ಚಿಕ್ಕಮಗಳೂರು- ತಾಲ್ಲೂಕಿನ ಮಳಲೂರು ಗ್ರಾಮದ ಶ್ರೀ ಮಳಲೂರಮ್ಮ ದೇವಿಯ ಜಾತ್ರ ಮಹೋತ್ಸವ ಹಾಗೂ ರಥೋತ್ಸವ ಕಾರ್ಯಕ್ರಮವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಗ್ರಾಮೀಣ ಶೈಲಿಯಲ್ಲಿ ಅತ್ಯಂತ ಶ್ರದ್ದಾಭಕ್ತಿಯಿಂದ ಪೂಜಾವಿಧಿವಿಧಾನಗಳು ನೆರವೇರಿಸಿ ಸಂಪನ್ನಗೊಂಡಿತು.
ಶ್ರೀ ಮಳಲೂರಮ್ಮ ದೇವಾಲಯದ ರಥೋತ್ಸವ ಅಂಗವಾಗಿ ಸುಮಾರು ಆರೇಳು ಹಳ್ಳಿಗಳ ಗ್ರಾಮಸ್ಥರು ಶೃಂಗಾರಗೊಂಡ ಜೋಡೆತ್ತಿನ ಬಂಡಿಯಲ್ಲಿ ಆಗಮಿಸಿ ವಿಶೇಷಪೂಜೆಯಲ್ಲಿ ಭಾಗಿಯಾದರು. ತೇರು ಎಳೆಯುವುದಕ್ಕೂ ಮುನ್ನ ಜೋಡೆತ್ತು, ಟ್ರ್ಯಾಕ್ಟರ್‌ಗಳಲ್ಲಿ ಕುಟುಂಬಸ್ಥರು ಕುಳಿತು ದೇವಾಲಯ ಸುತ್ತಮುತ್ತಲು ಮೆರವಣಿಗೆ ಹಾಕಿದರೆ ಬದುಕು ಸುಗಮವಾಗಲಿದೆ ಎಂಬ ಪ್ರತೀತಿಯಿದೆ.
ಮಳಲೂರು ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮಕ್ಕೆ ದೊಡ್ಡಹಬ್ಬದಂತಿರುವ ರಥೋತ್ಸವಕ್ಕೆ ಮಹಿ ಳೆಯರು, ಮಕ್ಕಳು ಹಾಗೂ ವೃದ್ದರು ಗ್ರಾಮೀಣ ವೇಷಭೂಷಣದಲ್ಲಿ ಆಗಮಿಸಿದರು. ಕೆಲವೆಡೆ ಮಹಿಳೆಯರು ಬಳೆಗಾರರಿಂದ ಬಳೆ ತೊಡಿಸಿಕೊಂಡರು. ವಿಪರೀತ ಬೇಸಿಗೆಯಾದ ಕಾರಣ ಭಕ್ತಾಧಿಗಳು ಹೆಚ್ಚಿನ ಭಾಗ ತಂಪುಪಾನೀಯ, ಕಲ್ಲಂಗಡಿ ಗಾಡಿಗಳಲ್ಲಿ ಬಾಯಾರಿಕೆ ನೀಗಿಸಿಕೊಂಡರು.

ಜಾತ್ರಾ ಮಹೋತ್ಸವದಲ್ಲಿ ಜಿಲೇಬಿ, ಮೈಸೂರುಪಾಕ್, ಕಾರುಪೂರಿ, ಬೋಂಡಾ, ಲಡ್ಡು, ಕಬ್ಬಿನಹಾಲು ಅಂಗಡಿಮುಂಗಟ್ಟುಗಳು ಹೆಚ್ಚಿತ್ತು. ಯುವಕರು ಸಂಭ್ರಮದಿಂದ ಪಾಲ್ಗೊಂಡಿದ್ದರು. ಅಲ್ಲಲ್ಲಿ ಮಹಿಳೆಯರು, ಯುವತಿಯರು ಶೃಂಗಾರ ವಸ್ತುಗಳ ಕಡೆಹೆಚ್ಚು ಆಸಕ್ತಿ ವಹಿಸುವುದು ಸಾಮಾನ್ಯವಾಗಿತ್ತು.
ಒಟ್ಟಾರೆ ಶ್ರೀ ಮಳಲೂರಮ್ಮ ದೇವಿಯ ಜಾತ್ರ ಮಹೋತ್ಸವ ಸಂಪೂರ್ಣ ಹಳ್ಳಿಸೊಗಡಿನ ಜರುಗಿತು. ಕೆಲವು ಪಟ್ಟಣದಿಂದ ಬಂದ ಭಕ್ತಾಧಿಗಳಿಗೆ ಹಳ್ಳಿಗಳ ಜಾತ್ರಾ ವೈಭವವು ಸ್ಪೂರ್ತಿ ನೀಡಿದರೆ, ಹಿರಿಯರಿಗೆ ಬಾಲ್ಯದಲ್ಲಿ ಸಿಹಿ ನೆನಪುಗಳು ಮರುಕಳಿಸಿದವು.
– ಸುರೇಶ್ ಎನ್.