ಕೊರಟಗೆರೆ:- ಬಹುವರ್ಷದ ಪಟ್ಟಣದ ಜನರ ಕನಸಾಗಿರುವ ಪಪಂಯನ್ನು ಪುರಸಭೆಯನ್ನಾಗಿ ಮಾಡುವ ಪ್ರಸ್ತಾವನೆ ಈಗ ರಾಜ್ಯ ಸರಕಾರದ ಕೈಸೇರಿದೆ. ಪ.ಪಂಯ 15 ವಾರ್ಡುಗಳ ಸಮಗ್ರ ಅಭಿವೃದ್ದಿಗೆ ಮತ್ತೇ 25 ಕೋಟಿ ಅನುಧಾನದ ಪ್ರಸ್ತಾವನೆಯ ರೂಪುರೇಷು ಸಿದ್ದವಿದೆ ಎಂದು ಪಪಂ ಸದಸ್ಯರಿಗೆ ಗೃಹಸಚಿವ ಡಾ.ಜಿ.ಪರಮೇಶ್ವರ ತಿಳಿಸಿದರು.
ಅವರು ಕೊರಟಗೆರೆ ಪಟ್ಟಣದ ಪಪಂ, ತೋಟಗಾರಿಕೆ ಮತ್ತು ಆರೋಗ್ಯ ಇಲಾಖೆಯಿಂದ ಸೋಮವಾರ ಏರ್ಪಡಿಸಲಾಗಿದ್ದ ಆರೋಗ್ಯ ಇಲಾಖೆಯ ನಮ್ಮಕ್ಲಿನಿಕ್, ತೋಟಗಾರಿಕೆ ಇಲಾಖೆ ಕಟ್ಟಡ, ಜೆಸಿಬಿ, ಆಟೋಟಿಪ್ಪರ್, ಡಸ್ಟ್ಬೀನ್, ದಿನನಿತ್ಯದ ಮಾರುಕಟ್ಟೆ, ಹಳೇ ವಸತಿಗೃಹ ತೆರವು, ಕಲಾಮಂದಿರ, ಸಿಸಿಟಿವಿ, ಸಂತೆಮೈದಾನಕ್ಕೆ ಫೇನ್ಸಿಂಗ್ ಮತ್ತು ವಿಶೇಷ ಚೇತನರಿಗೆ ಸವಲತ್ತು ವಿತರಣೆ ಸೇರಿದಂತೆ 3 ಕೋಟಿಗೂ ಅಧಿಕ ಅನುಧಾನದಿಂದ, 1೦ಕ್ಕೂ ಅಧಿಕ ಕಾಮಗಾರಿಗಳಿಗೆ ಗುದ್ದಲಿಪೂಜೆ, ಶಂಕುಸ್ಥಾಪನೆ ಮತ್ತು ಸಲಕರಣೆ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಪದವಿಪೂರ್ವ ಕಾಲೇಜಿನ 4 ಕೋಟಿಯ ಒಳಾಂಗಣ ಕ್ರೀಡಾಂಗಣ 40 ದಿನದೊಳಗೆ ಉದ್ಘಾಟನೆ ಮಾಡ್ತಿನಿ. ಕ್ರೀಡಾಂಗಣ ಅಭಿವೃದ್ದಿಗೆ ಮತ್ತೇ 3 ಕೋಟಿ ಅನುಧಾನ ಮಂಜೂರು ಮಾಡಿಸಿದ್ದೇನೆ. ಕೊರಟಗೆರೆ ಪಟ್ಟಣದ ಸರ್ವೆ ನಂ.181ರಲ್ಲಿ 5 ಎಕರೇ ಭೂಮಿಯಲ್ಲಿ 100ಸೈಟ್ ವಿಂಗಡಿಸಿ ಹಂಚುವ ಕೆಲಸ ಮಾಡ್ತೀವಿ. ಪಪಂ ಸದಸ್ಯರು ತಮ್ಮ ವೈಯಕ್ತಿಕ ಹಿತಾಸಕ್ತಿ ಬದಿಗಿಟ್ಟು ಬಡಜನರ ಅಭಿವೃದ್ದಿಗೆ ಶ್ರಮಿಸಬೇಕಿದೆ ಎಂದರು.
ರಾಜ್ಯದ ಪ್ರತಿ ತಾಲೂಕಿನ ಸಾರ್ವಜನಿಕ ಪ್ರದೇಶದಲ್ಲಿ ಕಡ್ಡಾಯವಾಗಿ ಸಿಸಿಟವಿ ಅಳವಡಿಕೆಗೆ ಪೊಲೀಸ್ ಇಲಾಖೆಗೆ ಸರಕಾರ ಸೂಚಿಸಿದ್ದು, ಕೊರಟಗೆರೆ ಪಟ್ಟಣದ 28 ಕಡೆಗಳಲ್ಲೂ ಸಿಸಿಟಿವಿ ಅಳವಡಿಕೆಗೆ ಚಾಲನೆ ನೀಡಿದ್ದೇನೆ. ಸಿಸಿಟಿವಿ ಅಳವಡಿಕೆ ಪಪಂ, ಪುರಸಭೆ ಮತ್ತು ನಗರಸಭೆಗಳ ಜವಾಬ್ದಾರಿಯು ಆಗಿದೆ. ಕಾನೂನು ವಿರೋಧಿ ಚಟುವಟಿಕೆ ಮತ್ತು ಕ್ರೈಂ ಪ್ರಕರಣ ಬೇದಿಸಲು ಸಿಸಿಟಿವಿ ಬಹುಮುಖ್ಯ ಪಾತ್ರ ವಹಿಸಲಿದೆ ಎಂದರು.
ಈ ವೇಳೆ ಪಪಂ ಮುಖ್ಯಾಧಿಕಾರಿ ಉಮೇಶ್‌ಗೆ ತರಟೆಗೆ ತೆಗೆದುಕೊಂಡ ಸಚಿವರು, "ಪಪಂಯಿಂದ ಪೌರಕಾರ್ಮಿಕರಿಗೆ 3ವರ್ಷದ ಹಿಂದೆ ನಿರ್ಮಾಣ ಮಾಡಿರುವ ನಿವೇಶನ ಹಂಚಿಕೆ ಮಾಡಿಲ್ಲ ಏಕೆ. ನಿವೇಶನ ಹಂಚಿಕೆ ಕಾರ್ಯಕ್ರಮ 15 ದಿನದೊಳಗೆ ಮಾಡದಿದ್ರೇ ನೀನು ಎತ್ತಂಗಡಿ ಆಗ್ತಿಯಾ. ಬೇಗಾ ನಿವೇಶನ ಹಂಚಿಕೆ ಆಗ್ಬೇಕು ಅಷ್ಟೆ. ಗುತ್ತಿಗೆದಾರನ ಜೊತೆ ನಾನು ಮಾತನಾಡ್ತಿನಿ" ಎಂದು ಎಚ್ಚರಿಕೆ ನೀಡಿದರು.
ಇದೇ ಸಂದರ್ಭದಲ್ಲಿ ಪ.ಪಂ ಸದಸ್ಯರು, ವೈಟ್‌ಟಾಪಿಂಗ್ ಸಿಸಿರಸ್ತೆಯ ಪಾದಚಾರಿ ಮಾರ್ಗ, ಸ್ಮಶಾನದ ಟಿಎಸ್‌ಪಿ ಅನುಧಾನ ಬಳಕೆ, ರಂಗಮಂದಿರ, ಆಶ್ರಯ ನಿವೇಶನ ಹಂಚಿಕೆ, ಪೌರಕಾರ್ಮಿಕರಿಗೆ ಮನೆ ಹಸ್ತಾಂತರ, ವಿದ್ಯುತ್ ಚಿತಗಾರ, ಸ್ವಚ್ಚ ಸುವರ್ಣಮುಖಿ ನದಿ ಅಭಿಯಾನ, 30 ಕುಂಟೆ ಜಮೀನು ಸರಕಾರಿ ಶಾಲೆ ಜಮೀನು ರಕ್ಷಣೆ ಮತ್ತು ಅಭಿವೃದ್ದಿಗೆ ಅನುಧಾನ ನೀಡುವಂತೆ ಗೃಹಸಚಿವ ಡಾ.ಜಿ.ಪರಮೇಶ್ವರ್‌ಗೆ ಬೇಡಿಕೆ ಇಟ್ಟರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಶುಭಕಲ್ಯಾಣ್, ಜಿಪಂ ಸಿಇಓ ಜಿ.ಪ್ರಭು, ಎಸ್ಪಿ ಅಶೋಕ್, ಪಪಂ ಪಿಡಿ ಯೋಗಾನಂದ, ವಿಶೇಷಾಧಿಕಾರಿ ಎಸ್.ನಾಗಣ್ಣ, ತಹಶೀಲ್ದಾರ್ ಮಂಜುನಾಥ, ಪಪಂ ಮುಖ್ಯಾಧಿಕಾರಿ ಉಮೇಶ್, ಪಪಂ ಅಧ್ಯಕ್ಷೆ ಅನಿತಾ, ಉಪಾಧ್ಯಕ್ಷೆ ಹುಸ್ಮಪಾರೀಯ, ಸ್ಥಾಯಿಸಮಿತಿ ಅಧ್ಯಕ್ಷೆ ಹೇಮಾಲತ, ಸದಸ್ಯರಾದ ಬಲರಾಮಯ್ಯ, ಓಬಳರಾಜು, ನಂದೀಶ್, ಲಕ್ಷ್ಮಿ ನಾರಾಯಣ್, ಭಾರತಿ, ಕಾವ್ಯರಮೇಶ್, ಪುಟ್ಟನರಸಪ್ಪ ಸೇರಿದಂತೆ ಇತರರು ಇದ್ದರು.
- ಶ್ರೀನಿವಾಸ್ , ಕೊರಟಗೆರೆ