ಕೆ.ಆರ್.ಪೇಟೆ: ತಾಲ್ಲೂಕಿನ ಸಂತೇಬಾಚಹಳ್ಳಿ ಹೋಬಳೀಯ ಭಾರತೀಪುರ ಕ್ರಾಸ್ ಗ್ರಾಮ ಪಂಚಾಯತಿಯ ನೂತನ ಅಧ್ಯಕ್ಷರಾಗಿ ಬಿ.ಎನ್.ಕುಮಾರ್, ಉಪಾಧ್ಯಕ್ಷರಾಗಿ ಮಂಜುಳಾ ನಾಗರಾಜಾಚಾರಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ಹಿಂದಿನ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಡಿ.ಕುಬೇರ ಮತ್ತು ಉಪಾಧ್ಯಕ್ಷೆ ರುಕ್ಮಿಣಿ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಗಳಿಗೆ ಇಂದು ಚುನಾವಣೆ ನಿಗಧಿಯಾಗಿತ್ತು. ಅಧ್ಯಕ್ಷ ಸ್ಥಾನ ಬಯಸಿ ಭಾರತೀಪುರ ಬಿ.ಎನ್.ಕುಮಾರ್ ಮತ್ತು ಉಪಾಧ್ಯಕ್ಷ ಸ್ಥಾನ ಬಯಸಿ ಮಂಜುಳನಾಗರಾಜಚಾರಿ ಅವರನ್ನು ಹೊರತು ಪಡಿಸಿ ಬೇರೆ ಯಾರೂ ಸಹ ನಾಮಪತ್ರ ಸಲ್ಲಿಸದೇ ಇರುವ ಕಾರಣ ಅವಿರೋಧ ಆಯ್ಕೆ ನಡೆಯಿತು.
ಚುನಾವಣಾಧಿಕಾರಿಯಾಗಿ ನೀರಾವರಿ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ಚಂದ್ರೇಗೌಡ, ಸಹ ಚುನಾವಣಾಧಿಕಾರಿಯಾಗಿ ತಾಲ್ಲೂಕು ಪಂಚಾಯತ್ ವ್ಯವಸ್ಥಾಪಕ ಅನಿಲ್ಬಾಬು, ಪಿಡಿಓ ದಿನೇಶ್ಕುಮಾರ್ ಕಾರ್ಯನಿರ್ವಹಿಸಿದರು.

ನೂತನ ಅಧ್ಯಕ್ಷ ಬಿ.ಎನ್.ಕುಮಾರ್ ಮತ್ತು ಉಪಾಧ್ಯಕ್ಷೆ ಮಂಜುಳ ಅವರನ್ನು ಶಾಸಕ ಹಚ್.ಟಿ.ಮಂಜು, ತಾಲ್ಲೂಕು ಬಿಜೆಪಿ ಅಧ್ಯಕ್ಷ ಸಾರಂಗಿ ನಾಗಣ್ಣ, ತಾ.ಪಂ.ಮಾಜಿ ಸದಸ್ಯ ಮಲ್ಲೇನಹಳ್ಳಿ ಮೋಹನ್, ಪುರಸಭೆ ಮಾಜಿ ಅಧ್ಯಕ್ಷ ನಟರಾಜ್, ಮಾಜಿ ಸದಸ್ಯ ಕೆ.ಎನ್.ಕಿರಣ್, ಗ್ರಾ.ಪಂ.ಸದಸ್ಯರಾದ ಬೆಡದಹಳ್ಳಿ ಸುನಿಲ್, ಬಿ.ಕೆ.ಶಿವರಾಂ, ಮಾರೇನಹಳ್ಳಿ ಲಕ್ಷ್ಮಮ್ಮ, ಕೆ.ಕೆಂಪರಾಜು, ಕೊರಟೀಕೆರೆ ಮೋಹನ್, ಶಶಿಕಲಾ, ಭಾರತೀಪುರ ಗೀತಾ, ಮೈಲಾರಪಟ್ಟಣ ಕೃಷ್ಣವೇಣಿ, ಯಲಾದಹಳ್ಳಿ ಜಯರಾಮಯ್ಯ, ಬಳ್ಳೇಕೆರೆ ಮಂಜೇಗೌಡ ಸೇರಿದಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳ ಮುಖಂಡರು ಹಾಗೂ ಗ್ರಾಮ ಪಂಚಾಯಿತಿಯ ಸಿಬ್ಬಂದಿ ವರ್ಗದವರು ನೂತನ ಅಧ್ಯಕ್ಷ ಉಪಾಧ್ಯಕ್ಷರನ್ನು ಅಭಿನಂದಿಸಿದರು.
ಶಾಸಕ ಹೆಚ್.ಟಿ.ಮಂಜು ಅವರು ನೂತನವಾಗಿ ಅಧ್ಯಕ್ಷ-ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಬಿ.ಎನ್.ಕುಮಾರ್ ಮತ್ತು ಮಂಜುಳಮ್ಮ ಅವರನ್ನು ಅಭಿನಂದಿಸಿ ಮಾತನಾಡಿ ಗ್ರಾಮೀಣ ಪ್ರದೇಶದ ಜನತೆಗೆ ಶುದ್ಧ ಕುಡಿಯುವ ನೀರು, ಸ್ವಚ್ಛತೆ, ಬೀದಿ ದೀಪಗಳ ನಿರ್ವಹಣೆ ಸೇರಿದಂತೆ ಕನಿಷ್ಠ ಮೂಲಭೂತ ಸಮಸ್ಯೆಗಳಿಗೆ ಪರಿಹಾರವನ್ನು ದೊರಕಿಸಿಕೊಡುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕ್ರಿಯಾಶೀಲವಾಗಿ ಕೆಲಸ ಮಾಡಿ ಜನರ ಪ್ರೀತಿ ವಿಶ್ವಾಸಕ್ಕೆ ಭಾಜನರಾಗಬೇಕು ಎಂದು ಸಲಹೆ ನೀಡಿದರು.
-ಶ್ರೀನಿವಾಸ ಆರ್.