ಕೆ.ಆರ್.ಪೇಟೆ: ತಾಲೂಕಿನ ವಿವಿಧ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ರೈತರ ಸಮಸ್ಯೆಗಳನ್ನು ಕುರಿತು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಆರ್.ನಂದಿನಿ ತಾಲೂಕು ರೈತ ಸಂಘದ ಮುಖಂಡರುಗಳೊಂದಿಗೆ ಸಭೆ ನಡೆಸಿ ಚರ್ಚಿಸಿದರು.
ಪಟ್ಟಣದ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ರೈತ ಮುಖಂಡರು ವಿವಿಧ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಆಡಳಿತ ಲೋಪಗಳನ್ನು ಪ್ರಸ್ತಾಪಿಸಿ ಕ್ರಮಕ್ಕೆ ಒತ್ತಾಯಿಸಿದರು.
ಕೆ.ಆರ್.ಪೇಟೆ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ವಾಣಿಜ್ಯ ಮಳಿಗೆಗಳ ಒಪ್ಪಂದದ ಅವಧಿ ಮುಗಿದಿದ್ದರೂ ಪಿ.ಡಿ.ಓಗಳು ನಿಯಮಾನುಸಾರ ಮಳಿಗೆಗಳ ಮರು ಹರಾಜು ಮಾಡುತ್ತಿಲ್ಲ. ಇದರ ಪರಿಣಾಮ ಸರ್ಕಾರಿ ಮಳಿಗೆಗಳು ಕೆಲವೇ ವ್ಯಕ್ತಿಗಳ ಖಾಸಗಿ ಆಸ್ತಿಯಂತಾಗಿವೆ. ಮಳಿಗೆ ಪಡೆದ ವ್ಯಕ್ತಿಗಳು ಬಹುತೇಕ ಸ್ವಂತ ವ್ಯಾಪಾರ ಮಾಡದೆ ಹೆಚ್ಚಿನ ಬಾಡಿಗೆಗೆ ಮತ್ತೊಬ್ಬರಿಗೆ ನೀಡಿ ಬಂಡವಾಳವಿಲ್ಲದೆ ಲಾಭ ಪಡೆಯುತ್ತಿದ್ದಾರೆ. ಒಪ್ಪಂದದ ಅವಧಿ ಮುಗಿದಿರುವ ಎಲ್ಲಾ ಮಳಿಗೆಗಳ ಮರು ಹರಾಜು ಮಾಡಿ. ಇಲ್ಲವೇ ಯಾರ ಹೆಸರಿನಲ್ಲಿ ಮಳಿಗೆಗಳಿವೆಯೂ ಅವರಿಗೆ ಇ-ಸ್ವತ್ತು ಮಾಡಿಕೊಟ್ಟುಬಿಡಿ ಎಂದು ಸಭೆಯಲ್ಲಿ ರೈತ ಮುಖಂಡರು ಛೇಡಿಸಿದರು.
ತಾಲೂಕಿನ ಕೃಷ್ಣಾಪುರ ಗ್ರಾಮದಲ್ಲಿ ಬಿಕ್ಷಾಟನೆಯನ್ನೆ ನಂಬಿ ಬದುಕುತ್ತಿರುವ ಅಲೆಮಾರಿ ಬುಡಕಟ್ಟು ಜನ ವಾಸಿಸುತ್ತಿದ್ದಾರೆ. ಈ ಅಲೆಮಾರಿಗಳಿಗೆ ಇದುವರೆಗೂ ಮನೆ ಮತ್ತಿತರ ಮೂಲಭೂತ ಸೌಕರ್ಯಗಳು ದೊರಕಿಲ್ಲ. ಸರ್ಕಾರದ ಗ್ಯಾರಂಟಿ ಮನೆ ಪಡೆಯಬೇಕಾದರೆ ಲಂಚ ಕೊಡಬೇಕು. ಲಂಚ ಕೊಡಲು ಶಕ್ತಿಯಿಲ್ಲದ ಇವರಿಗೆ ಗ್ಯಾರಂಟಿ ಮನೆ ಸಿಗುತ್ತಿಲ್ಲ ರಾಜ್ಯದಲ್ಲಿ ಅಲೆಮಾರಿ ಅಭಿವೃದ್ದಿ ನಿಗಮವಿದೆ. ಅಲೆಮಾರಿ ಅಭಿವೃದ್ದಿ ನಿಗಮದೊಂದಿಗೆ ಸಂಪರ್ಕಿಸಿ ಇವರಿಗೆ ಅಗತ್ಯ ಮೂಲಭೂತ ಸೌಲಬ್ಯಗಳನ್ನು ದೊರಕಿಸಿಕೊಡಿ ಎಂದು ರೈತ ಮುಖಂಡರು ಆಗ್ರಹಿಸಿದರು.

ತಾಲೂಕಿನ ಮಾಕವಳ್ಳಿ ಗ್ರಾಮ ವ್ಯಾಪ್ತಿಯಲ್ಲಿರುವ ಕೋರಂಡಲ್ ಸಕ್ಕರೆ ಕಾರ್ಖಾನೆ 100 ಎಕರೆ ಆಸ್ತಿ ಹೊಂದಿದ್ದರೂ ತನ್ನ ಆಸ್ತಿಗೆ ತಕ್ಕಂತೆ ಗ್ರಾಮ ಪಂಚಾಯತಿಗೆ ತೆರಿಗೆ ಕಟ್ಟದೆ ವಂಚಿಸುತ್ತಿದೆ. ತೆರಿಗೆ ವಂಚನೆಗೆ ಗ್ರಾಮ ಪಂಚಾಯತಿಯ ಸದಸ್ಯರುಗಳೇ ಸಹಕಾರ ನೀಡುತ್ತಿದ್ದಾರೆ. ತೆರಿಗೆ ವಂಚನೆ ಕುರಿತ ರೈತ ಹೋರಾಟದ ಫಲವಾಗಿ ಜಿಲ್ಲಾ ಪಂಚಾಯತಿ ಒಂದು ಸಮಿತಿ ನೇಮಿಸಿ ಸಮಿತಿಯ ವರದಿಯ ಮೇರೆಗೆ ವಾರ್ಷಿಕ 23 ಲಕ್ಷ ತೆರಿಗೆ ನಿಗಧಿ ಪಡಿಸಿದೆ. ಸರ್ಕಾರಿ ಸಮಿತಿ 23 ಲಕ್ಷ ರೂ ತೆರಿಗೆ ವಿಧಿಸಿದ್ದರು ಮಾಕವಳ್ಳಿ ಗ್ರಾಮ ಪಂಚಾಯತಿಯ ಆಡಳಿತ ಮಂಡಲಿ ಸಭಾ ನಿರ್ಣಯ ಮಾಡಿ ಇದನ್ನು ಕೇವಲ 13 ಲಕ್ಷ ರೂಗಳಿಗೆ ಇಳಿಕೆ ಮಾಡಿ ಸರ್ಕಾರದ ನಿಯಮಗಳಿಗೆ ವಿರುದ್ದವಾಗಿ ಕೆಲಸ ಮಾಡುತ್ತಿದೆ. ಕೋರಂಡಲ್ ಕಾರ್ಖಾನೆಯಲ್ಲಿನ 100 ಎಕರೆ ಆಸ್ತಿಯಲ್ಲಿ 17.75 ಗುಂಟೆ ಜಮೀನು ಚೌಡೇನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಸೇರಿದೆ.
ಕಾರ್ಖಾನೆಯ ತೆರಿಗೆ ವಂಚನೆಯ ಬಗ್ಗೆ ಚೌಡೇನಹಳ್ಳಿ ಗ್ರಾಮ ಪಂಚಾಯತಿಯ ಹಿಂದಿನ ಆಡಳಿತ ಮಂಡಲಿ ತೆರಿಗೆ ವಂಚನೆಯ ದಂಡ ವಸೂಲಿ ಮಾಡಿ ವಾರ್ಷಿಕ 36 ಸಾವಿರ ರೂ ತೆರಿಗೆ ವಸೂಲಿ ಮಾಡುತ್ತಿತ್ತು. ಆದರೆ ಈಗಿನ ಹೊಸ ಆಡಳಿತ ಮಂಡಲಿ ಕಾರ್ಖಾನೆಯ ತೆರಿಗೆ ವಸೂಲಾತಿಯನ್ನು ಕೇವಲ 800 ರೂಗಳಿಗೆ ನಿಗಧಿ ಪಡಿಸಿ ತೆರಿಗೆ ವಂಚನೆಗೆ ಸಹಕರಿಸಿದೆ. ಸರ್ಕಾರದ ನಿಯಮಾನುಸಾರ ಆಸ್ತಿ ತೆರಿಗೆ ವಸೂಲಿ ಮಾಡದೆ ಸರ್ಕಾರಕ್ಕೆ ವಂಚನೆ ಮಾಡುತ್ತಿರುವ ಗ್ರಾಮ ಪಂಚಾಯತಿ ಆಡಳಿತ ಮಂಡಲಿಯನ್ನು ಸೂಪರ್ ಸೈಡ್ ಮಾಡಿ ನಿಯಮಾನುಸಾರ ತೆರಿಗೆ ವಸೂಲಿಗೆ ಕ್ರಮ ವಹಿಸುವಂತೆ ರೈತ ಮುಖಂಡರು ಆಗ್ರಹಿಸಿದರು.

ನರೇಗಾ ಯೋಜನೆಯಡಿ ಕಾಮಗಾರಿ ಮಾಡಿರುವ ರೈತರಿಗೆ ಕಳೆದ 2-3 ವರ್ಷಗಳಿಂದ ಸಪ್ಲೆ ಬಿಲ್ ಪಾವತಿಯಾಗಿಲ್ಲ. ಒಂದೇ ರಸ್ತೆಗೆ ಉತ್ತರ ತುದಿಯಿಂದ ಒಂದು ಫೋಟೋ, ದಕ್ಷಿಣ ತುದಿಯಿಂದ ಒಂದು ಫೋಟೋ ತೆಗೆಸಿ ಒಂದೆ ಕಾಮಗಾರಿಗೆ ಎರಡೆರಡು ಬಿಲ್ ಪಡೆಯಲಾಗುತ್ತಿದೆ. ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಸಾರ್ವಜನಿಕ ಸ್ಮಶಾನಗಳಿಲ್ಲದೆ ಭೂ ರಹಿತರ ಕುಟುಂದವರ ಶವ ಸಂಸ್ಕಾರಕ್ಕೆ ಸಮಸ್ಯೆಯಾಗುತ್ತಿದೆ. ಕೃಷಿ ಮತ್ತು ತೋಟಗಾರಿಕಾ ಇಲಾಖೆಗಳ ಬೆಳೆ ಸಮೀಕ್ಷೆಯ ಲೋಪದಿಂದ ರೈತರು ಭತ್ತ, ರಾಗಿ, ಕೊಬ್ಬರಿ ಮುಂತಾದವುಗಳನ್ನು ಬೆಂಬಲ ಬೆಲೆಯಡಿಯಲ್ಲಿ ಮಾರಾಟ ಮಾಡಲಾಗುತ್ತಿಲ್ಲ., ತೋಟದಲ್ಲಿ ಮನೆ ಕಟ್ಟಿಕೊಂಡು ವಾಸ ಮಾಡುತ್ತಿರುವ ರೈತರ ತೋಟದ ಮನೆಗಳಿಗೆ ಇ-ಸ್ವತ್ತು ಸಮಸ್ಯೆಯಿದೆ. ಇದರಿಂದ ತೋಟಗಳಲ್ಲಿ ಮನೆ ಕಟ್ಟಿಕೊಳ್ಳಲು ಅಗತ್ಯ ಸಾಲ ಪಡೆಯಲು ರೈತರಿಗೆ ಸಮಸ್ಯೆಯಿದೆ. ಕೆಲವು ಕಡೆ ಗ್ರಾಮ ಪಂಚಾಯತಿ ಗ್ರಂಥಾಲಯಗಳು ಸೂಕ್ತ ಪರಿಸದಲ್ಲಿಲ್ಲದೆ ಸಾರ್ವಜನಿಕರಿಗೆ ನಿರುಪಯುಕ್ತವಾಗಿವೆ. ಸರ್ಕಾರದ ನಿಯಮಗಳಿಗೆ ವಿರುದ್ದವಾಗಿ ಕೆಲಸ ಮಾಡುತ್ತಿರುವ ಪಿ.ಡಿ.ಓ ಗಳ ವಿರುದ್ದ ಶಿಸ್ತು ಕ್ರಮ ಜರುಗಿಸಿ ರೈತ ಸಮುದಾಯದ ನೆರವಿಗೆ ನಿಲ್ಲುವಂತೆ ರೈತ ಮುಖಂಡರು ಒತ್ತಾಯಿಸಿದರು.
ರೈತ ಮುಖಂಡರ ಅಹವಾಲುಗಳನ್ನು ಆಲಿಸಿದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಆರ್.ನಂದಿನಿ ನಾನು ಇದೇ ಜಿಲ್ಲೆಯ ರೈತ ಕುಟಂಬಕ್ಕೆ ಸೇರಿದವಳು. ನಾನಿಲ್ಲಿ ಕಾಟಾಚಾರಕ್ಕೆ ಸಭೆ ಮಾಡಲು ಬಂದಿಲ್ಲ. ನನಗೆ ರೈತಪರ ನಿಲುವಿದೆ. ನೀವು ಪ್ರಸ್ತಾಪಿಸಿದ ಎಲ್ಲಾ ವಿಷಯಗಳನ್ನು ಪಟ್ಟಿ ಮಾಡಿಕೊಂಡಿದ್ದ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ವಹಿಸುವುದಾಗಿ ತಿಳಿಸಿದರು.
ಜಿಲ್ಲಾ ರೈತಸಂಘದ ಮಾಜಿ ಅಧ್ಯಕ್ಷ ಎಂ.ವಿ.ರಾಜೇಗೌಡ, ತಾಲೂಕು ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ, ಕಾರ್ಯದರ್ಶಿ ಬೂಕನಕೆರೆ ನಾಗರಾಜು, ರೈತ ಮುಖಂಡರಾದ ಕೆ.ಆರ್.ಜಯರಾಂ, ಎಲ್.ಬಿ.ಜಗದೀಶ್, ಮುದ್ದುಕುಮಾರ್, ನಗರೂರು ಕುಮಾರ್, ಲಕ್ಷ್ಮಿಪುರ ನಾಗರಾಜು, ಕರೋಟಿ ತಮ್ಮಯ್ಯ, ಬ್ಯಾಲದಕೆರೆ ಶಿವಣ್ಣ, ಹೊನ್ನೇಗೌಡ, ಕೃಷ್ಣಾಪುರ ಮಿಲ್ ರಾಜಣ್ಣ, ಚೇತನ್ ಸೇರಿದಂತೆ ಹಲವರಿದ್ದು ಮಾತನಾಡಿದರು.
ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಬಾಬು, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಧನುಷ್, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಕೆ.ಸುಷ್ಮಾ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.
- ಶ್ರೀನಿವಾಸ್ ಆರ್.