ತುಮಕೂರು: ಹಿಂದುಳಿದ ವರ್ಗಗಳ ಆಯೋಗ ರಾಜ್ಯ ಸರ್ಕಾರಕ್ಕೆ ಸಲ್ಲಿಸಿರುವ ಜಾತಿ ಜನಗಣತಿ ವರದಿಯಲ್ಲಿ ಕುಂಚಿಟಿಗ ಸಮುದಾಯದ ಸಂಖ್ಯೆ ಬಗ್ಗೆ ತಪ್ಪು ಮಾಹಿತಿ ನೀಡಿದೆ, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸುಮಾರು 35 ಲಕ್ಷ ಕುಂಚಿಟಿಗರಿದ್ದಾರೆ, ವರದಿಯಲ್ಲಿ ಕೇವಲ 1.95 ಲಕ್ಷ ಮಾತ್ರ ಕುಂಚಿಟಿಗರಿದ್ದಾರೆ ಎಂದು ನಮೂದಿಸಲಾಗಿದೆ.ನಮ್ಮಜಾತಿಯ ಮರು ಸಮೀಕ್ಷೆ ಆಗಬೇಕು ಎಂದು ಅಖಿಲ ಕುಂಚಿಟಿಗರ ಮಹಾಮಂಡಲ ಅಧ್ಯಕ್ಷ ಹೆಚ್.ರಂಗಹನುಮಯ್ಯ ಸರ್ಕಾರವನ್ನು ಒತ್ತಾಯಿಸಿದರು.
ಮಂಗಳವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 1930ರಲ್ಲಿ ಮೈಸೂರು ಮಹಾರಾಜರ ಆಡಳಿತ ಕಾಲದಲ್ಲಿ ಕುಂಚಿಟಿಗರು ಪ್ರತ್ಯೇಕ ಜಾತಿ, ಯಾವುದೇ ಜಾತಿಯ ಉಪಜಾತಿಯಲ್ಲ ಎಂದು ಸ್ಥಾನಮಾನ ನೀಡಲಾಗಿತ್ತು.1931ರಲ್ಲಿ ನಡೆದ ಜನಗಣತಿ ಪ್ರಕಾರ ಕುಂಚಿಟಿಗರ ಸಂಖ್ಯೆ 1.16 ಲಕ್ಷದಷ್ಟಿತ್ತು.ಇಲ್ಲಿಯವರೆಗೆ ಕುಂಚಿಟಿಗರ ಸಂಖ್ಯೆ ಏರಿಕೆಯಾಗಿರುವುದು ಕೇವಲ 1.95 ಲಕ್ಷವೆ? ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ 19 ಜಿಲ್ಲೆಗಳ 46 ತಾಲ್ಲೂಕುಗಳಲ್ಲಿ ಕುಂಚಿಟಿಗರಿದ್ದಾರೆ. ತುಮಕೂರು, ಚಿತ್ರದುರ್ಗ, ಮೈಸೂರು, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ರಾಮನಗರ ಮೊದಲಾದ ಜಿಲ್ಲೆಗಳಲ್ಲಿ ನಮ್ಮ ಜನಾಂಗದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.ತುಮಕೂರು, ಚಿತ್ರದುರ್ಗ ಜಿಲ್ಲೆಯಲ್ಲೇ 2 ಲಕ್ಷ ಮೀರಿ ನಮ್ಮ ಜನಸಂಖ್ಯೆ ಇದೆ.ಸಮೀಕ್ಷೆ ನಡೆಸಿದವರು ಯಾವ ಆಧಾರದ ಮೇಲೆ ಕುಂಚಿಟಿಗರ ಜನಗಣತಿ ಮಾಡಿದರೋ ಗೊತ್ತಿಲ್ಲ, ನಮ್ಮ ಮನೆಗಳಿಗೆ ಗಣತಿಗಾಗಿ ಯಾರೂ ಬಂದೇ ಇಲ್ಲ,ಕುಂಚಿಟಿಗರಿಗೆ ಪ್ರತ್ಯೇಕ ನಿಗಮ ಪ್ರಾರಂಭಿಸಬೇಕು,17ರಂದು ನಡೆಯುವ ಕ್ಯಾಬಿನೆಟ್ ನಲ್ಲಿ ಇದಕ್ಕೆ ಅನುಮೋದನೆ ನೀಡಬಾರದು,ರಾಜ್ಯದಲ್ಲಿ ಕನಿಷ್ಠ 35 ಲಕ್ಷ ಜನ ಕುಂಚಿಟಿಗರು ಇದ್ದಾರೆ,ಇದು 2011ರ ಜಾತಿಗಣತಿ ಈಗ 2025 ಅಂದರೆ 14 ವರ್ಷದ ಹಿಂದೆ ಮಾಡಿದ ಜಾತಿಗಣತಿಯನ್ನು ರದ್ದು ಮಾಡಿ ಪುನಃ ಜಾತಿಗಣತಿ ಮಾಡಿ ಕುಂಚಿಟಿಗರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂದು ರಂಗಹನುಮಯ್ಯ ಹೇಳಿದರು.

ರಾಜ್ಯದಲ್ಲಿ ಸುಮಾರು 46 ಕುಂಚಿಟಿಗರ ಸಂಘಗಳಿವೆ, ಒಂದೊಂದು ಸಂಘಗಳಲ್ಲಿ ಸಾವಿರಾರು ಸಂಖ್ಯೆಯ ಸದಸ್ಯರಿದ್ದಾರೆ. ಇಷ್ಟೆಲ್ಲಾ ಇದ್ದರೂ ಕುಂಚಿಟಿಗರ ಸಂಖ್ಯೆಯನ್ನು 1.95 ಲಕ್ಷಕ್ಕೆ ಸೀಮಿತಗೊಳಿಸಿರುವುದರ ಹಿಂದೆ ರಾಜಕೀಯ ಪಿತೂರಿ ಅಡಗಿದೆ.ಕುಂಚಿಟಿಗರಿಗೆ ಆಗಿರುವ ಅನ್ಯಾಯ ಸರಿಪಡಿಸಬೇಕು, ಮರು ಸಮೀಕ್ಷೆ ನಡೆಸಬೇಕು ಎಂದು ಮುಖ್ಯಮಂತ್ರಿ ಬಳಿಗೆ ನಿಯೋಗ ಹೋಗಿ ಒತ್ತಾಯಿಸಲಾಗುವುದು ಎಂದು ತಿಳಿಸಿದರು.
ಮಹಾಮಂಡಲ ಗೌರವಾಧ್ಯಕ್ಷ ಗೋವಿಂದೇಗೌಡ, ಉಪಾಧ್ಯಕ್ಷ ಗೋವಿಂದರಾಜು, ಪ್ರಧಾನ ಕಾರ್ಯದರ್ಶಿ ಪಟೇಲ್ ದೊಡ್ಡೇಗೌಡ, ಕಾರ್ಯದರ್ಶಿ ಎಂ.ರಂಗರಾಜು, ಜಿಲ್ಲಾ ಕುಂಚಿಟಿಗ ಒಕ್ಕಲಿಗರ ಸಂಘದ ಅಧ್ಯಕ್ಷ ನೇತಾಜಿ ಕೆ.ಶ್ರೀಧರ್, ಮುಖಂಡರಾದ ತುಂಗೋಟಿರಾಮಣ್ಣ, ಭಕ್ತರಹಳ್ಳಿ ದೇವರಾಜು, ಅಶೋಕ್ ಕಾರ್ಪೆಹಳ್ಳಿ, ವೀರನಾಗಪ್ಪ, ಸತೀಶ್, ಲಕ್ಷ್ಮಿಕಾಂತ್, ಬಸವರಾಜು ಹಾಜರಿದ್ದರು.
- ಕೆ.ಬಿ.ಚಂದ್ರಚೂಡ