ಕೆ.ಆರ್.ಪೇಟೆ:ಹಾಲು ಉತ್ಪಾದಕರು ಆಕಸ್ಮಿಕವಾಗಿ ಸಂಭವಿಸುವ ನಷ್ಟ ತುಂಬಿಕೊಳ್ಳಲು ಕಡ್ಡಾಯವಾಗಿ ರಾಸು ವಿಮೆ ಮಾಡಿಸಬೇಕು ಎಂದು ಮನ್ಮುಲ್ ನಿರ್ದೇಶಕ ಶಾಸಕರಾದ ಹೆಚ್.ಟಿ ಮಂಜು ಹೇಳಿದರು.
ತಾಲ್ಲೂಕಿನ ಶೀಳನೆರೆ ಹೋಬಳಿಯ ನೀತಿಮಂಗಲ ಗ್ರಾಮದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ 2023-24 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದರು.
ಸೀಮೆ ಹಸುಗಳು ಬೇರೆ ಬೇರೆ ಕಾರಣಗಳಿಂದ ಮರಣ ಹೊಂದುವುದು ಸಾಮಾನ್ಯ.ಅಂಥ ಸಂದರ್ಭದಲ್ಲಿ ವಿಮೆ ನೆರವಿಗೆ ಬರುತ್ತದೆ.ವಿಮಾ ಹಣದಿಂದ ಮತ್ತೆ ಹಸುವನ್ನು ಖರೀದಿಸಲು ಸಾಧ್ಯವಾಗುತ್ತದೆ. ವಿಮೆ ಇಲ್ಲದಿದ್ದಲ್ಲಿ ಹಸು ಮರಣ ಹೊಂದಿದರೆ ರೈತರು ನಷ್ಟ ಅನುಭವಿಸಬೇಕಾಗುತ್ತದೆ. ಹಾಲು ಉತ್ಪಾದಕರ ಸಹಕಾರ ಸಂಘಗಳ ಪದಾಧಿಕಾರಿಗಳು ಹಾಗೂ ಸದಸ್ಯರು ರಾಸು ವಿಮೆ ಮಾಡಿಸಲು ಅಗತ್ಯ ತಿಳಿವಳಿಕೆ ನೀಡಬೇಕು.ಹಾಲು ಉತ್ಪಾದಕರು ಗುಣಮಟ್ಟದ ಹಾಲು ಉತ್ಪಾದನೆಗೆ ಪೂರಕವಾದ ಕ್ರಮಗಳನ್ನು ಕೈಗೊಳ್ಳಬೇಕು. ಪಶು ಆಹಾರ ಹಾಗೂ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಹೇಳಿದರು.
ಬಳಿಕ ಮಾತನಾಡಿದ ಮನ್ಮುಲ್ ನಿರ್ದೇಶಕ ಡಾಲು ರವಿ ಸಂಘದ ಪ್ರತಿಯೊಬ್ಬ ಸದಸ್ಯರು ವಾರ್ಷಿಕ ಸಭೆಯಲ್ಲಿ ಭಾಗವಹಿಸಿ ಸಂಘದ ಲಾಭ-ನಷ್ಟದ ಬಗ್ಗೆ ಆರೋಗ್ಯಕರ ಚರ್ಚೆ ಮಾಡಬೇಕು. ಸಂಘದಲ್ಲಿ ರಾಜಕೀಯ ಮಾಡದೇ ಸಂಘದ ಬಲವರ್ಧನೆಗೆ ಶ್ರಮಿಸಬೇಕು.ಹೆಚ್ಚು ಹಾಲು ಕೊಡುವ ಸಾಮರ್ಥ್ಯವುಳ್ಳ ವಿವಿಧ ತಳಿಯ ಜಾನುವಾರಗಳ ಬಗ್ಗೆ, ಜಾನುವಾರುಗಳ ಆರೋಗ್ಯ ನಿರ್ವಹಣೆಯಲ್ಲಿ ಸಮತೋಲನ ಪಶು ಆಹಾರದ ಮಹತ್ವ, ಜಾನುವಾರುಗಳಲ್ಲಿ ಬರುವ ರೋಗಗಳು ಹಾಗೂ ಹತೋಟಿ ಕ್ರಮಗಳು, ವೈಜ್ಞಾನಿಕ ಕೊಟ್ಟಿಗೆ ನಿರ್ಮಾಣ, ಸುಧಾರಿತ ಮೇವಿನ ಬೆಳೆಗಳ ಉತ್ಪಾದನೆ, ಜಾನುವಾರು ವಿಮೆ, ಶುದ್ಧ ಹಾಲು ಉತ್ಪಾದನೆ ಮಹತ್ವ, ಹಾಲಿನಲ್ಲಿರುವ ಘಟಕಗಳು ಮತ್ತು ಹಾಲಿನ ಮೌಲ್ಯವರ್ಧನೆ ಮತ್ತು ಹಾಲಿನಿಂದ ಬರುವ ವಿವಿಧ ಉತ್ಪನ್ನಗಳು ಮತ್ತು ಅವುಗಳ ಮಹತ್ವದ ಬಗ್ಗೆ ಉಪಯುಕ್ತ ಮಾಹಿತಿ ನೀಡಿದರು.
ಸಂಘಗಳ ಮಾರ್ಗ ವಿಸ್ತರಣಾಧಿಕಾರಿ ನಾಗಪ್ಪ ಅಲ್ಲಿಬಾದಿ ಈ ವರ್ಷದ ಆಯ್ಯವ್ಯಯ ಮತ್ತು ಮುಂದಿನ ವರ್ಷದ ಬಜೆಟ್‌ನ್ನು ಮಂಡಿಸಿದರು. ಸಂಘದ ಅಧ್ಯಕ್ಷ ನಾಗಮಣಿ ಸಭೆಯ ಅಧ್ಯಕ್ಷತೆ ವಹಿಸಿ ಸಂಘಕ್ಕೆ ಈ ವರ್ಷದಲ್ಲಿ ಅತೀ ಹೆಚ್ಚು ಹಾಲು ಸರಬರಾಜು ಮಾಡಿದ ಹಾಲು ಉತ್ಪಾದಕರಿಗೆ ಬಹುಮಾನ ನೀಡಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷೆ ನಾಗಮಣಿ, ಉಪಾಧ್ಯಕ್ಷೆ ಮಣಿ, ನಿರ್ದೇಶಕರಾದ ಪವಿತ್ರ ಮಹೇಶ್, ಜಯರತ್ನ, ಗೌರಿ, ಲಕ್ಷ್ಮಮ್ಮ, ರೂಪ, ತೇಜಾ, ಅರ್ಚನ, ಸಾವಿತ್ರಿ, ಗೀತಾ, ಗ್ರಾ.ಪಂ ಸದಸ್ಯ ಉಮಾ ಶ್ರೀಧರ್, ಪಿ. ಎ ಸಿ ಎಸ್ ನಿರ್ದೇಶಕರಾದ ಲೋಕಮಾತೇ,ಸಂಘದ ಕಾರ್ಯದರ್ಶಿ ಲತಾ, ಹಾಲು ಪರೀಕ್ಷಕಿ ಭಾಗ್ಯ, ಸಹಾಯಕಿ ಲಕ್ಷ್ಮಮ್ಮ ಸೇರಿದಂತೆ ಗ್ರಾಮಸ್ಥರು ಇದ್ದರು.
———————————— ಮನು ಮಾಕವಳ್ಳಿ