ಎಚ್.ಡಿ.ಕೋಟೆ: ಮೈಕ್ರೋ ಫೈನಾನ್ಸ್ ನವರಿಂದ ಕಿರುಕುಳ ಎಂದು ರಾಜ್ಯದಾದ್ಯಂತ ಆರೋಪ ಕೇಳಿ ಬಂದ ಪ್ರಕರಣ ಮಾಸುವ ಮುನ್ನವೇ ಪಟ್ಟಣದಲ್ಲಿರುವ ಮೈಕ್ರೋ ಫೈನಾನ್ಸ್ ನ ಕೆಲ ಸಿಬ್ಬಂದಿಗಳಿಂದ ನಿವಾಸಿಗಳು ತೊಂದರೆ ಅನುಭವಿಸುತ್ತಿರುವ ಆರೋಪಗಳು ಕೇಳಿ ಬರುತ್ತಿದೆ.
ರಾಜ್ಯದ ಪ್ರತಿಷ್ಠಿತ ಫೈನಾನ್ಸ್ ಕಂಪನಿಗಳು ತಾಲೂಕಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಇವುಗಳ ಕಚೇರಿಗಳನ್ನು ಪಟ್ಟಣದ ಪ್ರಮುಖ ಬಡವಾಣೆಗಳಲ್ಲಿ ತೆರೆದಿವೆ. ಕಂಪನಿಗಳಲ್ಲಿ ಕೆಲಸ ಮಾಡುವ ಕೆಲವು ಸಿಬ್ಬಂದಿಗಳು ಅಸಭ್ಯವಾಗಿ ವರ್ತಿಸುತ್ತಿರುವ ಬಗ್ಗೆ ಕೆಲ ನಿವಾಸಿಗಳು ಆಕ್ಷೇಪಿಸುತ್ತಿದ್ದಾರೆ.

ಪುರಸಭೆಗೆ ತೆರಿಗೆಯಲ್ಲಿ ವಂಚನೆ:-
ಮೈಕ್ರೋ ಫೈನಾನ್ಸ್ ನ ಸುಮಾರು 25-30 ಕಂಪನಿಗಳು ಪಟ್ಟಣದ ಹೌಸಿಂಗ್ ಬೋರ್ಡ್ ನ 13, 14ನೇ ವಾರ್ಡ್, ವಿಶ್ವನಾಥ ಕಾಲೋನಿಯ 11, 12ನೇ ವಾರ್ಡ್, ಡ್ರೈವರ್ ಕಾಲೋನಿ, ಆಸ್ಪತ್ರೆ ಬಡಾವಣೆ, ಕೃಷ್ಣಪುರ ಸೇರಿದಂತೆ ಹಲವು ಬಡಾವಣೆಗಳಲ್ಲಿ ವಾಸದ ಮನೆಗಳನ್ನು ಬಾಡಿಗೆಗೆ ಪಡೆದು, ಕಚೇರಿಗಳನ್ನಾಗಿ ಪರಿವರ್ತಿಸಿಕೊಂಡಿವೆ. ಪಟ್ಟಣ ವ್ಯಾಪ್ತಿಯಲ್ಲಿ ಪುರಸಭೆಯಿಂದ ವಾಸದ ಮನೆ ಹಾಗು ವಾಣಿಜ್ಯದ ಉದ್ದೇಶಕ್ಕಾಗಿ ಪ್ರತ್ಯೇಕ ತೆರಿಗೆ ನಿಗದಿಯಾಗಿ ವಾರಸುದಾರರು ಪಾವತಿಸಬೇಕಾಗುತ್ತದೆ. ಆದರೆ, ವಾಸದ ಮನೆಯನ್ನು ವಾಣಿಜ್ಯ ಉದ್ದೇಶಕ್ಕಾಗಿ ಬಳಸಿಕೊಂಡಿ ರುವುದರಿಂದ ಪುರಸಭೆಗೆ ತೆರಿಗೆ ಸಂಗ್ರಹದಲ್ಲಿ ನಷ್ಟವಾಗುತ್ತಿದೆ. ಕಚೇರಿ ಸೇರಿದಂತೆ ವಾಣಿಜ್ಯ ಉದ್ದೇಶಕ್ಕಾಗಿ ಕಟ್ಟಡಗಳನ್ನು ಹೆಚ್ಚಿನ ಬಾಡಿಗೆಗೆ ನೀಡುವುವರು ಹೆಚ್ಚಿನ ದರ ನಿಗದಿಮಾಡಿರುತ್ತಾರೆ. ಬಾಡಿಗೆಯ ಹೊರೆಯನ್ನು ತಪ್ಪಿಸಿಕೊಳ್ಳಲು, ವಾಸದ ಮನೆಗಳನ್ನು ಬಾಡಿಗೆಗೆ ಅಥವಾ ಬೋಗ್ಯಕ್ಕೆ ಪಡೆದು ಕಚೇರಿ ನಡೆಸುತ್ತಿರುವ ಮೈಕ್ರೋ ಫೈನಾನ್ಸ್ ಅವರು ಬಾಡಿಗೆ ಮೊತ್ತವನ್ನು ಉಳಿಸುವುದರೊಂದಿಗೆ ಪುರಸಭೆಗೆ ತೆರಿಗೆಯಿಂದಲೂ ವಂಚಿಸುತ್ತಿವೆ.

ಇನ್ನೂ, ಹೌಸಿಂಗ್ ಬೋರ್ಡ್ ಕಾಲೋನಿ ನಿವಾಸಿ -ಚಂದ್ರಶೇಖರ್ ಮಾತನಾಡಿ, ಕೆಲ ಸಿಬ್ಬಂದಿಗಳು ರಜೆ ದಿನಗಳಲ್ಲಿ ತಮ್ಮ ಊರುಗಳಿಗೆ ತೆರಳುವುದಿಲ್ಲ. ಮಧ್ಯರಾತ್ರಿವರೆಗೂ ಫೋನ್ ನಲ್ಲಿ ಮಾತನಾಡುತ್ತಾರೆ. ಮದ್ಯಪಾನ ಸೇವಿಸಿ ಅಸಭ್ಯವಾಗಿ ವರ್ತಿಸುತ್ತಾರೆ. ಸಾಲ ವಸೂಲಿ ಮಾಡಲು ಗ್ರಾಹಕರ ಜೊತೆ ಏರುಧ್ವನಿಯಲ್ಲಿ ಮಾತನಾಡುತ್ತಾರೆ ಇದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ. ಟಿವಿ ಸೌಂಡ್ ಹೆಚ್ಚಾಗಿ ನೀಡುತ್ತಾರೆ. ದ್ವಿ-ಚಕ್ರ ವಾಹನಗಳನ್ನು ಅಡ್ಡಾದಿಡ್ಡಿ ನಿಲ್ಲಿಸುತ್ತಾರೆ ಇದರಿಂದ ಅಕ್ಕ-ಪಕ್ಕದ ಮನೆಯವರಾದ ನಮಗೆ ಸಾಕಷ್ಟು ತೊಂದರೆಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
– ಶಿವಕುಮಾರ ಕೋಟೆ