ತುಮಕೂರು:ಕರ್ನಾಟಕ ರಾಜ್ಯ ವಕೀಲ ಪರಿಷತ್ತಿನ ಮಾಜಿ ಅಧ್ಯಕ್ಷರೂ,ಹಿರಿಯ ವಕೀಲರೂ, ಅಖಿಲ ಭಾರತ ಬಾರ್ ಕೌನ್ಸಿಲ್ ಉಪಾಧ್ಯಕ್ಷರಾದ ಸದಾಶಿವರೆಡ್ಡಿ ಅವರ ಮೇಲೆ ನಡೆದಿರುವ ಹಲ್ಲೆಯನ್ನು ತೀವ್ರವಾಗಿ ಖಂಡಿಸಿ ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ನೀಡಿದ ಪ್ರತಿಭಟನೆ ಕರೆಗೆ ತುಮಕೂರು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಹೆಚ್.ಕೆಂಪರಾಜಯ್ಯನವರ ನೇತೃತ್ವದಲ್ಲಿ ಎಡ ತೋಳಿಗೆ ಕೆಂಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಲಾಯಿತು.

ನಂತರ ಸಂಘದ ಆವರಣದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಹಿರಿಯ,ಕಿರಿಯ,ಮಹಿಳಾ ವಕೀಲರುಗಳು ಮೌನ ಪ್ರತಿಭಟನೆ ಮೂಲಕ ತೆರಳಿ ಸದರಿ ಆರೋಪಿಗಳಿಗೆ ತಕ್ಕ ಶಿಕ್ಷೆ ಆಗಬೇಕೆಂದು ಸರ್ಕಾರಕ್ಕೆ ಶಿಫಾರಸ್ಸು ಮಾಡುವಂತೆ ಜಿಲ್ಲಾಧಿಕಾರಿಗಳ ಪರವಾಗಿ ತಹಸೀಲ್ದಾರ್ ಜಿ.ವಿ.ಮೋಹನ್ ಕುಮಾರ್ ರವರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು, ನಂತರ ಅಧ್ಯಕ್ಷರಾದ ಹೆಚ್.ಕೆಂಪರಾಜಯ್ಯನವರು ಮಾತನಾಡುತ್ತಾ ವಕೀಲರ ರಕ್ಷಣಾ ಕಾಯ್ದೆ ಜಾರಿಗೆ ಬಂದಿದ್ದರೂ ಕಕ್ಷಿದಾರರು ವಕೀಲರ ಮೇಲೆ ನಡೆಸಿದ ಹಲ್ಲೆಯನ್ನು ತುಮಕೂರು ಜಿಲ್ಲಾ ವಕೀಲರ ಸಂಘ ತೀವ್ರವಾಗಿ ಖಂಡಿಸುತ್ತದೆ.

ತಪ್ಪಿತಸ್ಥರ ಮೇಲೆ ಸರ್ಕಾರ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು,ಇನ್ನುಮುಂದೆ ಈ ರೀತಿಯ ಘಟನೆಗಳು ಮರುಕಳಿಸದಂತೆ ಪೋಲೀಸ್ ಇಲಾಖೆ ಕ್ರಮವಹಿಸಬೇಕು,ಕಕ್ಷಿದಾರರು ತಮಗೆ ಏನಾದರೂ ತೊಂದರೆ ಆದರೆ ವಕೀಲರೊಂದಿಗೆ ಕುಳಿತು ಚರ್ಚಿಸಿ ತಮ್ಮ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕೇ ವಿನಃ ವಕೀಲರ ಮೇಲೆ ಕೈ ಮಾಡಬಾರದು ಇದೊಂದು ದುರುದ್ದೇಶಪೂರಿತವಾದ ಹಲ್ಲೆಯಾಗಿದೆ ಎಂದು ತೀಕ್ಷ÷್ಣವಾಗಿ ಖಂಡಿಸಿದರು.

ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಆರ್.ತಿಪ್ಪೇಸ್ವಾಮಿ,ಖಜಾಂಚಿ ಭಾರತಿ, ನೂತನ ಕಮಿಟಿಯ ಉಪಾಧ್ಯಕ್ಷ ಎಂ.ಎಲ್.ರವಿಗೌಡ,ಪ್ರಧಾನ ಕಾರ್ಯದರ್ಶಿ ಮಹೇಶ್ ಹಿರೇಹಳ್ಳಿ,ಜಂಟಿ ಕಾರ್ಯದರ್ಶಿ ಟಿ.ಎಂ.ಧನಂಜಯ,ಖಜಾಂಚಿ ಸಿಂಧು.ಬಿ.ಎಂ. ಗೋವಿಂದರಾಜು.ಪಿ, ಡಿ.ಎ.ಜಗದೀಶ್, ಶ್ರೀನಿವಾಸಮೂರ್ತಿ.ಕೆ.ವಿ.ಶ್ರೀನಿವಾಸಮೂರ್ತಿ ವಿ.ಕೆ,ಸುರೇಶ್.ಎಸ್, ಪದ್ಮಶ್ರೀ.ಸಿ.ಆರ್. ಸೇವಾಪ್ರಿಯ.ಜೆ.ಎಸ್. ಜೆ.ಕೆ.ಅನಿಲ್,ಟಿ.ಎನ್.ಗುರುರಾಜ್,ಮಂಜುನಾಥ್,ಮಲ್ಲಿಕಾರ್ಜುನಯ್ಯ,ಸತೀಶ್ ಇತರರು ಹಾಜರಿದ್ದರು.
– ಕೆ.ಬಿ.ಚಂದ್ರಚೂಡ