
ಕೆ.ಆರ್.ಪೇಟೆ:ಜಯ ಕರ್ನಾಟಕ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ದಿ: ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಅವರ ಮೇಲೆ ಗುಂಡಿನ ದಾಳಿ ನಡೆಸಿದ ಹಂತಕರನ್ನು ಶೀಘ್ರವೇ ಬಂಧಿಸಿ ಸೂಕ್ತ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ತಾಲ್ಲೂಕು ಜಯ ಕರ್ನಾಟಕ ಸಂಘಟನೆಯ ಅಧ್ಯಕ್ಷ ಹೊನ್ನೇನಹಳ್ಳಿ ಸೋಮಶೇಖರ್ ನೇತೃತ್ವದಲ್ಲಿ ತಹಶೀಲ್ದಾರ್ ಅಶೋಕ್ ಅವರಿಗೆ ಮನವಿ ಸಲ್ಲಿಸಲಾಯಿತು.
ಮನವಿ ಸಲ್ಲಿಸಿ ಮಾತನಾಡಿದ ಹೊನ್ನೇನಹಳ್ಳಿ ಸೋಮಶೇಖರ್, ಜಯ ಕರ್ನಾಟಕ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ದಿ: ಮುತ್ತಪ್ಪ ರೈ ಸುಪುತ್ರ ರಿಕ್ಕಿ ರೈ ಮೇಲೆ ಶುಕ್ರವಾರ ಮಧ್ಯರಾತ್ರಿ ರಾಮನಗರ ತಾಲೂಕಿನ ಬಿಡದಿಯ ಅವರ ಮನೆ ಬಳಿಯೇ ಫೈರಿಂಗ್ ಆಗಿ ಅವರು ಕೂದಳೆಲೆ ಅಂತರದಲ್ಲಿ ಪ್ರಾಣಾಪಾಯದಿಂದ ಬಚಾವ್ ಆಗಿದ್ದಾರೆ.
ಒಬ್ಬ ಅಪ್ಪಟ ಕನ್ನಡ ಅಭಿಮಾನಿಯ ಕುಟುಂಬದ ಸದಸ್ಯರಿಗೆ ಸೂಕ್ತ ಭದ್ರತೆ ಇಲ್ಲದೆ ಇರುವುದು ನಿಜಕ್ಕೂ ಬೇಸರದ ಸಂಗತಿ.ಭದ್ರಕೋಟೆಯಂತೆ ಇರುವ ಮನೆಯಿಂದ ಹೊರಬರುತ್ತಿದ್ದಂತೆ ಕಾರಿನ ಮೇಲೆ ದಾಳಿ ನಡೆದಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ.ದಾಳಿಯ ಹಿಂದೆ ಭೂಗತ ಲೋಕದ ಕೈವಾಡ ಇರುವ ಶಂಕೆ ಕೂಡ ವ್ಯಕ್ತವಾಗಿದೆ. ತಂದೆಯ ಮೇಲಿನ ದ್ವೇಷ,ಅಥವಾ ರಿಕ್ಕಿ ರೈ ರವರ ಮೇಲಿನ ವೈಯಕ್ತಿಕ ದ್ವೇಷಕ್ಕೆ ಫೈರಿಂಗ್ ನಡೆದಿರುವ ಸಾಧ್ಯತೆಗಳಿದ್ದು ಕೂಡಲೇ ಆರೋಪಿಗಳನ್ನು ಬಂದಿಸುವಂತೆ ಆಗ್ರಹಿಸಿ ತಹಶೀಲ್ದಾರ್ ಅಶೋಕ್ ರವರಿಗೆ ಮನವಿ ಸಲ್ಲಿಸಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಜಯ ಕರ್ನಾಟಕ ಸಂಘದ ತಾಲ್ಲೂಕು ಕಾರ್ಯಾಧ್ಯಕ್ಷ ಕೆರೆಕೋಡಿ ಆನಂದ್, ಉಪಾಧ್ಯಕ್ಷ ಯೋಗೇಶ್,ಯೂತ್ ಅಧ್ಯಕ್ಷ ಮಹೇಶ್. ಯುವರಾಜ,ನಗರ ಅಧ್ಯಕ್ಷ ಅಕ್ಷಯ್,ನಗರ ಘಟಕದ ಗೌರವಾಧ್ಯಕ್ಷ ಮೋಹನ್,ವಿದ್ಯಾರ್ಥಿ ಘಟಕದ ಅಧ್ಯಕ್ಷ ಶಿವು,ಸಂಘಟನೆ ಕಾರ್ಯದರ್ಶಿ ಶಂಕರ್,ಸುಂದ್ರೇಶ್,ಪ್ರಭು, ಹರೀಶ್,ಮಹಿಳಾ ಅಧ್ಯಕ್ಷ ಜಯಲಕ್ಷ್ಮಮ್ಮ ಮತ್ತಿತರರು ಉಪಸ್ಥಿತರಿದ್ದರು.
———ವರದಿ-ಶ್ರೀನಿವಾಸ್ ಆರ್