ಕೊರಟಗೆರೆ:– ಹೆಜ್ಜೇನಿನ ಏಕಾಏಕಿ ದಾಳಿಯಿಂದ ಕಾಲೇಜು ವಿದ್ಯಾರ್ಥಿಗಳು, ಉಪನ್ಯಾಸಕರು ಮತ್ತು ವಾಹನ ಸವಾರರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಕ್ಷಣಾರ್ಧದಲ್ಲೇ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ.
ಕೊರಟಗೆರೆ ಪಟ್ಟಣದ ಕನಕದಾಸ ವೃತ್ತದಲ್ಲಿ ಬುಧವಾರ ಮಧ್ಯಾಹ್ನ 1ಗಂಟೆಯ ಸುಮಾರಿಗೆ ಹೆಜ್ಜೆನು ಆಕಸ್ಮಿಕ ದಾಳಿಯಿಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ 5 ಮಂದಿ ವಿದ್ಯಾರ್ಥಿಗಳು, 2 ಉಪನ್ಯಾಸಕರು ಹಾಗೂ ಹೆಜ್ಜೆನು ದಾಳಿಗೆ ಎದುರಾಗಿ ಚಲಿಸುತ್ತಿದ್ದ ವಾಹನ ಸವಾರರಿಗೂ ದಾಳಿ ಮಾಡಿದ್ದು, ಒಟ್ಟು 2೦ಕ್ಕೂ ಹೆಚ್ಚಿನ ಗಾಯಾಳುಗಳು ಕ್ಷಣಾರ್ಧದಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳ ತಪಾಸಣೆ ನಡೆಸಿ ಚಿಕಿತ್ಸೆ ನೀಡಿ ಜೀವಕ್ಕೆ ಯಾವುದೇ ಅಪಾಯವಿಲ್ಲ ಎಂದು ಗಾಯಾಳುಗಳಿಗೆ ಸರ್ಕಾರಿ ಆಸ್ಪತ್ರೆ ವೈದ್ಯ ಡಾ.ಪುರುಷೋತ್ತಮ್ ದೈರ್ಯ ತುಂಬಿದ್ದಾರೆ.
ಹೆಜ್ಜೇನು ದಾಳಿಯಿಂದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಉಪನ್ಯಾಸಕರನ್ನು ಮತ್ತು ವಿದ್ಯಾರ್ಥಿಗಳನ್ನು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಈರಪ್ಪನಾಯ್ಕ ಭೇಟಿ ಮಾಡಿ ಅರೋಗ್ಯದ ವಿಚಾರಣೆ ನಡೆಸಿ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ತೋರದೆ ವೈದ್ಯರ ಮಾರ್ಗದರ್ಶನದಲ್ಲಿ ಸೂಕ್ತ ಚಿಕಿತ್ಸೆ ಪಡೆಯುವಂತೆ ತಿಳಿಸಿದ್ದಾರೆ.
ಟೀ ಅಂಗಡಿ, ಹೋಟೆಲ್ ಹಾಗೂ ಪೆಟ್ರೋಲ್ ಬಂಕ್ ಮುಂಭಾಗದಲ್ಲಿದ್ದಂತಹ ಜನರು ಹೆಜ್ಜೇನು ದಾಳಿಯ ವೇಳೆ ಚೆಲ್ಲಾಪಿಲ್ಲಿಯಾಗಿದ್ದು, ಸ್ಪಲ್ಪ ಸಮಯಗಳ ಕಾಲ ದ್ವಿಚಕ್ರ ವಾಹನ ಸವಾರರು ಭಯದಿಂದ ಸಂಚರಿಸುವಂತಹ ವಾತಾವರಣ ಸೃಷ್ಠಿಯಾಗಿತ್ತು. ಅರಣ್ಯ ಇಲಾಖೆ ಅಧಿಕಾರಿಗಳು ಸರ್ಕಲ್ ಬಳಿ ಇರುವ ಸಾಲು ಸಾಲು ಮರಗಳಲ್ಲಿ ಕಟ್ಟಿರುವಂತಹ ಹೆಜ್ಜೇನನ್ನು ತೆರವು ಮಾಡುವಂತೆ ವಿದ್ಯಾರ್ಥಿಗಳ ಪೋಷಕರು ಒತ್ತಾಯ ಮಾಡಿದ್ದಾರೆ.
ವರದಿ- ಶ್ರೀನಿವಾಸ್ ಕೊರಟಗೆರೆ