ಹಾಸನ-ದೇಶ-ಮೆಚ್ಚುವಂತಹ-ವಿದ್ವತ್ತನ್ನು-ಗಳಿಸಿದಂತಹ-ಮಹಾನ್- ವ್ಯಕ್ತಿ-ಬಾಬಾ-ಸಾಹೇಬ್-ಅಂಬೇಡ್ಕರ್-ಜಿಲ್ಲಾ-ಉಸ್ತುವಾರಿ-ಸಚಿವ- ಕೆ.ಎನ್ .ರಾಜಣ್ಣ

ಹಾಸನ: ಡಾ.ಬಿ.ಆರ್ ಅಂಬೇಡ್ಕರ್ ಅವರು ಹಾಕಿಕೊಟ್ಟ ಮಾರ್ಗಗಳನ್ನು ನಾವೆಲ್ಲರೂ ಅನುಸರಿಸಬೇಕು ಜೊತೆಗೆ ಮುಂದಿನ ಪೀಳಿಗೆಗೂ ಪರಿಚಯಿಸಬೇಕು, ಅವರ ವಿಚಾರಧಾರೆಯನ್ನು ಅರ್ಥೈಸಿಕೊಂಡು, ಮೆಲುಕು ಹಾಕುವಂತಾಗಬೇಕು ಎಂದು ಸಹಕಾರಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್ ರಾಜಣ್ಣ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ನಗರ ಸಭೆ ಹಾಸನ ಇವರ ಸಂಯುಕ್ತಾಶ್ರಯದಲ್ಲಿ ಹಾಸನಾಂಬ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಡಾ. ಬಿ.ಆರ್ ಅಂಬೇಡ್ಕರ್ ರವರ 134ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ದೇಶ ಮೆಚ್ಚುವಂತಹ ವಿದ್ವತ್ತನ್ನು ಗಳಿಸಿದಂತಹ ಮಹಾನ್ ವ್ಯಕ್ತಿ ಬಾಬಾ ಸಾಹೇಬ್ ಅಂಬೇಡ್ಕರ್, ಜಾತಿ ಶ್ರೇಣಿ ವಿರುದ್ಧ ಹೋರಾಡಿದ ಮಹಾನ್ ಹೋರಾಟಗಾರರು ಎಂದರು.

ಸಮಾಜದಲ್ಲಿ ವಿದ್ಯಾವಂತರಾಗಿ, ಆರ್ಥಿಕವಾಗಿ ಸದೃಢರಾಗಬೇಕು, ಸಂವಿಧಾನದ ಮೂಲಕ ನಮಗೆ ಬೇಕಾದಂತಹ ಹಕ್ಕುಗಳನ್ನು ಕೇಳುವ ಮನಸ್ಥಿತಿಯನ್ನು ಹೊಂದಬೇಕು. ಅದಕ್ಕೆ ಫಲದಕ್ಕದೆ ಹೋದಾಗ ಹೋರಾಟ ಮಾಡುವಂತಹ ಮನೋಭಾವವನ್ನ ಬೆಳೆಸಿಕೊಳ್ಳಬೇಕು ಎಂಬುದನ್ನು ತಿಳಿಸಿಕೊಟ್ಟಿದ್ದಾರೆ ಎಂದು ಹೇಳಿದರು.

ಅಂದಿನ ಕಾಲದಲ್ಲಿ ಅವರು ಪಟ್ಟಂತಹ ಶ್ರಮದಲ್ಲಿ ನಾವು ಶೇಕಡ ಒಂದರಷ್ಟು ಕೂಡ ಶ್ರಮ ಪಡಲು ಸಾಧ್ಯವಿಲ್ಲ, ಸಮಾನತೆ ಬರುವವರೆಗೂ ಸಂಘರ್ಷ ಅನಿವಾರ್ಯವಾಗಿದೆ. ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಪ್ರತಿಯೊಂದು ವರ್ಗಗಳಿಗೂ ಮೀಸಲಾತಿಯನ್ನು ಕೊಡದಿದ್ದರೆ ನಾವುಗಳು ಸಮಾಜದಲ್ಲಿ ಮುಂದೆ ಬರಲು ಸಾಧ್ಯವಾಗುತ್ತಿರಲಿಲ್ಲ, ಒಬ್ಬ ಅತ್ಯುನ್ನತ ವಿದ್ಯಾವಂತರಾಗಿ, ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾಗುವ ವಿದ್ವತ್ತನ್ನು ಹೊಂದಿದ್ದ ಡಾ. ಬಿ.ಆರ್ ಅಂಬೇಡ್ಕರ್ ಅವರು ಮೊದಲು ಶಿಕ್ಷಣ ಪಡೆಯಬೇಕು, ನಂತರ ಸಂಘಟನೆಯೊಂದಿಗೆ ಹೋರಾಟ ಮಾಡಿ ತಮ್ಮ ಹಕ್ಕುಗಳನ್ನು ಪಡೆಯಬೇಕು ಎಂಬ ಸಂದೇಶಗಳನ್ನು ನಮಗೆ ನೀಡಿದ್ದಾರೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಸತ್ಯಭಾಮ ಮಾತನಾಡಿ ಡಾ.ಬಿ.ಆರ್ ಅಂಬೇಡ್ಕರ್ ಅವರು ಸಂವಿಧಾನದ ಪ್ರಮುಖ ಶಿಲ್ಪಿಯಾಗಿದ್ದಾರೆ. ರಾಜಕೀಯ ಸ್ವಾತಂತ್ರ್ಯ ಏಕೆ ಬೇಕು ಎಂಬುದನ್ನು ನಮಗೆ ತಿಳಿಸಿಕೊಟ್ಟಿದ್ದಾರೆ. ಇವರು ಕಾನೂನು ತಜ್ಞರಾಗಿ, ಬರವಣಿಗೆಗಾರರಾಗಿ, ಸ್ಕಾಲರ್ ಆಗಿ, ಸಂಪಾದಕರಾಗಿ, ತತ್ವಜ್ಞಾನಿಯಾಗಿ ಹೀಗೆ ಅನೇಕ ವಿಷಯಗಳಲ್ಲಿ ಅಗಾಧ ಪಾಂಡಿತ್ಯವನ್ನು ಹೊಂದಿದವರಾಗಿದ್ದಾರೆ.

ಡಾ.ಬಿ.ಆರ್ ಅಂಬೇಡ್ಕರ್ ಅವರು ತಮ್ಮದೇ ಆದಂತಹ ಸ್ವಂತ ವಿಸ್ತøತವಾದ ರಾಜಗೃಹ ಎಂಬ ಗ್ರಂಥಾಲಯವನ್ನು ಹೊಂದಿದ್ದರು. ಸುಮಾರು 50 ಸಾವಿರ ಪುಸ್ತಕದ ಭಂಡಾರವನ್ನು ಹೊಂದಿದ್ದ ಪ್ರಪಂಚದ ಏಕೈಕ ವ್ಯಕ್ತಿಯಾಗಿದ್ದರು ಎಂದರು.

ಮುಖ್ಯ ಭಾಷಣಕಾರರಾಗಿ ಆಗಮಿಸಿ ಮಾತನಾಡಿದ ಬೆಂಗಳೂರು ಮೆಡಿಕಲ್ ಕಾಲೇಜಿನ ನೇತ್ರ ಶಾಸ್ತ್ರ ವಿಭಾಗದ ನಿವೃತ್ತ ಪ್ರೊಫ್ ಸರ್ ಮತ್ತು ಮುಖ್ಯಸ್ಥ ಡಾ.ಹೆಚ್.ಆರ್ ಸುರೇಂದ್ರ ಅವರು ಅಂಬೇಡ್ಕರ್ ಅವರು ಒಬ್ಬ ಕ್ರಾಂತಿಕಾರಿ ವ್ಯಕ್ತಿ ಇವರು ಯಾವುದೇ ಒಂದು ಭಾಷೆಗೆ, ಜನಾಂಗಕ್ಕೆ, ಧರ್ಮಕ್ಕೆ ಸೀಮಿತರಾದವರಲ್ಲ. 56 ಭಾಷೆಗಳ ಪಾಂಡಿತ್ಯವನ್ನು ಹೊಂದಿದಂತಹ ಮಹಾನ್ ವ್ಯಕ್ತಿಯಾಗಿದ್ದಾರೆ. ಜ್ಞಾನ ಭಂಡಾರದ ಮುಂದೆ ಎಲ್ಲರೂ ತಲೆಬಾಗಲೇಬೇಕು ಎಂದು ಬಾಬಾ ಸಾಹೇಬ್ ಡಾ.ಬಿ.ಆರ್ ಅಂಬೇಡ್ಕರ್ ಅವರ ಕುರಿತು ತಿಳಿಸಿದರು.

ನಗರ ಸಭೆ ಅಧ್ಯಕ್ಷ ಚಂದ್ರೇಗೌಡ ಮಾತನಾಡಿ ಬಡತನದ ಕುಲುಮೆಯಲ್ಲಿ ಬೆಂದು, ಕಷ್ಟಪಟ್ಟು, ತನ್ನ ಸ್ವಂತ ಪರಿಶ್ರಮದಿಂದ ಓದಿ, ಇಡೀ ವಿಶ್ವವೇ ಶಿರಭಾಗಿ ನಮಿಸುವ ಸಂವಿಧಾನವನ್ನು ರಚಿಸಿದ ಮಹಾನ್ ವ್ಯಕ್ತಿಯನ್ನು ಪಡೆದಿರುವ ಭಾರತೀಯರಾದ ನಾವು ಧನ್ಯರು ಎಂದರು.

ಸಮುದಾಯದ ಮುಖಂಡ ಸಂದೇಶ್ ಮಾತನಾಡಿ ಅಂಬೇಡ್ಕರ್ ಅವರು ಕೇವಲ ಅಸ್ಪಶ್ಯರಿಗಾಗಿ ಮಾತ್ರ ಹೋರಾಟ ಮಾಡಿದವರಲ್ಲ, ಎಲ್ಲ ಸಮುದಾಯದವರಿಗಾಗಿ ಶ್ರಮಿಸಿದ್ದಾರೆ. ಇವರು ಪಿ.ಡಬ್ಲ್ಯೂ.ಡಿ, ನೀರಾವರಿ, ಕಾರ್ಮಿಕ ಸಚಿವರಾಗಿಯೂ ಕೆಲಸ ಮಾಡಿದ್ದಾರೆ. ಸಟ್ಲೇಜ್, ಬಿಯಾಸ್, ರಾವಿ ನದಿಗಳನ್ನು ಒಟ್ಟಿಗೆ ಸೇರಿಸಿ ಬಾಕ್ರನಂಗಲ್ ಆಣೆಕಟ್ಟನ್ನು ನಿರ್ಮಾಣ ಮಾಡಲು ಅಂಬೇಡ್ಕರ್ ಅವರು ಕಾರಣೀಕರ್ತರಾಗಿದ್ದಾರೆ ಎಂದರು.

ದೇಶದಲ್ಲಿ ಯಾವುದೇ ಪಕ್ಷಪಾತವಿಲ್ಲದೆ ಉದ್ಯೋಗವನ್ನು ಪಡೆದುಕೊಳ್ಳಲು ಯೂನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್ ಅನ್ನು ಕೇಂದ್ರದಲ್ಲಿ ಹಾಗೂ ಎಲ್ಲಾ ರಾಜ್ಯಗಳಲ್ಲಿ ಅವರವರ ರಾಜ್ಯದ ಹೆಸರಿನಲ್ಲಿ ಆಯೋಗವನ್ನು ರಚಿಸಲು ಡಾ. ಬಿ.ಆರ್ ಅಂಬೇಡ್ಕರ್ ಅವರು ಪ್ರಮುಖರಾಗಿದ್ದಾರೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಸಮುದಾಯದಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಮುಖಂಡರನ್ನು ಸನ್ಮಾನಿಸಲಾಯಿತು.
ಸಂಸದ ಶ್ರೇಯಸ್ ಪಟೇಲ್, ಶಾಸಕ ಸ್ವರೂಪ್ ಪ್ರಕಾಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಆರ್ ಪೂರ್ಣಿಮ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಮ್ಮದ್ ಸುಜಿತ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಲ್ಲೇಶ್‍ಗೌಡ, ಶಂಕರ್ ರಾಜ್, ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಎ.ಗೋಪಾಲಸ್ವಾಮಿ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಿ.ಪಿ ಕೃಷ್ಣೇಗೌಡ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ದೂದ್ ಫಿರ್ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

× How can I help you?