ಚಿಕ್ಕಮಗಳೂರು:ಸರ್ಕಾರದ ಯೋಜನೆಗಳನ್ನು ಅರ್ಹ ಫಲಾನುಭವಿ ಗಳಿಗೆ ತಲುಪಿಸಲು ಜನಸಂಪರ್ಕ ಸಭೆಗಳು ಸಹಕಾರಿ-ಹೆಚ್.ಡಿ. ತಮ್ಮಯ್ಯ

ಚಿಕ್ಕಮಗಳೂರು:ಜನಸಾಮಾನ್ಯರಿಗೆ ಸರ್ಕಾರದ ಜನಪರ ಯೋಜನೆಗಳ ಸೌಲಭ್ಯಗಳು ಸುಲಭವಾಗಿ ಸಿಗಬೇಕೆಂಬ ಉದ್ದೇಶದಿಂದ ಜನಸಂಪರ್ಕ ಸಭೆಗಳನ್ನು ಆಯೋಜಿಸಲಾಗುತ್ತಿದೆ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ಹೇಳಿದರು.

ಅವರು ಇಂದು ನಿಡಘಟ್ಟ ಗ್ರಾಮದಲ್ಲಿ ಜೋಡಿಹೋಚಿಹಳ್ಳಿ-ನಿಡಘಟ್ಟ ಗ್ರಾ.ಪಂ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಗುದ್ದಲಿ ಪೂಜೆ ಹಾಗೂ ಜನಸಂಪರ್ಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಜನಸಂಪರ್ಕ ಸಭೆಗಳ ಮೂಲಕ ಸರ್ಕಾರದ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಲು ಜಿಲ್ಲಾಡಳಿತ, ತಾಲ್ಲೂಕು ಆಡಳಿತ ಕೆಲಸ ಮಾಡುತ್ತಿದ್ದು, ಇದರ ಸದುಪಯೋಗವನ್ನು ಜನಸಾಮಾನ್ಯರು ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.

ತಾಲ್ಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಈ ಜನಸಂಪರ್ಕ ಸಭೆಯಲ್ಲಿ ಭಾಗವಹಿಸಿದ್ದು, ಗ್ರಾಮಸ್ಥರ ಸಮಸ್ಯೆಗಳ ಅರ್ಜಿಗಳನ್ನು ಗ್ರಾಮ ಪಂಚಾಯಿತಿ ಪಿಡಿಓಗಳು ಸ್ವೀಕಾರ ಮಾಡಿದ್ದು, ತಾ.ಪಂ, ತಾಲ್ಲೂಕು ಆಡಳಿತ, ಆರೋಗ್ಯ ಇಲಾಖೆ, ಕೆಎಸ್‌ಆರ್‌ಟಿಸಿ, ಮೆಸ್ಕಾಂ ಸೇರಿದಂತೆ ಇನ್ನೂ ಮುಂತಾದ ಇಲಾಖೆಗಳಿಗೆ ಸಂಬoಧಿಸಿದ ಅರ್ಜಿಗಳನ್ನು ಅಧಿಕಾರಿಗಳು ಸ್ಥಳದಲ್ಲೇ ಬಗೆಹರಿಸುತ್ತಾರೆಂದು ವಿವರಿಸಿದರು.

ಕಾನೂನು ತೊಡಕಾಗಿರುವ, ತಾಂತ್ರಿಕ ಸಮಸ್ಯೆಗಳಿರುವ ಅರ್ಜಿಗಳನ್ನು ಹೊರತುಪಡಿಸಿ ಉಳಿದ ಅರ್ಜಿಗಳನ್ನು ಇಲ್ಲೇ ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

ಕಳೆದ 23 ತಿಂಗಳ ಹಿಂದೆ ಅಸ್ತಿತ್ವಕ್ಕೆ ಬಂದ ರಾಜ್ಯಸರ್ಕಾರ ಜನಸಂಪರ್ಕ ಸಭೆಗಳನ್ನು ನಡೆಸುವ ಮೂಲಕ ಜನರ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಹೊರಡಿಸಿದ ಆದೇಶದಂತೆ ಈ ಅಪರೂಪದ ಜನಸಂಪರ್ಕ ಸಭೆ ನಡೆಸಲಾಗುತ್ತಿದೆ ಎಂದು ಹೇಳಿದರು.

ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜನಸಂಪರ್ಕ ಸಭೆಗಳನ್ನು ಉದ್ಘಾಟಿಸಿದ ಬಳಿಕ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಆಯಾ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಜನಸಂಪರ್ಕ ಸಭೆಗಳನ್ನು ನಡೆಸಲಾಯಿತು. ನಂತರ ಜಿಲ್ಲೆಯ ಎಲ್ಲಾ ಐದು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಶಾಸಕರ ನೇತೃತ್ವದಲ್ಲಿ ಹೋಬಳಿ ಮಟ್ಟದಲ್ಲೂ ಜನಸಂಪರ್ಕ ಸಭೆಗಳನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಕಡೂರು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್ ಪ್ರಾಸ್ತಾವಿಕವಾಗಿ ಮಾತನಾಡಿದರು.ಗ್ರಾ.ಪಂ ಪಿಡಿಓ ಸುಧಾ ಸ್ವಾಗತಿಸಿದರು.

ಈ ಸಂದರ್ಭದಲ್ಲಿ ನಿಡಘಟ್ಟ ಗ್ರಾ.ಪಂ ಅಧ್ಯಕ್ಷ ಶಂಕರ್‌ಮೂರ್ತಿ, ಉಪಾಧ್ಯಕ್ಷ ಗೀತಾ ತಿರುಮಲೇಗೌಡ, ಸದಸ್ಯರುಗಳಾದ ವಿಶ್ವನಾಥ್, ರಾಜಪ್ಪ, ರುದ್ರಮ್ಮ, ಗೀತಾಂಜಲಿ ಸುರೇಶ್, ಸವಿತಾ ಶಿವಪ್ಪ, ಶೈಲಜಾ ತಿಮ್ಮಯ್ಯ, ಸೋಮೇಶ್, ಜೋಡಿಹೋಚಿಹಳ್ಳಿ ಗ್ರಾ.ಪಂ ಅಧ್ಯಕ್ಷ ತ್ರಿಮೂರ್ತಿ ಬಿ.ಟಿ, ಉಪಾಧ್ಯಕ್ಷೆ ಸುಮಿತ್ರ ಬಾಯಿ, ಸದಸ್ಯರುಗಳಾದ ನಾಗೇಶ್ ಹೆಚ್.ಸಿ, ಯಶೋಧ ಟಿ.ಎಂ, ಸಣ್ಣಪ್ಪ, ರೇಖಾ ಹೆಚ್.ಎನ್, ಕುಮಾರಪ್ಪ.ಕೆ. ಪ್ರೇಮ, ಸಂತೋಷ್, ತಾಲ್ಲೂಕು ಗ್ಯಾರಂಟಿ ಸಮಿತಿ ಉಪಾಧ್ಯಕ್ಷೆ ಹೇಮಾವತಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

× How can I help you?