ತುಮಕೂರು: ತಾಲ್ಲೂಕು ಕೋರ ಗ್ರಾಮಪಂಚಾಯ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರಭಾರ ಪಿಡಿಓ ಹಾಗೂ ಕಾರ್ಯದರ್ಶಿ ತಿಪ್ಪೇಸ್ವಾಮಿ ಕಾರ್ಯವೈಖರಿ ಹಾಗೂ ಅವ್ಯವಹಾರದ ವಿರುದ್ಧ ಸಾರ್ವಜನಿಕ ವಲಯದಲ್ಲಿ ತೀವ್ರ ಅಪಸ್ವರ ಕೇಳಿ ಬರುತ್ತಿರುವ ಜೊತೆಗೆ ಇವರನ್ನು ಪಂಚಾಯ್ತಿಯಿಂದ ಎತ್ತಂಗಡಿ ಮಾಡುವಂತೆ ಗ್ರಾಮಪಂಚಾಯ್ತಿ ಸದಸ್ಯರು ಆಗ್ರಹಿಸಿದ್ದಾರೆ.
ಕೋರ ಗ್ರಾಮಪಂಚಾಯ್ತಿಯಲ್ಲಿ ಕಾರ್ಯದರ್ಶಿಯಾಗಿರುವ ತಿಪ್ಪೇಸ್ವಾಮಿ ಪ್ರಭಾರ ಪಿಡಿಓ ಆಗಿ ಸೇವೆ ಸಲ್ಲಿಸುತ್ತಿದ್ದು ಇವರ ಭ್ರಷ್ಟಾಚಾರ ಹಾಗೂ ಅವ್ಯವಹಾರದ ಬಗ್ಗೆ ಗ್ರಾಮಪಂಚಾಯ್ತಿ ಸದಸ್ಯರೇ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಪ್ರಭಾರ ಪಿಡಿಓ ಆಗಿ ಅಧಿಕಾರ ವಹಿಸಿಕೊಂಡ ಬಳಿಕ ಇ- ಸ್ವತ್ತು ಮಾಡಿಕೊಡಲು ನಿಯಮಾವಳಿ ಪಾಲಿಸುತ್ತಿಲ್ಲ,ಬೇಕಾದವರಿಗೆ ಬೇಕಾದಂತೆ ತಿದ್ದಪಡಿ ಮಾಡಿ ಇ- ಸ್ವತ್ತು ಮಾಡಿಕೊಡುವುದಲ್ಲದೆ ಒಂದು ಇ -ಸ್ವತ್ತಿಗೆ ಮನಸೋ ಇಚ್ಚೆ ಲಂಚಕ್ಕೆ ಒತ್ತಾಯಿಸುತ್ತಿದ್ದಾರೆ, ದಾಖಲೆಯಲ್ಲಿ ಇಲ್ಲದ ಚೆಕ್ಕುಬಂದಿ ಇವರೇ ಸೃಷ್ಟಿಸಿ ಅವ್ಯವಹಾರ ಮಾಡುತ್ತಿದ್ದಾರೆ,ತಾಲ್ಲೂಕು ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ವಜಾ ಮಾಡಿರುವ ಇ-ಸ್ವತ್ತುಗಳನ್ನು ಈ ವ್ಯಕ್ತಿ ಮನಸೋ ಇಚ್ಚೆ ತಿದ್ದುಪಡಿ ಮಾಡಿ ಇ-ಸ್ವತ್ತು ಸೃಷ್ಟಿಸುತ್ತಿದ್ದು ಸಾರ್ವಜನಿಕರಿಗೆ ತೀವ್ರ ಕಿರುಕುಳ ನೀಡುತ್ತಿದ್ದಾರೆ ಎಂಬ ಗಂಭೀರ ಆರೋಪಗಳೂ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ.
ತಿಪ್ಪೇಸ್ವಾಮಿ ಮಾಡುತ್ತಿರುವ ಅವ್ಯವಹಾರ ಹಾಗೂ ಭ್ರಷ್ಟಾಚಾರದ ಬಗ್ಗೆ ಈಗಾಗಲೇ ಕೆಲ ಗ್ರಾಮಪಂಚಾಯ್ತಿ ಸದಸ್ಯರು ತಾಲ್ಲೂಕು ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ದೂರು ನೀಡಿ ಕ್ರಮಕ್ಕೆ ಒತ್ತಾಯಿಸಿದ್ದಾರೆ, ಇವರ ಅವಧಿಯಲ್ಲಿ ನೀಡಿರುವ ಇ-ಸ್ವತ್ತುಗಳಲ್ಲಿ ಸಾಕಷ್ಟು ಅವ್ಯವಹಾರ ನಡೆದಿದ್ದು ಈ ಬಗ್ಗೆ ಇಲಾಖಾ ವಿಚಾರಣೆ ನಡೆಸಿ ಶಿಸ್ತು ಕ್ರಮ ಕೈಗೊಳ್ಳುವ ಜೊತೆಗೆ ಸಾರ್ವಜನಿಕರ ಹಿತದೃಷ್ಟಿಯಿಂದ ತಕ್ಷಣವೇ ಇವರನ್ನು ಇಲ್ಲಿಂದ ವರ್ಗಾಯಿಸಬೇಕೆಂದು ಪ್ರಜ್ಙಾವಂತ ನಾಗರೀಕರು ಒತ್ತಾಯಿಸಿದ್ದಾರೆ.
-ಕೆ.ಬಿ.ಚಂದ್ರಚೂಡ