ಎಚ್.ಡಿ.ಕೋಟೆ: ಸಾರಿಗೆ ಬಸ್ ಡಿಕ್ಕಿಯಾಗಿ ಪಾದಚಾರಿ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಎಚ್.ಡಿ.ಕೋಟೆ ಹೈರಿಗೆ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಸಣ್ಣೇಗೌಡ (ಮೃತ ದುರ್ದೈವಿ) ಬ್ಯಾಂಕ್ ಕೆಲಸದ ನಿಮ್ಮಿತ್ತ ಮಾದಾಪುರ ಗ್ರಾಮಕ್ಕೆ ತೆರಳುತ್ತಿದ್ದ ಸಂದರ್ಭ ಸರಗೂರು-ಮೈಸೂರು ತಡೆ ರಹಿತ ಸಾರಿಗೆ ಬಸ್, ಹಿಂಬದಿಯಿಂದ ಪಾದಚಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಸಣ್ಣೇಗೌಡಗೆ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಗ್ರಾಮಸ್ಥರೆಲ್ಲರೂ ಘಟನೆ ಖಂಡಿಸಿ ಮೈಸೂರು-ಮಾನಂದವಾಡಿ ಮುಖ್ಯ ರಸ್ತೆಯನ್ನು ಕೆಲಕಾಲ ತಡೆದು ಪ್ರತಿಭಟಿಸಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಸರ್ಕಲ್ ಇನ್ಸ್ ಪೆಕ್ಟರ್ ಗಂಗಾಧರ್, ಡಿಪೋ ಮ್ಯಾನೇಜರ್ ಮಹ ದೇವಪ್ರಸಾದ್, ಕೆಎಸ್ಆರ್ ಟಿಸಿ ಅಧಿಕಾರಿಗಳಾದ ಯೋಗೇಶ್, ಉಮೇಶ್ ಪ್ರತಿಭಟನಾ ನಿರತರೊಂದಿಗೆ ಮಾತನಾಡಿ ಸ್ಥಳದಲ್ಲಿಯೇ ಐವತ್ತು ಸಾವಿರ ರೂ, ಪರಿಹಾರ ನೀಡಿದರು. ಹೆಚ್ಚಿನ ತನಿಖೆ ನಡೆಸಿ ಚಾಲಕನ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಈ ಸಂಬಂಧ ಎಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- ಶಿವಕುಮಾರ,ಕೋಟೆ