ಎಚ್.ಡಿ.ಕೋಟೆ: ತಾಲೂಕಿನ ತುಂಬಸೋಗೆ ಗ್ರಾಮ ಸಮೀಪದ, ನಿಲುವಾಗಿಲು, ಶಿರಮಳ್ಳಿ ಗ್ರಾಮದ ಸರ್ವೆ ನಂಬರ್ 24, 25, 26, 32, 36, 38 ಸೇರಿದಂತೆ ನೂರಾರು ಜಮೀನುಗಳಿಗೆ ಇದ್ದ ರಸ್ತೆಯನ್ನು ಸರ್ವೆ ನಂಬರ್ 41ರ ಬಾಜುದಾರ ಒತ್ತುವರಿ ಮಾಡಿಕೊಂಡು ಹಿಂಬದಿಯ ನೂರಾರು ಎಕರೆ ಜಮೀನುಗಳ ರೈತರ ಕೃಷಿ ಚಟುವಟಿಕೆಗೆ ಅಡಚಣೆ ಯಾಗುತ್ತಿತ್ತು. ರಸ್ತೆ ಬಿಡಿಸಲು ಬಂದ ಸರ್ವೆ ಅಧಿಕಾರಿಗಳು ನಿರ್ದಿಷ್ಟ ಜಾಗ ತೆರವುಗೊಳಿಸದೆ 20 ಅಡಿ ರಸ್ತೆ ಬಿಡಿಸಿರುವ ಕ್ರಮಕ್ಕೆ ರೈತರು ಹಲವು ಅನುಮಾನ ಗಳೊಂದಿಗೆ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.
ಸರ್ವೆ. ನಂಬರ್ 41ರ ಮುಂಭಾಗ ಹಾಗೂ ಹಿಂಭಾಗದಲ್ಲಿ 33 ಅಡಿಗಳ ರಸ್ತೆಯಿತ್ತು. ಇದನ್ನು ಸರ್ವೆ ನಂಬರ್ 41ರ ಬಾಜುದಾರ ಆಕ್ರಮಿಸಿಕೊಂಡಿದ್ದರಿಂದ, ಕೃಷಿ ಉಪಕರಣಗಳನ್ನು ಸಾಗಿಸಲು ಹಾಗೂ ಬೆಳೆಗಳನ್ನು ಮಾರುಕಟ್ಟೆಗೆ ಸಾಗಿಸಲಾಗದೆ ರೈತರು ಆರ್ಥಿಕ ನಷ್ಟ ಅನುಭವಿಸಿದ್ದರು. ಇದರಿಂದ ಈ ಭಾಗದ ರೈತರೆಲ್ಲರೂ ರಸ್ತೆ ಬಿಡಿಸಿಕೊಡುವಂತೆ ತಹಸೀಲ್ದಾರ್ ಅವರಿಗೆ ಕಳೆದ ವರ್ಷ ಮನವಿ ಮಾಡಿದ್ದಾರೆ.
ಮನವಿ ಮೇರೆಗೆ ಅಳತೆಗೆ ಬಂದ ಸರ್ವೆ ಅಧಿಕಾರಿಗಳು ಸ.ನಂಬರ್ 41 ರ ಮುಂಭಾಗ ಹಾಗೂ ಹಿಂಭಾಗದ ಜಮೀನುಗಳಲ್ಲಿ 33 ಅಡಿ ಅಳತೆಯ ರಸ್ತೆ ಇರುವುದನ್ನು ಖಚಿತಪಡಿಸಿಕೊಂಡಿದ್ದರು. ರಸ್ತೆ ಬಿಡಿಸುವ ಸಂಬಂಧ 41ರ ಸರ್ವೆ ನಂಬರ್ ರೈತನೊಂದಿಗೆ ರಾಜಿ ಸಂಧಾನ ಮಾಡಲು ಮುಂದಾದರಾದರು ಪ್ರಯೋಜನವಾಗದ ಕಾರಣ ರೈತರು ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದರು.
ಪೂರ್ವ ಮುಂಗಾರು ಪ್ರಾರಂಭವಾಗಿರುವುದರಿಂದ ಕೃಷಿ ಚಟುವಟಿಕೆಗಳು ಗರಿಗೆದರಲಿವೆ. ರಸ್ತೆಯಿಲ್ಲದೆ ನಮಗೆ ತೊಂದರೆಯಾಗುತ್ತಿದೆ ಈ ಬಗ್ಗೆ ತುರ್ತು ಕ್ರಮವಹಿಸುವಂತೆ ಮೂರ್ನಾಲ್ಕು ಗ್ರಾಮಗಳ ರೈತರು ತಹಸೀಲ್ದಾರ್ ಭೇಟಿ ರಸ್ತೆಯ ಅನಿವಾರ್ಯತೆ ಬಗ್ಗೆ ಮತ್ತೆ ಮನವರಿಕೆ ಮಾಡಿ ಕೊಟ್ಟಿದ್ದಾರೆ. ಇದರನ್ವಯ ನಿನ್ನೆ ರಸ್ತೆ ಬಿಡಿಸಲು ಬಂದ ಸರ್ವೆ ಅಧಿಕಾರಿಗಳು ನಿಯಮದಂತೆ ರಸ್ತೆ ಬಿಡಿಸದೆ ಕೇವಲ 20 ಅಡಿ ರಸ್ತೆ ಬಿಡಿಸಿದ್ದಾರೆ ಎಂದು ರೈತರು ಆರೋಪಿಸುತ್ತಿದ್ದಾರೆ.

ಸರ್ವೆ ಅಧಿಕಾರಿ ವಿರುದ್ಧ ಆಕ್ರೋಶ:-
ಈ ಹಿಂದೆ ಸ್ಥಳ ಮಹಜರಿಗೆ ಬಂದ ತಾಲೂಕು ಸರ್ವೆ ಅಧಿಕಾರಿಗಳು 33 ಅಡಿ ರಸ್ತೆಯಿದೆ ಎಂದು ತಿಳಿಸಿದ್ದಾರೆ. ಆದರೆ, ಸ.41ರ ಮಧ್ಯೆಭಾಗದಲ್ಲಿ ಹಾಗೆ ಬಿಟ್ಟಿದ್ದಾರೆ. ಈಗ ಬಿಡಿಸಿರುವ 20 ಅಡಿ ರಸ್ತೆಯ ಎರಡೂ ಬದಿಗಳಲ್ಲಿ ಚರಂಡಿ ನಿರ್ಮಿಸಿದರೆ ರಸ್ತೆ ಕಿರಿದಾಗಲಿದೆ. ರೈತರು ಏಕಕಾಲದಲ್ಲಿ ಬೆಳೆ ಬೆಳೆಯುವುದರಿಂದ ಮಾರುಕಟ್ಟೆಗೆ ಸಾಗಿಸುವ ವೇಳೆ, ಹಾಗೂ ಕೃಷಿ ಸಲಕರಣೆಗಳನ್ನು ಕೊಂಡಯ್ಯಲು ರಸ್ತೆಯ ಅಭಾವ ಸೃಷ್ಟಿಯಾಗಲಿದೆ. ಅಲ್ಲದೇ, ಈ ರಸ್ತೆ ಶಿರಮಳ್ಳಿ, ಬೀಚನಹಳ್ಳಿ ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಾಗಿದ್ದು, ಒಂದೆಡೆ ಹಿರಿದಾಗಿ, ಹೊಂದೆಡೆ ಕಿರಿದಾಗಿ ಇರಲು ಹೇಗೆ ಸಾಧ್ಯ ಎಂದು ರೈತರು ಪ್ರಶ್ನಿಸುತ್ತಿದ್ದಾರೆ. ಈ ಭಾಗದಲ್ಲಿ ಕಾಡುಪ್ರಾಣಿಗಳು ಹೆಚ್ಚಾಗಿವೆ. ಇವುಗಳನ್ನು ಸೆರೆಹಿಡಿಯಲು ಬರುವ ವಾಹನಗಳಿಗಾದರೂ ರಸ್ತೆ ಬೇಕಾಗಿದೆ. ಅಲ್ಲದೇ, ತುಂಬಸೋಗೆ, ನಿಲುವಾಗಿಲು, ಶಿರಮಳ್ಳಿ ಗ್ರಾಮದ ರೈತರು ಜಮೀನುಗಳಲ್ಲಿಯೇ ವಾಸ್ತವ್ಯ ಹೂಡಿರುವುದರಿಂದ ಅನಿವಾರ್ಯವಾಗಿ ವಾಹನಗಳನ್ನು ಅವಲಂಭಿಸಿದ್ದಾರೆ. ನಾವು ಬೆಳೆದ ಬೆಳೆಗಳನ್ನು ಮಾರುಕಟ್ಟೆಗೆ ಸಾಗಿಸಲು ಬರುವ ವಾಹನಗಳಿಗಾದರೂ ಅವಶ್ಯವಿರುವಷ್ಟು ರಸ್ತೆ ಬಿಡಿಸದಿರುವ ಸರ್ವೆ ಅಧಿಕಾರಿಯಿಂದ ನಮಗೆ ತೊಂದರೆಯಾಗುತ್ತಿದೆ. ಈ ಕೂಡಲೇ ತಹಸೀಲ್ದಾರ್ ಪರಿಶೀಲಿಸಿ ಸರ್ವೆ ಅಧಿಕಾರಿ ವಿರುದ್ಧ ಕ್ರಮವಹಿಸಬೇಕೆಂದು ರೈತರಾದ ನಾಗರಾಜು, ಸ್ವಾಮಿ, ಕಾಂತನಾಯಕ, ಅಂಕಪ್ಪ ಸೇರಿದಂತೆ ಇತರರು ಆಗ್ರಹಿಸಿದ್ದಾರೆ.
- ಶಿವಕುಮಾರ, ಕೋಟೆ