ಕೊರಟಗೆರೆ-ಧಾರ್ಮಿಕ-ಕ್ಷೇತ್ರ-ಸಿದ್ದರಬೆಟ್ಟದ-ಮುಖ್ಯ-ರಸ್ತೆಯ- ಅಭಿವೃದ್ಧಿಗೆ-ಶಂಕುಸ್ಥಾಪನೆ

ಕೊರಟಗೆರೆ:- ತಾಲೂಕಿನ ಚನ್ನರಾಯನದುರ್ಗ ಹೋಬಳಿಯ ಸಿದ್ದರಬೆಟ್ಟ ಮತ್ತು ನೇಗಲಾಲ ಗ್ರಾಮದ ಜನರ ಮತ್ತು ವಿದ್ಯಾರ್ಥಿಗಳ ಹಾಗೂ ಶ್ರೀ ಕ್ಷೇತ್ರ ಸಿದ್ದರಬೆಟ್ಟಕ್ಕೆ ಬರುವಂತಹ ಭಕ್ತರ ಹಾಗೂ ಪ್ರವಾಸಿಗರ ಬಹುದಿನಗಳ ಬೇಡಿಕೆ ಸುಮಾರು ಎರಡು ಕಿಲೋ ಮೀಟರ್ ಮುಖ್ಯ ರಸ್ತೆಯ ಅಭಿವೃದ್ಧಿಗೆ ಕೊರಟಗೆರೆ ಲೋಕೋಪಯೋಗಿ ಇಲಾಖೆಯು ರಸ್ತೆ ಅಭಿವೃದ್ಧಿ ಪಡಿಸಲು ಇದೀಗ ಮುಂದಾಗಿದೆ.

ಗೃಹ ಸಚಿವ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಜಿ ಪರಮೇಶ್ವರ್ ಸುಮಾರು ಒಂದು ಕೋಟಿ ಐವತ್ತು ಲಕ್ಷ ರೂ ಅನುದಾನವನ್ನು ರಸ್ತೆಗೆ ಮೀಸಲಿಟ್ಟಿದ್ದಾರೆ. ಅವರ ಮಾರ್ಗದರ್ಶನದಂತೆ ಗೃಹ ಸಚಿವರ ವಿಶೇಷ ಕರ್ತವ್ಯ ಅಧಿಕಾರಿ ಡಾ. ನಾಗಣ್ಣ ಸ್ಥಳೀಯ ಮುಖಂಡರೊಂದಿಗೆ ಶಂಕು ಸ್ಥಾಪನೆ ನೆರವೇರಿಸಿದ್ದಾರೆ.

ಸಿದ್ದರಬೆಟ್ಟದ ಬಾಳೆಹೊನ್ನೂರು ಖಾಸಾ ಶಾಖಾ ಮಠದ ಪೀಠಾಧ್ಯಕ್ಷ ಶ್ರೀ ವೀರಭದ್ರ ಶಿವಾಚಾರ್ಯ ಮಹಾ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ಶಂಕುಸ್ಥಾಪನೆಯ ಕಾರ್ಯ ಸುಗಮವಾಗಿ ಸಾಗಿದೆ.

ಈ ವೇಳೆ ಗೃಹ ಸಚಿವರ ವಿಶೇಷ ಕರ್ತವ್ಯಧಿಕಾರಿ ಡಾ. ಕೆ ನಾಗಣ್ಣ ಮಾತನಾಡಿ, ನೇಗಲಾಲ ಮತ್ತು ಸಿದ್ದರಬೆಟ್ಟ ಗ್ರಾಮಸ್ಥರ ಬಹುದಿನದ ಮುಖ್ಯ ಬೇಡಿಕೆಯಾಗಿದ್ದ ರಸ್ತೆ ಅಭಿವೃದ್ಧಿಯು ಮಾನ್ಯ ಗೃಹ ಸಚಿವ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಜಿ ಪರಮೇಶ್ವರ್ ಅವರ ಆದೇಶದ ಮೇರೆಗೆ ಇದೀಗ ಶಂಕು ಸ್ಥಾಪನೆ ಕಾರ್ಯ ಸ್ವಾಮೀಜಿ ರವರ ದಿವ್ಯ ಸಾನಿಧ್ಯದಲ್ಲಿ ನಡೆದಿದೆ. ಈ ರಸ್ತೆ ಮಾರ್ಗವಾಗಿ ಸಂಚರಿಸುವ ವಾಹನ ಸವಾರರಿಗೆ ಅನುಕೂಲವಾಗಲಿದೆ. ಗ್ರಾಮಗಳಿಗೆ ಹೆಚ್ಚಿನ ಮೂಲ ಸೌಕರ್ಯ ದೊರಕಿಸಲು ಸರ್ಕಾರ ಮುಂದಾಗಿದೆ. ಗ್ರಾಮಗಳು ಅಭಿವೃದ್ಧಿಯಾದರೆ, ದೇಶ ಅಭಿವೃದ್ದಿ ಹೊಂದಲಿದೆ. ಸಂಬಂಧಪಟ್ಟ ಗುತ್ತಿಗೆದಾರರು ಗುಣಮಟ್ಟದ ರಸ್ತೆಯನ್ನು ನಿಗದಿತ ಕಾಲ ಮಿತಿಯೊಳಗೆ ಕಾಮಗಾರಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಪಿಡಬ್ಲ್ಯೂಡಿ ಎಇಇ ಕೆ ಎಸ್ ಸ್ವಾಮಿಗೆ ಸೂಚಿಸಿದರು.

ಶ್ರೀ ಶ್ರೀ ವೀರಭದ್ರ ಶಿವಾಚಾರ್ಯ ಮಹಾ ಸ್ವಾಮೀಜಿಗಳು. ಶ್ರೀ ಕ್ಷೇತ್ರ ಸಿದ್ದರಬೆಟ್ಟ ಮಾತನಾಡಿ, ಕ್ಷೇತ್ರದ ಜನಪ್ರಿಯ ಶಾಸಕರು ಹಾಗೂ ಕರ್ನಾಟಕ ಸರ್ಕಾರದ ಗೃಹ ಸಚಿವರು ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಜಿ ಪರಮೇಶ್ವರ್ ಅವರ ಸಹಕಾರದಿಂದ ನೆನೆಗುದಿಗೆ ಬಿದ್ದಿದ್ದ ರಸ್ತೆಯ ಭೂಮಿ ಪೂಜೆ ನೆರವೇರಿದೆ. ಕಳೆದ ಐದಾರು ವರ್ಷಗಳಿಂದ ರಸ್ತೆಯು ಅಭಿವೃದ್ಧಿಯಾಗದೆ ತೊಂದರೆ ಉಂಟಾಗುತ್ತಿತ್ತು. ಶ್ರೀ ಕ್ಷೇತ್ರ ಸಿದ್ದರಬೆಟ್ಟವು ಪ್ರವಾಸಿಗರ ಕ್ಷೇತ್ರವಾಗಿದ್ದು ರಾಜ್ಯದ ಮೂಲೆ ಮೂಲೆಯಿಂದ ಭಕ್ತರು ಪ್ರವಾಸಿಗರು ಕ್ಷೇತ್ರಕ್ಕೆ ಬರುತ್ತಾರೆ. ಗ್ರಾಮೀಣ ಭಾಗದ ರಸ್ತೆ ಸುಗಮವಾಗಿದ್ದರೆ ಹೆಚ್ಚಿನ ಸಂಖ್ಯೆಯಲ್ಲಿ ಕ್ಷೇತ್ರಕ್ಕೆ ಪ್ರವಾಸಿಗರು ಬರುತ್ತಾರೆ ಈ ಕಾರಣದಿಂದ ಡಾಕ್ಟರ್ ಜಿ ಪರಮೇಶ್ವರ್ ಹೆಚ್ಚಿನ ಸಹಕಾರ ನೀಡಿದ್ದಾರೆ. ಅವರಿಗೆ ಎಲ್ಲರ ಪರವಾಗಿ ಹೃತ್ಪೂರ್ವಕವಾದ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಹಾಗೂ ಈ ಭಾಗದ ಎಲ್ಲಾ ರೈತರಿಗೆ ವಿದ್ಯಾರ್ಥಿಗಳಿಗೆ ಸಾರ್ವಜನಿಕರಿಗೆ ರಸ್ತೆ ಅಭಿವೃದ್ಧಿಯಿಂದ ಹೆಚ್ಚಿನ ಅನುಕೂಲವಾಗಲಿದೆ ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರಕೆರೆ ಶಂಕರ್, ಸಿದ್ದರಬೆಟ್ಟವು ಒಂದು ಪ್ರವಾಸೋದ್ಯಮ ಕ್ಷೇತ್ರ ವಾಗಿದ್ದು ಈ ಕ್ಷೇತ್ರಕ್ಕೆ ಹೆಚ್ಚಿನದಾಗಿ ಪ್ರವಾಸಿಗರು ಮತ್ತು ಭಕ್ತರು ಬರುತ್ತಾರೆ. ಈ ಭಾಗದ ರಸ್ತೆಯು ಕಳೆದ ಐದಾರು ವರ್ಷಗಳಿಂದ ಅಭಿವೃದ್ಧಿಗೊಳ್ಳದೆ ನೆಲಗುದಿಗೆ ಬಿದ್ದಿತ್ತು. ಗೃಹ ಸಚಿವರಾದ ಡಾ. ಜಿ ಪರಮೇಶ್ವರ್ ಅವರ ವಿಶೇಷ ಕಾಳಜಿಯೊಂದಿಗೆ ಇದೀಗ ರಸ್ತೆ ಅಭಿವೃದ್ಧಿ ಆಗುತ್ತಿದೆ ಇದರಿಂದ ಸಾವಿರಾರು ಜನ ರೈತರು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.

ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆಯ ಎಇಇ ಕೆ ಎಸ್ ಸ್ವಾಮಿ, ಸಹಾಯ ಇಂಜಿನಿಯರ್ ನಿಖಿಲ್, ಕಿರಿಯ ಇಂಜಿನಿಯರ್, ಹೇಮಂತ್, ಗುತ್ತಿಗೆದಾರರಾದ ಶಿವಾನಂದ್, ಮನೋಜ್ ಸ್ಥಳೀಯ ಮುಖಂಡರಾದ ಮಾಜಿ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷರಾದ ಪುಟ್ಟನರಸಪ್ಪ, ಸೋಮಣ್ಣ, ಅರವಿಂದ್, ಗ್ರಾಮ ಪಂಚಾಯತಿ ಅಧ್ಯಕ್ಷೆ ಕವಿತಾ ರಮೇಶ್, ಪಿಡಿಒ ನಾಗವೇಣಿ, ನರಸಿಂಹಮೂರ್ತಿ, ಪ್ರಕಾಶ್, ಅಖಂಡರಾಧ್ಯ, ಸುರೇಶ್ ಎನ್ ಎಸ್, ಶ್ರೀರಂಗಪ್ಪ, ಮಂಜುನಾಥ್ ಇತರರು ಹಾಜರಿದ್ದರು.

– ಶ್ರೀನಿವಾಸ್‌

Leave a Reply

Your email address will not be published. Required fields are marked *

× How can I help you?