಪಡಿಸಿದರು.
ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಹಾಲಿನ ದರ ಏರಿಕೆ ಕುರಿತು ಸಿಎಂ ಅವರ ಆದೇಶವನ್ನು ನಾವು ಪಾಲಿಸುತ್ತೇವೆ. ಆದರೆ ಇದರಿಂದ ನಮ್ಮ ಒಕ್ಕೂಟಕ್ಕೆ ತಿಂಗಳಿಗೆ ಬರೋಬ್ಬರಿ 9 ಕೋಟಿ ರೂ.ನಷ್ಟ ಆಗಲಿದೆ ಎಂದರು.
ಹಾಸನ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳನ್ನೊಳ ಗೊಂಡ ಹಾಮೂಲ್ಗೆ ಪ್ರತಿದಿನ 12.58 ಲಕ್ಷ ಲೀಟರ್ ಹಾಲು ಆವಕ ಆಗುತ್ತಿದೆ. 2 ತಿಂಗಳು ಕಳೆದರೆ ಮತ್ತೆ ಎರಡೂವರೆ ಲಕ್ಷ ಲೀಟರ್ ಹಾಲು ಹೆಚ್ಚಾಗಲಿದೆ. ಇದರಲ್ಲಿ1.98 ಲಕ್ಷ ಹಾಲು, 1.20 ಲೀಟರ್ ಮೊಸರು ಮಾರಾಟ ಆಗುತ್ತಿದ್ದು, ಇನ್ನೂ 9.40 ಲೀಟರ್ ಹಾಲು ಉಳಿಯುತ್ತದೆ ಎಂದು ಮಾಹಿತಿ ನೀಡಿದರು.
ಇದೇ ಪರಿಸ್ಥಿತಿ ಬೇರೆ ಬೇರೆ ಒಕ್ಕೂಟಗಳಲ್ಲೂ ಇದ್ದು, ಈ ಸಂಬಂಧ ನಮ್ಮ ಒಕ್ಕೂಟದ ಸಂಪೂರ್ಣ ಪರಿಸ್ಥಿತಿ, ಸ್ಥಿತಿಗತಿ ಬಗ್ಗೆ ಸಿಎಂ ಸಿದ್ದರಾಮಯ್ಯ, ಸಹಕಾರ ಮತ್ತು ಪಶುಸಂಗೋಪನೆ ಸಚಿವರು ಹಾಗೂ ಮೇಲಧಿಕಾರಿಗಳಿಗೆ ಸಮಗ್ರವಾಗಿ ಪತ್ರ ಬರೆದು ಮನವರಿಕೆ ಮಾಡಲಾಗುವುದು ಎಂದು ತಿಳಿಸಿದರು.
ಈ ಮೊದಲೂ ಪತ್ರ ಬರೆದಿದ್ದೆ, ಮತ್ತೊಮ್ಮೆ ಬರೆದು ವಸ್ತು ಸ್ಥಿತಿ ಮನವರಿಕೆ ಮಾಡುವುದಾಗಿ ಹೇಳಿದರು.
ಹಾಲಿನ ದರ ಏರಿಕೆ ನಂತರ ನಮ್ಮ ಒಕ್ಕೂಟಕದ ಲಾಭಾಂಶವನ್ನು ಹಂಚಿಕೆ ಮಾಡುವ ಮೂಲಕ ನಷ್ಟ ಸರಿದೂಗಿಸುವುದಾಗಿ ತಿಳಿಸಿದ ಅವರು, ನಂತರ ಏನು ಮಾಡಬೇಕು ಎಂಬುದನ್ನು ಸಾಮಾನ್ಯ ಸಭೆ ಕರೆದು ಚರ್ಚಿಸಿ ಅಂತಿಮ ತೀರ್ಮಾನಕ್ಕೆ ಬರುವುದಾಗಿ ತಿಳಿಸಿದರು.
ನಷ್ಟ ಮಾಡಿಕೊಂಡು ಎಷ್ಟು ದಿನ ಒಕ್ಕೂಟ ಮುನ್ನಡೆ ಸಬಹುದು ಎಂದ ಅವರು, ನಷ್ಟವನ್ನು ಕೆಎಂಎಫ್ ಹೊರುತ್ತೋ ಅಥವಾ ಸರಕಾರ ಹೊರಲಿದೆಯೋ ಎಂಬುದು ಖಾತ್ರಿಯಾಗಬೇಕು ಎಂದು ಆಗ್ರಹಿಸಿದರು.
ಹೆಚ್ಚಳ ಮಾಡಿರುವ 4 ರೂ.ನಲ್ಲಿ ಒಕ್ಕೂಟಕ್ಕೆ ಏನೂ ಉಳಿಯುವುದಿಲ್ಲ. ಸರ್ಕಾರದ ಈ ನಿರ್ಧಾರದಿಂದ ಒಕ್ಕೂಟಕ್ಕೆ ಭಾರೀ ನಷ್ಟ ಆಗಲಿದೆ ಎಂದರು.

ಮುಖ್ಯಮಂತ್ರಿಗಳು 3 ರೂ. ಹೆಚ್ಚಿಸಿ, 2.5 ರೂ. ಗಳನ್ನು ರೈತರಿಗೆ ನೀಡೋಣ ಎಂದಿದ್ದರು, ಆದರೆ 4 ರೂ. ಹೆಚ್ಚಳ ಮಾಡಿದವರು ಯಾರು ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
9.40 ಲಕ್ಷ ಲೀಟರ್ ಹಾಲು ಉಳಿಯುವುದರಿಂದ ಪ್ರತಿದಿನ 36 ಲಕ್ಷ ರೂ. ನಷ್ಟವಾಗುತ್ತಿದ್ದು, ಈ ಬಗ್ಗೆ ಜಿಲ್ಲಾ ಮಂತ್ರಿಗಳು ಸೇರಿದಂತೆ, ರಾಜ್ಯಮಟ್ಟದ ಅಧಿಕಾರಿಗಳ ಗಮನಕ್ಕೂ ತರಲಾಗುವುದು. ಈ ರೀತಿ ಮುಂದುವರೆದರೆ ಸಂಸ್ಥೆಯನ್ನು ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುತ್ತದೆ, ಯಾರೋ ಶ್ರಮಿಸಿ ಕಟ್ಟಿರುವ ಸಂಸ್ಥೆಯನ್ನು ಉಳಿಸಿಕೊಳ್ಳುವುದು ಮುಖ್ಯ ಎಂದರು.
ಈ ಸಂಸ್ಥೆಯನ್ನು ಹಾಳು ಮಾಡಬೇಡಿ, ಸರ್ಕಾರ ರೈತರಿಗೆ ಕೇವಲ 2 ತಿಂಗಳು ಹೆಚ್ಚುವರಿ ಹಣ ನೀಡಿ, ನಂತರ ನಿಲ್ಲಿಸುತ್ತಾರೆ ಎಂದು ಭವಿಷ್ಯ ನುಡಿದರು.
ನಮ್ಮಂತೆಯೇ ಮೈಸೂರು ಒಕ್ಕೂಟ 5 ಕೋಟಿ, ಮಂಡ್ಯ 7 ಕೋಟಿ, ಶಿವಮೊಗ್ಗ 4.5 ಕೋಟಿ ನಷ್ಟ ಅನುಭವಿಸುತ್ತವೆ ಎಂದು ಅಂಕಿ ಅಂಶ ನೀಡಿದರು.