
ಕೆ.ಆರ್.ಪೇಟೆ-ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುವ ದುಷ್ಟ ಶಕ್ತಿಗಳನ್ನು ಬಗ್ಗು ಬಡಿಯುವ ಜೊತೆಗೆ ಹಿಂದೂ ಧರ್ಮವನ್ನು ಉಳಿಸಿ ಬೆಳೆಸುವತ್ತ ಸಮಾಜ ಸದಾ ಜಾಗೃತರಾಗಿರಬೇಕು ಎಂದು ಮೈಸೂರು-ಕೊಡಗು ಲೋಕಸಭಾ ಸದಸ್ಯರು ಹಾಗೂ ಮೈಸೂರು ಮಹಾರಾಜರ ವಂಶಸ್ಥ ಮಹಾರಾಜ ಶ್ರೀ ಯಧುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಕರೆನೀಡಿದರು.
ಅವರು ಕೆ.ಆರ್.ಪೇಟೆ ಗ್ರಾಮ ದೇವತೆ ಶ್ರೀದೊಡ್ಡಕೇರಮ್ಮ ದೇವಿಯ ನೂತನ ದೇವಾಲಯದ ಉದ್ಘಾಟನೆ, ದೇವಾಲಯದ ಗೋಪುರದ ಕಳಸ ಪ್ರತಿಷ್ಠಾಪನೆ ಹಾಗೂ ಶ್ರೀ ದೊಡ್ಡಕೇರಮ್ಮ ದೇವಿಯ ನೂತನ ರಥದ ಲೋಕಾರ್ಪಣೆ ಮಾಡಿ ನಂತರ ಮಾರಿಗುಡಿ ಸರ್ಕಲ್‌ನಲ್ಲಿ ಹಮ್ಮಿಕೊಂಡಿದ್ದ ಸಾರ್ವಜನಿಕ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ನಮ್ಮ ಸಂಸ್ಕೃತಿ ಹಾಗೂ ಪರಂಪರೆಯ ಪ್ರತಿಬಿಂಬವಾಗಿರುವ ದೇವಾಲಯಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ನಮ್ಮ ಪೂರ್ವಿಕರಿಂದ ಕೊಡುಗೆಯಾಗಿ ಬಂದಿರುವ ಗುಡಿ-ಗೋಪುರಗಳು, ಜಾತ್ರೆ-ರಥೋತ್ಸವ, ಆಚಾರ-ವಿಚಾರಗಳನ್ನು ಉಳಿಸಲು ಪ್ರತಿಯೊಬ್ಬರೂ ಕೈಜೋಡಿಸಬೇಕು.
ಮಾನವರಾದ ನಾವು ದೇವರು ಮತ್ತು ಧರ್ಮದ ಮಾರ್ಗದಲ್ಲಿ ಸಾಗುವುದರಿಂದ ಮನಸ್ಸಿಗೆ ಶಾಂತಿ ಮತ್ತು ನೆಮ್ಮದಿಯು ದೊರೆಯುವ ಜೊತೆಗೆ ಕೈಹಿಡಿದ ಕೆಲಸ ಕಾರ್ಯಗಳಲ್ಲಿ ಯಶಸ್ಸು ಕೂಡ ಲಭಿಸುತ್ತದೆ. ಮನುಷ್ಯನಿಗೆ ಬೇಕಾದ ಶಾಂತಿ-ನೆಮ್ಮದಿಯನ್ನು ಯಾವುದೇ ಮಾರುಕಟ್ಟೆಯಲ್ಲಿ ಕೊಂಡುಕೊಳ್ಳಲು ಸಾಧ್ಯವಿಲ್ಲ. ಕೇವಲ ದೇವರು ಮತ್ತು ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಬಡವರಿಗೆ ಧಾನ-ಧರ್ಮದ ಕಾರ್ಯಗಳನ್ನು ಮಾಡುವುದರಿಂದ ಶಾಂತಿ-ನೆಮ್ಮದಿಯನ್ನು ಪಡೆದುಕೊಳ್ಳಲು ಸಾಧ್ಯ. ಹಾಗಾಗಿ ನಮ್ಮ ಸಂಸ್ಕೃತಿ-ಪರoಪರೆಯ ಪ್ರತಿಬಿಂಬವಾಗಿರುವ ದೇವಾಲಯಗಳನ್ನು ಸಂರಕ್ಷಣೆ ಮಾಡಬೇಕು. ಜಾತ್ರೆ-ಉತ್ಸವಗಳನ್ನು ಕಾಪಾಡಿಕೊಂಡು ಹೋಗಬೇಕು ಎಂದರು.

ಸಾವಿರಾರು ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಗ್ರಾಮದೇವತೆಯ ಹಬ್ಬ- ಹರಿದಿನಗಳನ್ನು ನಿಲ್ಲಿಸಬಾರದು. ಹಬ್ಬಗಳು, ಜಾತ್ರೆ ಉತ್ಸವಗಳು ನಮ್ಮಲ್ಲಿ ಸೋದರ ಭಾವನೆಯನ್ನು ಬೆಳೆಸುತ್ತವೆ. ಉತ್ತಮ ಭಾಂದವ್ಯವನ್ನು ವೃದ್ದಿಸುತ್ತವೆ ಹಾಗಾಗಿ ಹಬ್ಬಗಳನ್ನು ಜಾತ್ರೆ ಉತ್ಸವಗಳನ್ನು, ದೇವಾಲಯಗಳನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಮೂಲಕ ನಮ್ಮ ಸಂಸ್ಕೃತಿಯನ್ನು ಗಟ್ಟಿಗೊಳಿಸಬೇಕು ಎಂದು ಯದುವೀರ್ ಮನವಿ ಮಾಡಿದರು.
ಮಾಜಿ ಸಚಿವ ಡಾ.ನಾರಾಯಣ ಗೌಡ ಮಾತನಾಡಿ ಮೈಸೂರು ಸಂಸ್ಥಾನದಿoದ ಹಾಗೂ ರಾಜ ಮನೆತನದಿಂದ ಕೆ.ಆರ್.ಪೇಟೆ ಪಟ್ಟಣಕ್ಕೆ ಅಪಾರವಾದ ಕೊಡುಗೆ ದೊರೆತಿದೆ. ಇಂದು ನಮ್ಮೂರಿನ ಗ್ರಾಮದೇವತೆ ದೇವಾಲಯದ ಉದ್ಘಾಟನೆಗೆ ಸ್ವತಃ ಮಹಾರಾಜರೇ ಬಂದಿರುವುದರಿoದ ನಮ್ಮೂರಿನ ಭಾಗ್ಯದ ಬಾಗಿಲು ತೆರೆದಂತಾಗಿದೆ,ಗ್ರಾಮಸ್ಥರಿಗೆ ಅಪಾರ ಸಂತೋಷವಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ದಾನಿಗಳು ಹಾಗೂ ಗಣ್ಯರನ್ನು ಸಂಸದರಾದ ಮಹಾರಾಜ ಯಧುವೀರ್ ಸನ್ಮಾನಿಸಿ ಗೌರವಿಸಿದರು.
ಕೆ.ಆರ್.ಪೇಟೆ ಗ್ರಾಮದ ಯಜಮಾನರಾದ ಹೆಗ್ಗಡಿ ಕೆ. ಎನ್.ಕೃಷ್ಣ, ಪಟೇಲ್ ಚಂದ್ರಣ್ಣ, ಉಧ್ಯಮಿ ಹೆಚ್.ಎಂ.ಚoದ್ರಶೇಖರ್, ಮಾಜಿ ಶಾಸಕ ಕೆ.ಬಿ.ಶೇಖರ್ ಹಾಗೂ ಮಾಜಿ ಸಚಿವ ಡಾ.ನಾರಾಯಣಗೌಡ ಅವರನ್ನು ದೊಡ್ಡಕೇರಮ್ಮ ದೇವಾಲಯ ಸಮಿತಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಕೆ.ಬಿ. ಚಂದ್ರಶೇಖರ್, ಸಮಾಜ ಸೇವಕರು ಹಾಗೂ ಆರ್.ಟಿ.ಓ ಅಧಿಕಾರಿ ಮಲ್ಲಿಕಾರ್ಜುನ್, ಮೂಡ ಮಾಜಿ ಅಧ್ಯಕ್ಷ ಕೆ.ಶ್ರೀನಿವಾಸ್, ಕೆ.ಟಿ.ಗಂಗಾಧರ್, ಮನ್‌ಮುಲ್ ಮಾಜಿ ನಿರ್ದೇಶಕ ಕೆ.ಜಿ.ತಮ್ಮಣ್ಣ, ಜಿ.ಪಂ.ಮಾಜಿ ಉಪಾಧ್ಯಕ್ಷ ಎಸ್.ಅಂಬರೀಶ್, ಪುರಸಭೆ ಅಧ್ಯಕ್ಷೆ ಪಂಕಜಾಪ್ರಕಾಶ್, ಉಪಾಧ್ಯಕ್ಷೆ ಸೌಭಾಗ್ಯಉಮೇಶ್, ಪುರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ರವೀಂದ್ರಬಾಬು, ಕಸಬಾ ಸೊಸೈಟಿ ಅಧ್ಯಕ್ಷ ಪುರುಷೋತ್ತಮ್, ಪುರಸಭೆಯ ಸದಸ್ಯರಾದ ಡಿ.ಪ್ರೇಮಕುಮಾರ್, ಪ್ರಮೋದ್‌ಕುಮಾರ್, ಕೆ.ಸಿ.ಮಂಜುನಾಥ್, ನಟರಾಜ್, ಹೆಚ್.ಎನ್.ಪ್ರವೀಣ್, ಇಂದ್ರಾಣಿವಿಶ್ವನಾಥ್, ಸುಗುಣ ರಮೇಶ್, ಮಹಾದೇವಿ ನಂಜುoಡ, ಕೆ.ಎಸ್.ರಾಮೇಗೌಡ, ಕೆ.ಎಸ್.ಹರಪ್ರಸಾದ್, ಕೆ.ಆರ್.ಹೇಮಂತಕುಮಾರ್, ಸೇರಿದಂತೆ ಸಾವಿರಾರು ಮಂದಿ ಭಕ್ತಾಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವೇದಬ್ರಹ್ಮ ಶ್ರೀ ಗೋಪಾಲಕೃಷ್ಣ ಅವಧಾನಿಗಳು ಪೂಜಾ ವಿಧಿ ವಿಧಾನಗಳ ನೇತೃತ್ವ ವಹಿಸಿದ್ದರು.
—-ವರದಿ-ಶ್ರೀನಿವಾಸ್ ಆರ್