ಎಚ್.ಡಿ.ಕೋಟೆ: ಆಸ್ತಿಯ ಹಕ್ಕು ಖುಲಾಸೆಗೆ ನಕಲು ಸಹಿ ಮಾಡಿ ವಂಚನೆ ಮಾಡುವ ಮೂಲಕ ನಮ್ಮನ್ನು ಬೀದಿ ಪಾಲು ಮಾಡಿದ್ದು, ತಪ್ಪಿತಸ್ಥರನ್ನು ಬಂಧಿಸುವಂತೆ ಜಿ.ಜಿ ಕಾಲೋನಿ ನಿವಾಸಿ ಅಂಗವಿಕಲ ಕೃಷ್ಣಬೋವಿ ಮನವಿ ಮಾಡಿದ್ದಾರೆ.
ಪಟ್ಟಣದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಡುಕೋಟೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಇರುವ ಗೆಂಡೇಗೌಡರ ಕಾಲೋನಿ ಗ್ರಾಮದಲ್ಲಿ ನಮಗೆ ಸೇರಿದ ಪಿತ್ರಾರ್ಜಿತ ಆಸ್ತಿಯಾದ 167 ಚದರ ಮೀಟರ್ ಅಳತೆಯ ನಿವೇಶನದಲ್ಲಿ 81 ಚದರ ಮೀಟರ್ ನಲ್ಲಿ ಆರ್.ಸಿ.ಸಿ ಮನೆಯನ್ನು ಮಗ ಜಯಕೃಷ್ಣ ಹಾಗೂ ಸೊಸೆ ಪುಷ್ಪಾ ಹೆಸರಿನಲ್ಲಿ ಜಂಟಿ ಖಾತೆ ಮಾಡಲಾಗಿತ್ತು.

ನಮ್ಮ ಮನೆಯ ಆಸ್ತಿಯ ಬಗ್ಗೆ ಗ್ರಾಮ ಪಂಚಾಯತಿಯಲ್ಲಿ ನನ್ನ ಮಗ ಜಯಕೃಷ್ಣ ಹೆಸರನ್ನು ಕೈಬಿಡಲಾಗಿತ್ತು, ಇದರ ವಿಚಾರಿಸಿದಾಗ ಎಚ್.ಡಿ.ಕೋಟೆ ಉಪಾ ನೊಂದಣಿ ಕಚೇರಿಯಲ್ಲಿ ನನ್ನ ಮಗನಿಗೆ ತಿಳಿಯದಂತೆ ಸೊಸೆ ಪುಷ್ಪಾ ನನ್ನ ಮಗನ ಆಧಾರ್ ಕಾರ್ಡ್ ಬಳಸಿ ನಮ್ಮ ಗ್ರಾಮದ ರಾಮಕೃಷ್ಣ ಅವರ ಮಗ ರವಿ ಆರ್. ಎಂಬುವವರನ್ನು ನೊಂದಣಿ ಕಚೇರಿಯಲ್ಲಿ ಗಂಡನೆಂದ ಸಹಿ ಮಾಡಿಸಿ ಆಸ್ತಿಯ ಹಕ್ಕು ಖುಲಾಸೆ ಮಾಡಿಸಿರುತ್ತಾರೆ. ಇದಕ್ಕೆ ಗ್ರಾಮದ ಅನಿಲ್ ಕುಮಾರ್ ಹಾಗೂ ರಾಕೇಶ್ ಸಾಕ್ಷಿ ಸಹಿ ಹಾಕಿರುತ್ತಾರೆ. ನೊಂದಣಿ ಆದ ಹಕ್ಕು ಖುಲಾಸೆ ಪತ್ರವನ್ನು ಗ್ರಾಮ ಪಂಚಾಯತಿಗೆ ನೀಡಿ ತನ್ನ ಹೆಸರಿಗೆ ನನ್ನ ಸೊಸೆ ಪುಷ್ಪಾ ಮೈಸೂರಿನ ಖಾಸಗಿ ಬ್ಯಾಂಕ್ ನಲ್ಲಿ ಲಕ್ಷಾಂತರ ರೂ ಸಾಲ ಪಡೆದಿದ್ದಾರೆ. ಇದರಿಂದ ನಮಗೆ ಅನ್ಯಾಯ ಆಗಿದ್ದು, ಸಾಲ ತೀರಿಸಲು ದಾರಿ ಕಾಣದೆ ಕಂಗಾಲಾಗಿದ್ದೇವೆ.

ಈ ನಾಲ್ವರ ವಿರುದ್ಧ ಎಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿ, ಸಂಬಂಧ ಪಟ್ಟ ಅಧಿಕಾರಿಗಳು ಪ್ರಕರಣ ದಾಖಲು ಮಾಡಲು ಮುಂದಾಗದ ಕಾರಣ ಜಿಲ್ಲಾ ಮಟ್ಟದ ಪೊಲೀಸ್ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕ ಮಾಡಿದ ನಂತರ ಪ್ರಕರಣ ದಾಖಲು ಮಾಡಿದ್ದಾರೆ ಆದರೆ ಈವರೆಗೂ ವಂಚನೆ ಮಾಡಿದ ವ್ಯಕ್ತಿಗಳನ್ನು ಬಂಧಿಸದೆ ನಿರ್ಲಕ್ಷಿ ವಹಿಸಿದ್ದಾರೆ. ಹಾಗಾಗಿ ಜಿಲ್ಲಾ ಮಟ್ಟದ ಅಧಿಕಾರಿಗಳು ನಮ್ಮ ನೋವಿಗೆ ಸ್ಪಂದಿಸಿ ನ್ಯಾಯ ಒದಗಿಸುವಂತೆ ಮನವಿ ಮಾಡಿದ್ದಾರೆ.

ಇದೇ ಸಂದರ್ಭದಲ್ಲಿ ಕೃಷ್ಣಬೋವಿ ಮೊಮ್ಮಕ್ಕಳಾದ ಸೌಮ್ಯ ಹಾಗೂ ಪುಟ್ಟಲಕ್ಷ್ಮೀ ಇದ್ದರು.
- ಶಿವಕುಮಾರ, ಕೋಟೆ