ಮಂಡ್ಯ.- ಪ್ರವಾಸೋದ್ಯಮದ ವ್ಯಾಪ್ತಿಗೆ ಬರುವ ಹೊಂ ಸ್ಟೇಗಳಲ್ಲಿ ಸುರಕ್ಷತಾ ಮತ್ತು ರಕ್ಷಣೆಯ ಕ್ರಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕೆಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಕುಮಾರ ಸೂಚಿಸಿದರು.
ಇಂದು (ಏ.17) ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿ ಹಿತದೃಷ್ಟಿಯಿಂದ ಜಿಲ್ಲೆಯಲ್ಲಿ ಹೊಸದಾಗಿ ಅರ್ಜಿ ಸಲ್ಲಿಸಿರುವ 4 ಹೊಸ ಹೊಂ ಸ್ಟೇ ಗಳಿಗೆ ಪರವಾನಿಗೆ ನೀಡುವ ಮೊದಲು ಹೊಂ ಸ್ಟೇ ಮಾಲೀಕರು ಗ್ರಾಮ ಪಂಚಾಯಿತಿಯಿಂದ ಪರವಾನಿಗೆ ಪಡೆದು ಹೊಂ ಸ್ಟೇ ನಡೆಸುತ್ತಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಿ ಎಂದು ಹೇಳಿದರು.
ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊಂ ಸ್ಟೇಗಳು ಸರ್ಕಾರದ ನಿಯಮಗಳು ಪಾಲಿಸಬೇಕು, ಗುಣಮಟ್ಟದ ಆರೋಗ್ಯ, ನೈರ್ಮಲ್ಯ ಮತ್ತು ಅಗ್ನಿ ಸುರಕ್ಷತೆ ಒಳಗೊಂಡಂತೆ ಸುರಕ್ಷತಾ ಕ್ರಮಗಳನ್ನು ತಪ್ಪದೇ ಪಾಲಿಸಲಾಗುತ್ತಿದೆಯೇ ಎಂದು ಪರೀಕ್ಷಿಸಬೇಕು ಎಂದು ಹೇಳಿದರು
ಹೊಸದಾಗಿ ಪರವಾನಿಗೆ ನೀಡುವ ಸಂದರ್ಭದಲ್ಲಿ ಪರೀಶೀಲನೆಗೆ ಸಂಬಂಧ ಪಟ್ಟ ತಾಲ್ಲೂಕಿನ ಕಾರ್ಯನಿರ್ವಾಹಕ ಅಧಿಕಾರಿ, ಅಗ್ನಿಶಾಮಕ ದಳದ ಉಪನಿರ್ದೇಶಕರು, ತಾಲ್ಲೂಕು ಆರೋಗ್ಯಾಧಿಕಾರಿ, ಸ್ಥಳೀಯ ಆರಕ್ಷಕ ನಿರೀಕ್ಷಕರು ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕರನ್ನು ಒಳಗೊಂಡ ಒಂದು ವಿಶೇಷ ತಂಡ ರಚಿಸಿಕೊಂಡು ಪರೀಶೀಲನೆ ನಡೆಸಬೇಕು ಎಂದರು.

ಜಲಸಾಹಸ ಕ್ರೀಡೆ
ಮುಖ್ಯಮಂತ್ರಿಗಳು 2024-25 ನೇ ಸಾಲಿನ ಆಯವ್ಯಯ ಭಾಷಣದಲ್ಲಿ ತಿಳಿಸಿದಂತೆ, ರಾಜ್ಯದ ಜಾಲಾಶಯಗಳ ಹಿನ್ನೀರಿನಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಜಲ ಕ್ರೀಡೆ ಮತ್ತು ಜಲಸಾಹಸ ಕ್ರೀಡೆಗಳನ್ನು ಯೋಜಿಸಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲಾಗುವುದು ಎಂದು ಘೋಷಿಸಿರುವ ಹಿನ್ನೆಲೆ ಜಿಲ್ಲೆಯಲ್ಲಿ 5 ಜಲಾ ಕ್ರೀಡೆಗೆ ಅನುಕೂಲಕರ ಜಾಗಗಳನ್ನು ಈಗಾಗಲೇ ಗುರುತಿಸಲಾಗಿದೆ ಎಂದರು.
ನುರಿತ ತಜ್ಞರ ತಂಡವನ್ನು ರಚಿಸಿ ಜಲ ಸಾಹಸ ಮತ್ತು ಜಲ ಕ್ರೀಡೆಗಳಿಗೆ ಗುರುತಿಸಲಾಗಿರುವ ಜಾಗಗಳು ಸೂಕ್ತವಾಗಿ ಇದೆಯೇ ಮತ್ತು ಎಲ್ಲಾ ರೀತಿಯಿಂದ ಸುರಕ್ಷಿತವಾದ ಕ್ರಮಗಳನ್ನು ಕೈಗೊಳ್ಳಲು ಯೋಗ್ಯವಾದ ಸ್ಥಳವಾಗಿದೆಯೇ ಎಂದು ಪರೀಶೀಲನೆ ನಡೆಸಿ ಇ- ಟೆಂಡರ್ ಕರೆಯಲಾಗುವುದು ಎಂದು ತಿಳಿಸಿದರು.
ಯಾತ್ರಿನಿವಾಸಿ ಕಟ್ಟಡ ನಿರ್ವಹಣೆ
ಜಿಲ್ಲೆಯ ನಾಗಮಂಗಲ ತಾಲೂಕಿನ ಮುಳುಕಟ್ಟೆ ಹಾಗೂ ಪಾಂಡವಪುರ ತಾಲೂಕಿನ ಮೇಲುಕೋಟೆಯಲ್ಲಿ ನಿರ್ಮಿಸಿರುವ ಯಾತ್ರಿನಿವಾಸ ಕಟ್ಟಡಗಳನ್ನು ಸೂಕ್ತವಾಗಿ ನಿರ್ವಹಣೆ ಮಾಡಲು ಇ- ಟೆಂಡರ್ ಕರೆದು, ಯಾತ್ರಿಕರು ತಂಗಲು ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ತಿಳಿಸಿದರು.
ಪ್ರವಾಸೋದ್ಯಮ ಇಲಾಖೆಯ ಪಟ್ಟಿಗೆ ಜಿಲ್ಲೆಯ ನೂತನ ಪ್ರವಾಸಿ ತಾಣಗಳು
ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ರಾಘವೇಂದ್ರ ಅವರು ಮಾತನಾಡಿ ಸರ್ಕಾರದ ಆದೇಶದಂತೆ ಪ್ರವಾಸೋದ್ಯಮದ ಅಭಿವೃದ್ಧಿ ದೃಷ್ಟಿಯಿಂದ ಜಿಲ್ಲೆಯಲ್ಲಿ ನೂತನ ಪ್ರವಾಸಿ ತಾಣಗಳನ್ನು ಗುರುತಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ, ಗುರುತಿಸಿರುವ ಎಲ್ಲಾ ತಾಣಗಳು ತನ್ನದೇ ಆದ ವಿಶೇಷ, ವಿಶಿಷ್ಟತೆ, ಮಹತ್ವವನ್ನು ಮತ್ತು ಪ್ರವಾಸಿಗರನ್ನು ಆಕರ್ಷಿಸುವ ಸಾಮರ್ಥ್ಯ ಹೊಂದಿದೆ ಎಂದರು.
ಮಂಡ್ಯ- 12, ಮಳವಳ್ಳಿ- 11, ಮದ್ದೂರು- 18, ಶ್ರೀರಂಗಪಟ್ಟಣ – 24, ಪಾಂಡವಪುರ -13, ನಾಗಮಂಗಲ -10, ಕೆ ಆರ್ ಪೇಟೆ -18 ಸೇರಿದಂತೆ ಒಟ್ಟು -106 ನೂತನ ಪ್ರವಾಸಿ ತಾಣಗಳನ್ನು ಗುರುತಿಸಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ ಆರ್ ನಂದಿನಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ಕೃಷ್ಣ ಕುಮಾರ್, ಜಿಲ್ಲಾ ಕುಟುಂಬ ಮತ್ತು ಆರೋಗ್ಯ ಕಲ್ಯಾಣಾಧಿಕಾರಿ ಡಾ.ಕೆ. ಮೋಹನ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ. ನಂದೀಶ್, ನಿರ್ಮಿತಿ ಕೇಂದ್ರದ ಜಯ ಪ್ರಕಾಶ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.