ಮಂಡ್ಯ-ಮಹಿಳೆಯರು-ಆಡಳಿತ-ಪ್ರವೃತ್ತಿಯನ್ನು-ಬೆಳೆಸಿಕೊಳ್ಳಬೇಕು- ಎನ್. ಚೆಲುವರಾಯಸ್ವಾಮಿ

ಮಂಡ್ಯ:- ಮಹಿಳೆಯರು ಸಾಮಾಜಿಕವಾಗಿ ಅಭಿವೃದ್ಧಿ ಕಾಣಲು ಆಡಳಿತ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು ಎಂದು ಕೃಷಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚೆಲುವರಾಯಸ್ವಾಮಿ ಅವರು ಹೇಳಿದರು.

ಇಂದು (ಏ.8) ರಂದು ನಗರದ ಅಂಬೇಡ್ಕರ್ ಭವನದಲ್ಲಿ “ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ -2025” ಕಾರ್ಯಕ್ರಮವನ್ನು ದೀಪಾ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಹಿಂದಿನಿಂದಲೂ ಹೆಣ್ಣು ಪೂಜನೀಯ ಸ್ಥಾನವನ್ನು ಅಲಂಕರಿಸಿದ್ದಾರೆ, ಮಹಿಳೆಯರ ಅಭಿವೃದ್ಧಿಯಿಂದ ಕುಟುಂಬ ಹಾಗೀ ದೇಶ ಅಭಿವೃದ್ಧಿಗೊಳ್ಳುತ್ತದೆ ಎಂದು ಹೇಳಿದರು.

ವಿಧಾನಸಭೆ ಹಾಗೂ ಲೋಕಸಭೆಗಳಲ್ಲೂ ಮಹಿಳೆಯರಿಗೆ ಮೀಸಲಾತಿ ನೀಡುವ ದಿನಗಳು ದೂರ ಇಲ್ಲ. ಮಹಿಳೆಯರು ವಿಧಾನಸಭಾ ಲೋಕಸಭಾ ಸದಸ್ಯರಾಗಿ ಆಡಳಿತ ನಡೆಸುವ ರೀತಿ ಸಜ್ಜಾಗಬೇಕು ಎಂದರು.

ಸದಾ ಒಳಿತನ್ನು ಮಾಡಿ ಹೆಣ್ಣು ತಾಳ್ಮೆಯ ಪ್ರತಿರೂಪ ಎನ್ನುತ್ತಾರೆ. ತಾಳ್ಮೆಯಿಂದ ಎದುರಾಗುವ ಸಮಸ್ಯೆಗಳನ್ನು ಬಗೆಹರಿಸಿ. ಜ್ಞಾನವನ್ನು ವೃದ್ಧಿಸಿಕೊಳ್ಳಿ ಇದರಿಂದ ಬಹಳಷ್ಟು ಕೆಲಸಗಳು ಸುಲಭವಾಗುತ್ತದೆ ಎಂದು ಕಿವಿಮಾತು ಹೇಳಿದರು.

ನಮ್ಮ ಸರ್ಕಾರ ನೀಡಿರುವ ಗ್ಯಾರಂಟಿ ಯೋಜನೆಗಳು ಮಹಿಳೆಯರಿಗೆ ಆರ್ಥಿಕವಾಗಿ ಶಕ್ತಿ ತುಂಬಿದೆ. ಸದಾ ಮನೆ ಹಾಗೂ ದೇಶವನ್ನು ಬೆಳಗುವ ದೀಪವಾಗಿ., ಯಾವುದೇ ಕ್ಷೇತ್ರವಾದರು ಮಹಿಳೆಯರು ಹಿಂಜರಿಯದೆ ಕಾರ್ಯ ನಿರ್ವಹಿಸಿ ಯಶಸ್ವಿಯಾಗಬೇಕು, ಮಹಿಳೆಯರು ಕೇವಲ ವಿದ್ಯಾವಂತರಾದರೆ ಸಾಲದು ಸಾಮಾನ್ಯ ಜ್ಞಾನ ಅತಿ ಮುಖ್ಯ ಎಂದು ತಿಳಿಸಿದರು.

ರಾಜ್ಯದಲ್ಲಿ ಪ್ರತಿನಿತ್ಯ 90 ಲಕ್ಷ ದಿಂದ 1 ಕೋಟಿ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ, ಹಾಲಿನ ಹೆಚ್ಚುವರಿ ಹಣ ರೂ 4 ಅನ್ನು ರೈತ ಮಹಿಳೆಯರ ಖಾತೆ ಪ್ರತಿನಿತ್ಯ ರೂ 9 ಕೋಟಿ ಹಣವನ್ನು ನೀಡಲಾಗುತ್ತಿದೆ ಎಂದರು.

ಮಹಿಳಾ ಮೀಸಲಾತಿ ಜಾರಿಗೊಳ್ಳುವುದರಿಂದ ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಅಧಿಕಾರಿಗಳಾಗಿ, ಜನಪ್ರತಿನಿಧಿಗಳಾಗಿ ಆಡಳಿತಗಾರರಾಗಿ ಸೇವೆ ಸಲ್ಲಿಸಬೇಕಾಗುತ್ತದೆ ಎಂದರು.

ಒಂದು ಕುಟುಂಬವನ್ನು ನಿರ್ವಾಹಣೆ ಮಾಡುವ ಸಾಮರ್ಥ್ಯ ಕೇವಲ ಹೆಣ್ಣು ಮಕ್ಕಳಿಂದ ಮಾತ್ರ ಸಾಧ್ಯ, ನರೇಗಾ ಯೋಜನೆಯಡಿ ಕಳೆದ ವರ್ಷ ಪ್ರಗತಿಯಲ್ಲಿ ಕರ್ನಾಟಕ ರಾಜ್ಯ 28 ನೇ ಸ್ಥಾನದಲ್ಲಿದೆ, ಈ ಬಾರಿ ಮೊದಲೇ ಸ್ಥಾನವನ್ನು ನಾವು ಅಲಂಕರಿಸಬೇಕು, ಈಗಾಗಲೇ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಆದ್ದರಿಂದ ನೀವು ನಿಮ್ಮೊಂದಿಗೆ ಸಹಕರಿಸಿ ಎಂದು ವಿನಂತಿಸಿದರು.

ಮಂಡ್ಯ ವಿಧಾನಸಭಾ ಶಾಸಕ ಪಿ. ರವಿಕುಮಾರ್ ಮಾತನಾಡಿ ಮಹಿಳೆಯರ ದೇಶದ ಶಕ್ತಿ, ಮಹಿಳೆಯರ ಬಲವರ್ಧನೆಗಾಗಿ ಗೃಹಲಕ್ಷಿ ಯೋಜನೆಯಡಿ ರೂ 2000-/ ನೀಡಲಾಗುತ್ತಿದೆ, ಈ ಯೋಜನೆಯನ್ನು ಅನೇಕ ರಾಜ್ಯಗಳಲ್ಲಿ ನಕಲು ಮಾಡಲಾಗುತ್ತಿದೆ, ಗೃಹಲಕ್ಷಿ ಯೋಜನೆಯಡಿ ಎಷ್ಟೋ ಬಡ ಜನರ ಬದುಕು ಕಟ್ಟಿಕೊಂಡಿರುವ ನಿದರ್ಶನಗಳನ್ನು ಕಾಣಬಹುದಾಗಿದೆ, ಮಹಿಳೆಯರ ಏಳಿಗೆ ಸರ್ಕಾರ ಸದಾ ಆದ್ಯತೆ ನೀಡುತ್ತದೆ ಎಂದು ಹೇಳಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್ ನಂದಿನಿ ಅವರು ಮಾತನಾಡಿ ಮಹಿಳೆಯರಿಗೆ ಈ ಬಾರಿ ವಿಶೇಷವಾಗಿ ಕ್ರಿಕೆಟ್, ಕಬ್ಬಡ್ಡಿ, ಆಶುಭಾಷಣ ಸ್ಪರ್ಧೆ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ತಾಲ್ಲೂಕು ಮಟ್ಟ ಹಾಗೂ ಜಿಲ್ಲಾ ಮಟ್ಟದಲ್ಲಿ ಆಯೋಜಿಸಿ ಮಹಿಳೆಯರಲ್ಲಿರುವ ಪ್ರತಿಭೆಗಳನ್ನು ಹೊರತರುವ ರೀತಿಯಲ್ಲಿ ಮಹಿಳಾ ದಿನಾಚರಣೆಯನ್ನು ಆಚರಿಸಲಾಗಿದೆ ಎಂದರು.

ಅAತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ವಿವಿಧ ಕ್ರೀಡಾಕೂಟದಲ್ಲಿ ಭಾಗವಹಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿ ವಿಜೇತರಾದ ಮಹಿಳೆಯರಿಗೆ ಬಹುಮಾನ ನೀಡಿ ಗೌರವಿಸಲಾಯಿತು.

ಜಿ.ಪಿ.ಎಲ್. ಎಫ್ ನಲ್ಲಿ ಉತ್ತಮ ಸೇವೆ ಸಲ್ಲಿಸದ ಮಹಿಳೆಯರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.

ಕಾರ್ಯಕ್ರಮದಲ್ಲಿ ಮೈಷುಗರ್ ಕಂಪನಿಯ ಅಧ್ಯಕ್ಷ ಸಿ.ಡಿ ಗಂಗಾಧರ,ಜಿಲ್ಲಾಧಿಕಾರಿ ಡಾ: ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ ರೂಪಶ್ರೀ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ರಾಜಮೂರ್ತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಓಂ ಪ್ರಕಾಶ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿದೇಂಶಕಿ ನಿರ್ಮಲ ಎಸ್.ಹೆಚ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

× How can I help you?