ಎಚ್.ಡಿ.ಕೋಟೆ: ಸಮಾಜದ ಪ್ರಗತಿಯನ್ನು ಮಹಿಳೆಯರ ಪ್ರಗತಿಯಿಂದ ಅಳೆದಾಗ ಮಾತ್ರ ಅದು ಸಂವಿಧಾನದ ಪ್ರಭಾವವನ್ನು ಹೇಳುತ್ತದೆ ಅಂಬೇಡ್ಕರ್ ಹೇಳಿದ್ದರು ಎಂದು ತಹಶೀಲ್ದಾರ ಶ್ರೀನಿವಾಸ ತಿಳಿಸಿದರು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ತಾಲ್ಲೂಕು ಆಡಳಿತದ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 134ನೇ ಜಯಂತಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಶಾಸಕ ಅನಿಲ್ ಚಿಕ್ಕಮಾದು ಮಾತನಾಡಿ ವಿಶ್ವಜ್ಞಾನಿ ಅಂಬೇಡ್ಕರ್ ಜಯಂತಿಯನ್ನು ಮುಖ್ಯಮಂತ್ರಿ ಸಿದ್ದರಾಯಮಯ್ಯ ಸೇರಿದಂತೆ ವಿವಿಧ ಗಣ್ಯರನ್ನು ಸ್ವಾಗತಿಸಿ ಪಟ್ಟಣದಲ್ಲಿ ನಿರ್ಮಾಣಗೊಂಡಿರುವ ಅಂಬೇಡ್ಕರ್ ಪುತ್ತಳಿಯನ್ನು ಅನಾವರಣ ಮತ್ತು ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಗುವುದು ಎಂದರು.
ಎಲ್ಲಾ ರೀತಿಯ ವಿವಿಧ ಸಮುದಾಯಗಳನ್ನು ಪರಿಗಣಿಸಿ ಸಂವಿಧಾನವನ್ನು ರಚಿಸಿದ್ದಾರೆ. ಎಲ್ಲಾ ಸಮುದಾಯದವರು ಸಹ ಮುನುಷ್ಯರಂತೆ ಜೀವನ ನಡೆಸಲು ಅವಕಾಶವನ್ನು ಸಂವಿಧಾನದ ಮೂಲಕ ಕೊಟ್ಟಂತಹ ಕೊಡುಗೆಯಾಗಿದೆ ಎಂದರು.
ದೇವರು ಯಾರಿಗೂ ವರವನ್ನಾಗಲಿ ಶಾಪವನ್ನಾಗಲಿ ಕೊಡಲ್ಲ, ಕೇವಲ ಅವಕಾಶ ಕೊಡುತ್ತಾನೆ ಅದನ್ನು ಉಳಿಸಿಕೊಳ್ಳುವುದು ಅವರವರ ಕೈಯ್ಯಲ್ಲಿರುತ್ತದೆ ಎನ್ನುವುದು ನನ್ನ ನಂಬಿಕೆಯಾಗಿದೆ ಎಂದರು.
ಕೆಲವು ಜನರು ತಮ್ಮ ಮನೆಗಳಿಗೆ ಕರೆಯುತ್ತಾರೆ, ಆದರೆ ತಮ್ಮ ಮನೆಯ ಒಳಗೆ ಬಿಡಲು ಹಿಂದೇಟು ಹಾಕುತ್ತಾರೆ, ಶಾಸಕನಾದ ವ್ಯಕ್ತಿ ಬರಬೇಕು ಆದರೆ ಮನೆಯಳಗೆ ಬರಲು ಬಿಡುವುದಿಲ್ಲ, ಹೀಗೆ ಇನ್ನೂ ಸಹ ಜಾತಿ ವ್ಯವಸ್ಥೆ ಜೀವಂತವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕೇವಲ ಜಾತಿಯ ಕಾರಣಕ್ಕೆ ಅಂಬೇಡ್ಕರ್ ಕ್ರೈಸ್ತ ಧರ್ಮಕ್ಕೋ, ಮುಸ್ಲೀಂ ಮತಕ್ಕೋ ಹೋಗಬಹುದಿತ್ತು, ಅವರಿಗೆ ಎಲ್ಲಾ ಕಡೆಯಿಂದಲೂ ರತ್ನಕಂಬಳಿಯ ಸ್ವಾಗತವಿತ್ತು, ಆದರೂ ಸಹ ಅವರು ಭಾರತದ ಮತ್ತು ಶಾಂತಿ ಸಂದೇಶವಿರುವ ಬೌದ್ಧ ಧರ್ಮಕ್ಕೆ ಮತಾಂತರಗೊಂಡು ದೇಶದ ಏಕತೆ, ಗೌರವವನ್ನು ಕಾಪಾಡಿದ ಮಹಾನ್ ನಾಯಕ ಎಂದರು.

ಭೀಮನಹಳ್ಳಿ ಸೋಮೇಶ್ ಮಾತನಾಡಿ, ಸಮಾಜದ ಶೋಷಣೆಯಿಂದ ನೊಂದು, ಬೆಂದು ಬಳಲಿ ಸಮಾಜದ ಏಳಿಗೆಗೆ ಶ್ರಮಿಸಿದವರು ಡಾ.ಬಿ.ಆರ್.ಅಂಬೇಡ್ಕರ್ ಎಂದರು.
ಶೋಷಣೆಯನ್ನು ಅನುಭವಿಸಿದರೂ ಸಹ ಕ್ರಾಂತಿಕಾರಿಯಾಗಲಿಲ್ಲ, ತಾನು ಅನುಭವಿಸಿದ ಯಾತನೆಯನ್ನು ಇತರೆ ಜನರು ಅನುಭವಿಸಬಾರದು ಎಂದು ಎಲ್ಲರಿಗೂ ಸಮಾನತೆ ಜೊತೆಗೆ ಸೋದರತತ್ವವನ್ನು ಸಂವಿಧಾನದಲ್ಲಿ ಅಡಕವಾಗಿಸಿದ್ದಾರೆ ಎಂದರು.
ಈ ವೇಳೆ ಮಲಾರ ಪುಟ್ಟಯ್ಯ, ಚಾ.ನಂಜುಂಡಮೂರ್ತಿ, ಪುರಸಭಾ ಸದಸ್ಯ ಎಚ್.ಸಿ.ನರಸಿಂಹ ಮೂರ್ತಿ, ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಮಧು, ಕೆ.ಈರೇಗೌಡ, ರಾಮಸ್ವಾಮಿ, ಪಿ.ನಾಗರಾಜು, ಎಂ.ಡಿ.ಮಂಚಯ್ಯ, ಜಿವಿಕ ಉಮೇಶ್, ಸಿ.ತಿಮ್ಮಯ್ಯ, ಪರಶಿವಮೂರ್ತಿ, ಶಿವಯ್ಯ, ಉಡ ನಾಗರಾಜ್, ಸಿಪಿಐ ಗಂಗಾಧರ್, ಕೆಂಡಗಣ್ಣೇಗೌಡ, ಮಾಲೇಗೌಡ, ಶಿವಮಲ್ಲು, ಸೌಮ್ಯ, ಲಾರಿ ಪ್ರಕಾಶ್, ಇದ್ದರು.
- ಶಿವಕುಮಾರ, ಎಚ್.ಡಿ.ಕೋಟೆ