ಕೊರಟಗೆರೆ:-ಪಟ್ಟಣದಲ್ಲಿ 1977 ರಿಂದ ಪ್ರತಿಷ್ಟಾಪಿಸಿರುವ ಬೆಸ್ಕಾಂ ಇಲಾಖೆಯ ವಿದ್ಯುತ್ ಗಣಪತಿಯ ಐದು ದಿನಗಳ ಪೂಜೆಯೊಂದಿಗೆ ಸಾವಿರಾರು ಭಕ್ತರಿಗೆ ಅನ್ನಸಂತರ್ಪಣೆ ನಡೆಸಲಾಗುತ್ತಿದೆ ಎಂದು ಎ.ಇ.ಇ ಪ್ರಸನ್ನಕುಮಾರ್ ತಿಳಿಸಿದರು.
ಅವರು ಪಟ್ಟಣದ ಬೆಸ್ಕಾಂ ಇಲಾಖೆ ಆವರಣದಲ್ಲಿ ಇರುವ ವಿದ್ಯುತ್ ಗಣಪತಿಯ ಗಣೇಶ ಹಬ್ಬದ ಐದು ದಿನಗಳ ಕಾಲದ ವಿಶೇಷ ಪೂಜೆ ಮತ್ತು ಅನ್ನಸಂತರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಬೆಸ್ಕಾಂ ಇಲಾಖೆ ನೌಕರರು,ಅಧಿಕಾರಿಗಳು,ಸಾರ್ವಜನಿಕರ ಸಹಕಾರದಿಂದ ವಿದ್ಯುತ್ ಗಣಪತಿಯನ್ನು ಪ್ರತಿಷ್ಟಾಪಿಸಿ 5 ದಿನಗಳ ಕಾಲ ವಿಶೇಷ ಪೂಜೆ ಸಲ್ಲಿಸಿ ಕಡೆಯ ದಿನದಂದು ಸಾವಿರಾರು ಜನರಿಗೆ ಅನ್ನಸಂರ್ಪಣೆಯನ್ನು ಏರ್ಪಡಿಸಿದ್ದು ಸಮಾಜದಲ್ಲಿ ಎಲ್ಲರಿಗೂ ಒಳ್ಳೆಯದಾಗಲಿ ಉತ್ತಮ ಮಳೆ ಬೆಳೆಯಾಗಲಿ ಇಲಾಖೆ ನೌಕರರು ಸುರಕ್ಷಿತವಾಗಿ ಕಾರ್ಯನಿರ್ವಹಿಸಲಿ ಎನ್ನುವ ಉದ್ದೇಶ ಈ ಗಣಪತಿ ಪೂಜಿಸುವ ಹಿಂದಿದೆ ಎಂದರು.
ಹಿರಿಯ ಲೆಕ್ಕಾಧಿಕಾರಿ ನಟರಾಜು ಮಾತನಾಡಿ ಬೆಸ್ಕಾಂ ಅವರಣದಲ್ಲಿ 1977 ರಲ್ಲಿ ಅಂದಿನ ಎ.ಇ.ಇ ಗಳಾದ ಪುಟ್ಟಸ್ವಾಮಾಚಾರ್ ಅವರು ಈ ದೇವಸ್ಥಾನಕ್ಕೆ ಅಡಿಪಾಯ ಹಾಕಿದ್ದಾರೆ.ಅಂದಿನಿಂದ ಇಲ್ಲಿವರೆಗೆ ಈ ದೇವಸ್ಥಾನ ಎಲ್ಲಾ ಪೂಜೆ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಿಕೊಂಡು ಬರುತ್ತಿದ್ದು, ಗಣಪತಿ ಹಬ್ಬದ ದಿನದಂದು ಮೂಲ ದೇವರ ಪಕ್ಕ ಮಣ್ಣಿನ ಗಣಪತಿ ಪ್ರತಿಷ್ಟಾಪಿಸಿ ಪೂಜೆ ಸಲ್ಲಿಸಲಾಗುವುದು.ಹಿಂದೆ 11 ದಿನಗಳ ಕಾಲ ಗಣಪತಿಯನ್ನು ಪ್ರತಿಷ್ಟಾಪಿಸಿ ಪೂಜೆ ನಡೆಸಿಕೊಂಡು ಬರುತ್ತಿದ್ದು ಇಲಾಖೆ ಕಾರ್ಯ ಒತ್ತಡದಿಂದ 5 ದಿನಗಳ ಕಾಲ ಪೂಜೆ ಸಲ್ಲಿಸಿ ಗಂಗಾ ಪ್ರವೇಶ ಮಾಡಿಸಲಾಗುತ್ತದೆ.ಅಂದಿನಿಂದ ಇಲ್ಲಿಯವರೆಗೆ ಅನ್ನಸಂತರ್ಪಣೆ ನಡೆದುಕೊಂಡು ಬರುತ್ತಿದೆ ಇದಕ್ಕೆ ಎಲ್ಲರ ಸಹಕಾರ ಇದೆ ಎಂದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಮಂಜುನಾಥ್ ಕೆ, ಕಂದಾಯ ಅಧಿಕಾರಿ ಬಸವರಾಜು, ಬೆಸ್ಕಾಂ ಇಲಾಖೆಯ ಡಿ.ಎಲ್.ನಾಗರಾಜು, ಮಲ್ಲಯ್ಯ, ಕೃಷ್ಣಮೂರ್ತಿ, ನಿವೃತ್ತ ಅಧಿಕಾರಿ ಪುಟ್ಟಣ ಸೇರಿದಂತೆ ಹಲವರು ಹಾಜರಿದ್ದರು.
—————ಶ್ರೀನಿವಾಸ್ ಕೊರಟಗೆರೆ