ಚಿಕ್ಕಮಗಳೂರು. ಗೃಹಜ್ಯೋತಿ ಯೋಜನೆಯಡಿ ಯಾವೊಬ್ಬ ಫಲಾನುಭವಿಗೂ ಅನ್ಯಾಯವಾದದಂತೆ ಪ್ರತಿ ಕುಟುಂಬಕ್ಕೂ ಸಮರ್ಪಕ ವಿದ್ಯುತ್ ಪೂರೈಕೆ ಆಗಬೇಕೆಂದು ಮೆಸ್ಕಾಂ ಅಧಿಕಾರಿಗಳಿಗೆ ಗ್ಯಾರಂಟಿ ಪ್ರಾಧಿಕಾರದ ತಾಲೂಕು ಅಧ್ಯಕ್ಷರಾದ ಮಲ್ಲೇಶ್ ಸ್ವಾಮಿ ಸೂಚಿಸಿದರು.
ನಗರದ ಮೆಸ್ಕಾಂ ಕಚೇರಿಯ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಮೆಸ್ಕಾಂ ಜನಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು ಈ ಯೋಜನೆಯು ಪ್ರತಿಯೊಬ್ಬ ಮಧ್ಯಮ ವರ್ಗದ ಹಾಗೂ ಕೆಳವರ್ಗದ ಜನರ ಸಂಜೀವಿನಿಯಾಗಿದ್ದು ಈ ಯೋಜನೆಯನ್ನು ನಮ್ಮ ರಾಜ್ಯ ಕಾಂಗ್ರೆಸ್ ಸರ್ಕಾರವು ಬಹಳ ಸದುದ್ದೇಶದಿಂದ ಸಾರ್ವಜನಿಕರ ಬಳಕೆಗೆ ರೂಪಿಸಲಾಗಿದೆ ಈ ಯೋಜನೆಯನ್ನು ಮೆಸ್ಕಾಂ ಅಧಿಕಾರಿಗಳು ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಸಮರ್ಪಕವಾಗಿ ನೀಡಬೇಕು ಎಂದು ಸಲಹೆ ನೀಡಿದರು.
ಗೃಹಜ್ಯೋತಿ ಯೋಜನೆಯಲ್ಲಿ ಈವರೆಗೂ ನಮ್ಮ ತಾಲೂಕು ಉತ್ತಮ ಪ್ರಗತಿಯನ್ನು ಕಂಡಿದ್ದು ಮುಂದಿನ ದಿನಗಳಲ್ಲಿಯೂ ಸಹ ಈ ಯೋಜನೆ ವ್ಯಾಪ್ತಿಗೆ ಒಳಪಡದ ಫಲಾನುಭವಿಗಳನ್ನು ಈ ಯೋಜನೆಗೆ ಸೇರಿಸುವ ಕೆಲಸವನ್ನು ಮಾಡಲಾಗುವುದು ಮತ್ತು ಈ ಯೋಜನೆಯನ್ನು ತಾಲೂಕಿನ ಪ್ರತಿಯೊಂದು ಕುಟುಂಬವು ಸಮರ್ಪಕವಾಗಿ ಪಡೆಯುವಂತೆ ಕಾಳಜಿ ವಹಿಸಲಾಗುವುದು ಎಂದರು.
ಅಲ್ಲದೆ ತಾಲೂಕಿನ ಪ್ರತಿ ಗ್ರಾಮಕ್ಕೆ ವಿದ್ಯುತ್ ಪೂರೈಕೆ, ಬೀದಿ ದೀಪ ಅಳವಡಿಕೆ, ವಿದ್ಯುತ್ ಬಲ್ಬ್ ಅಳವಡಿಕೆ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿದ್ದು ಆದಷ್ಟು ಬೇಗ ಈ ಸಮಸ್ಯೆ ಬಗೆಹರಿಸಲಾಗುವುದು ಎಂಬ ಭರವಸೆ ನೀಡಿದರು.
ಜನ ಸಂಪರ್ಕ ಸಭೆಯಲ್ಲಿ ಸಾರ್ವಜನಿಕರು ಮಾತನಾಡಿ ತಮ್ಮ ತಮ್ಮ ಗ್ರಾಮಗಳಲ್ಲಿ ಅಂದರೆ ತಾಲೂಕಿನ ವ್ಯಾಪ್ತಿಗೆ ಸೇರುವ ಹಲವು ಗ್ರಾಮಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಾಸವಿದ್ದು ಕೂಡಲೇ ಅಧಿಕಾರಿಗಳು ಈ ಬಗ್ಗೆ ಗಮನವಹಿಸಿ ಸಮರ್ಪಕ ವಿದ್ಯುತ್ ಪೂರೈಕೆಯನ್ನು ಮಾಡಬೇಕು ಎಂದು ಆಗ್ರಹಿಸಿದರು.
ಇದಕ್ಕೆ ಪ್ರತಿಕ್ರಿಸಿದ ತಾಲೂಕು ಗ್ಯಾರೆಂಟಿ ಯೋಜನೆಯ ಪ್ರಾಧಿಕಾರದ ಉಪಾಧ್ಯಕ್ಷರಾದ ಉಪ್ಪಳ್ಳಿಯ ಅನ್ಸರ್ ಅಲಿಖಾನ್ ಅವರು ಸಮರ್ಪಕ ವಿದ್ಯುತ್ ಪೂರೈಕೆಗೆ ಅಧಿಕಾರಿಗಳಿಗೆ ಸೂಚಿಸಲಾಗಿದ್ದು ಮುಂದಿನ ದಿನಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ಯಾವುದೇ ಲೋಪವಾಗದಂತೆ ಕ್ರಮ ವಹಿಸಲಾಗುವುದು ಎಂದು ಸಭೆಯಲ್ಲಿ ನೆರೆದಿದ್ದ ಸಾರ್ವಜನಿಕರಿಗೆ ಭರವಸೆ ನೀಡಿದರು.
ಅಧೀಕ್ಷಕ ಎಂಜಿನಿಯರ್ ಮಂಜುನಾಥ್ ಅವರು ಮಾತನಾಡಿ ಈವರೆಗೂ ತಾಲೂಕಿನಲ್ಲಿ ಗೃಹ ಜ್ಯೋತಿ ಯೋಜನೆಯನ್ನು ಸಾರ್ವಜನಿಕರು ಬಹುತೇಕ ಸಮರ್ಪಕವಾಗಿ ಬಳಸುತ್ತಿದ್ದು ಫೆಬ್ರವರಿ 2925 ರ ಅಂತ್ಯದ ವೇಳೆಗೆ 33,09,928 ರೂಪಾಯಿಗಳು ಅಂದರೆ ಮೂರು ಕೋಟಿಗೂ ಹೆಚ್ಚು ಸಬ್ಸಿಡಿ ಹಣವನ್ನು ಗೃಹಜೋತಿ ಯೋಜನೆ ಮೂಲಕ ನಗರದ ಸಾರ್ವಜನಿಕರಿಗೆ ನೀಡಲಾಗಿದ್ದು ಈ ಹಣವನ್ನು ಮೆಸ್ಕಾಂ ಇಲಾಖೆಗೆ ಸರ್ಕಾರ ಬರಿಸುತ್ತದೆ ಹಾಗೂ ಮುಂದಿನ ದಿನಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ಯಾವುದೇ ವ್ಯತ್ಯಾಸವಾಗದಂತೆ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡುತ್ತೇವೆ ಎಂಬ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದಸದಸ್ಯರಾದ ಗೌಸ್ ಮಯುದ್ದೀನ ಬಾಬು, ಜಯಂತಿ ಜಿ ಶಿವಾಜಿ, ಪುನೀತ್ ಕೆಂಪನಹಳ್ಳಿ, ಕೃಷ್ಣಪ್ಪ ಹಾಗೂ ಮೆಸ್ಕಾಂ ಇಲಾಖೆ ಅಧಿಕಾರಿಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.